‘ಮೂಲ್ಕಿ ಸೀಮೆ ಅರಸು ಕಂಬುಲ’ ಶೀರ್ಷಿಕೆಯ ಪುಸ್ತಕವು ಅಕ್ಟೋಬರ್ 24 ರಂದು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಲೋಕಾರ್ಪಣೆಗೊಂಡಿದ್ದು, ಅದರ ಮರು ಅನಾವರಣ ಮುಂಬಯಿಯ ಪ್ರತಿಷ್ಠಿತ ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ವತಿಯಿಂದ ಡಿಸೆಂಬರ್ 20 ರಂದು ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ದಿವ್ಯ ಹಸ್ತದಿಂದ ಮಾಜಿ ಅಧ್ಯಕ್ಷರುಗಳು, ವಿಶ್ವಸ್ಥರು, ಪ್ರಧಾನ ಕಾರ್ಯಕಾರಿ ಸಮಿತಿ ಮತ್ತು ಸಮಿತಿ ಸದಸ್ಯರ ಸಮಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಪುಸ್ತಕದ ಪರಿಚಯ ಮಾಡಿದರೆ ನಂತರದಲ್ಲಿ ಆ ಪುಸ್ತಕದ ಪ್ರತಿಗಳನ್ನು ನಾಮಮಾತ್ರ ಬೆಲೆಗೆ ಎಲ್ಲಾ ಸೇರಿದ ಸಭಿಕರಿಗೆ ಹಂಚಲಾಯಿತು. ಬಂಟ ಸಮಾಜದ ಐತಿಹಾಸಿಕ ವೀರಪುರುಷ ಅಗೋಳಿ ಮಂಜಣ್ಣನಿಂದ ಪ್ರಾರಂಭವಾಗಿ ಆನಂತರದಲ್ಲಿ 1973 ರಿಂದ ಅರಸು ಕಂಬಳ ಸಮಿತಿಯಿಂದ ನಡೆದುಕೊಂಡು ಬಂದಿದೆ ಎಂದು ಐತಿಹಾಸಿಕ ಹಿನ್ನಲೆಯಿರುವ ಮುಲ್ಕಿ ಸೀಮೆಯ ಅರಸು ಕಂಬಳದ ಬಗೆಗೆ ಸರಿಸುಮಾರು ಐವತ್ತು ವರ್ಷಗಳ ವಿಸ್ತೃತ ಅನುಭವವನ್ನು ತೆರೆದಿಟ್ಟಿರುವ ಈ ಪುಸ್ತಕಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಹಾಗೂ ಮುಲ್ಕಿ ಅರಸು ಕಂಬಳದ ಮಹಾಪೋಷಕರಾದ ಎನ್ ವಿನಯ ಹೆಗ್ಡೆಯವರ ಮುನ್ನುಡಿಯಿದೆ. ಮುಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರ ಶುಭ ಹಾರೈಕೆಗಳಿರುವ ಈ ಪುಸ್ತಕವು ಗೌರವ ಸಂಪಾದಕರಾದ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್ ಅವರ ನಲ್ವತ್ತು ವರ್ಷಗಳ ಸುದೀರ್ಘ ನಾಯಕತ್ವದಲ್ಲಿ ನಡೆದ ಕಂಬಳಗಳ ವಿವರಗಳು ಹಾಗೂ ಕಂಬಳದ ಯಶಸ್ಸಿಗೆ ಕಾರಣರಾಗಿರುವ ಅನೇಕಾನೇಕ ಹಿರಿಯ ಕಿರಿಯರ ಕೊಡುಗೆಗಳನ್ನು ಶ್ರಮ, ಶ್ರದ್ಧೆ ಬದ್ಧತೆಗಳನ್ನು ಮುಲ್ಕಿ ಸೀಮೆ ಅರಸು ಕಂಬಳ ಸಮಿತಿಯನ್ನು ಬೆಂಬಲಿಸಿದ ಎಲ್ಲರ ಕೊಡುಗೆಗಳನ್ನು ದಾಖಲಿಸಿದೆ. ತುಳುನಾಡಿನ ವಿಶಿಷ್ಟ ಕ್ರೀಡೆ ಕಂಬಳದ ಪರಿಚಯಾತ್ಮಕ ಲೇಖನ, ಅರಸು ಕಂಬಳದ ಇತಿಹಾಸದ ಕುರಿತಾದ ಲೇಖನ, ಕಂಬಳದ ಕೋಣಗಳ ಸಾಕುವಿಕೆ, ಉಸ್ತುವಾರಿ, ಅರಸು ಕಂಬಳದ ಸಾಂಸ್ಕೃತಿಕ ಮಹತ್ವ ಕಂಬಳದ ಬಗ್ಗೆ ಊರವರ ಅನುಭವದ ಬಗೆಗೆ ಲೇಖನಗಳನ್ನು ಈ ಪುಸ್ತಕ ಹೊಂದಿದೆ.
ಪತ್ರಕರ್ತ ಕೆ.ಎಸ್. ಉಪಾಧ್ಯಾಯ, ಇತಿಹಾಸಕಾರ ಡಾ. ಕೆ.ಜಿ ವಸಂತ ಮಾಧವ, ಅಕ್ಷತಾ ನವೀನ್ ಶೆಟ್ಟಿ, ಸುರೇಶ್ ರಾವ್ ಅತ್ತೂರು ಅವರ ಈ ಲೇಖನಗಳ ಜೊತೆಗೆ ಸಕ್ರಿಯವಾಗಿ ಕಂಬಳದ ಆಯೋಜನೆಯಲ್ಲಿ ಭಾಗವಹಿಸಿದ ಮನ್ಸೂರ್, ಉತ್ರುಂಜೆ ಭುಜಂಗ ಶೆಟ್ಟಿ ಹಾಗೂ ಖಂಡಿಗೆ ಗೋಪಾಲಕೃಷ್ಣ ಸರ್ವೋತ್ತಮ ಪ್ರಭು ಅವರ ಅನುಭವದ ನುಡಿಗಳೂ ಈ ಪುಸ್ತಕಕ್ಕೆ ಕಳೆ ಕೊಟ್ಟಿವೆ. ಡಾ. ಸಾಯಿಗೀತಾ ಹೆಗ್ಡೆ, ಜಯಲಕ್ಷ್ಮಿ ಶೆಟ್ಟಿ ಹಾಗೂ ಶ್ರುತಿ ಅಮೀನ್ ಇದರ ಸಂಪಾದಕರು. ಮುಂಬಯಿಯ ಕೊಡುಗೈ ದಾನಿಗಳು ಅರ್ಧ ಶತಮಾನ ಕಾಲ ಕಂಬಳದ ಸುಸೂತ್ರ ಆಯೋಜನೆಗೆ ಕಾರಣರಾದಂತೆ, ಅದರ ದಾಖಲಾತಿ ಮಾಡಿರುವ ಈ ಪುಸ್ತಕವನ್ನೂ ಪ್ರೀತಿಯಿಂದ ಸ್ವಾಗತಿಸಿರುವುದು ಮನ ತಟ್ಟಿದೆಯೆಂದು ಗೌರವ ಸಂಪಾದಕರು ಧನ್ಯತೆಯ ನುಡಿಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಬಹು ವರ್ಷಗಳಿಂದ ಅರಸು ಕಂಬಳಕ್ಕೆ ತನು ಮನ ಧನಗಳಿಂದ ಸಹಕರಿಸಿ, ಪುಸ್ತಕದ ಮರು ಬಿಡುಗಡೆಯನ್ನು ಆಯೋಜಿಸಿದ ಪ್ರಸ್ತುತ ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿ ಮತ್ತು ಸರ್ವ ಆಡಳಿತ ಕಾರ್ಯಕಾರಿ ಸಮಿತಿ, ಮಾಜಿ ಅಧ್ಯಕ್ಷರುಗಳಿಗೆ, ವಿಶ್ವಸ್ಥರಿಗೆ, ಸದಸ್ಯರಿಗೆಲ್ಲರಿಗೂ ಹೃತ್ಪೂರ್ವಕವಾಗಿ ನಮನಗಳನ್ನು ಸಲ್ಲಿಸಿದ್ದಾರೆ.


















































































































