ಆಳ್ವಾಸ್ ಸ್ವಾಯತ್ತಾ ಕಾಲೇಜಿನ ಮಾನವಿಕ ವಿಭಾಗದ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಕುವೆಂಪು ಸಭಾಂಗಣದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್, ವಿದ್ಯಾರ್ಥಿಗಳು ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿನ್ನೆ ಪಡೆದ ಅನುಭವಗಳನ್ನು ಮಾರ್ಗದರ್ಶಿಯಾಗಿ ತೆಗೆದುಕೊಂಡು, ನಾಳೆಯ ಸವಾಲುಗಳನ್ನು ಸ್ವೀಕರಿಸಿ, ಜವಾಬ್ದಾರಿಯುತ ನಾಗರೀಕರಾಗಿ ರೂಪುಗೊಳ್ಳಬೇಕು ಎಂದರು. ಸ್ಪರ್ಧೆಗಳು, ಚರ್ಚೆಗಳು ಮತ್ತು ಸಂವಾದಗಳ ಮೂಲಕ ಸಂವಿಧಾನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಸಂವಿಧಾನದ ಮೌಲ್ಯಗಳನ್ನು ಗೌರವಿಸಿ, ಪಾಲಿಸಿ, ಮುಂದಿನ ಪೀಳಿಗೆಗೆ ಬಲಿಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಎಲ್ಲರೂ ಸೇರಿ ಕೈಗೊಳ್ಳೋಣ ಎಂದರು. ಸಂವಿಧಾನವು ಎಲ್ಲವನ್ನೂ ನೀಡಿದ್ದರೂ, ನಾವು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲಿ ಎಡವಿದ್ದೇವೆ. ಸಮಾಜದಲ್ಲಿ ಇನ್ನೂ ಅಸಮಾನತೆ, ಬಡತನ ಮತ್ತು ಅನ್ಯಾಯಗಳು ನಡೆಯುತ್ತಿವೆ. ಕೆಲವರಲ್ಲಿ ಸಂಪತ್ತಿನ ಅತಿಯಾದ ಸಂಗ್ರಹಣೆಯಾದರೆ, ಇನ್ನೂ ಹಲವರು ಮೂಲಭೂತ ಅಗತ್ಯಗಳಿಗೂ ಹೋರಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಗಳನ್ನು ನೆನಪಿಸಿಕೊಳ್ಳುವುದು ಅಗತ್ಯ ಎಂದರು.

ಸಂವಿಧಾನ ದಿನಾಚರಣೆಯ ಅಂಗವಾಗಿ ಟ್ರೇಷರ್ ಹಂಟ್, ಕ್ವಿಜ್, ರೀಲ್ಸ್ ಮೇಕಿಂಗ್, ಪ್ರಬಂಧ ಸ್ಪರ್ಧೆ ಹಾಗೂ ಕೊಲಾಜ್ ಮೇಕಿಂಗ್ ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದಲ್ಲಿ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ.ಎಸ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಚಂದ್ರಶೇಖರ ಮಯ್ಯ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಈಶ್ವರ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥೆ ಅಶ್ವಿನಿ, ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಜೋಸ್ವಿಟಾ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಸುದೀಪ್ ಬುನ್ನನ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು. ಸಮೀಕ್ಷಾ ಕಾರ್ಯಕ್ರಮ ನಿರೂಪಿಸಿ, ಸೌಮ್ಯ ಸ್ವಾಗತಿಸಿ, ಅಪ್ರೋಜ್ ವಂದಿಸಿದರು. ಸ್ಪರ್ಧೆಯಲ್ಲಿ ಕಾಲೇಜಿನ 109 ವಿದ್ಯಾರ್ಥಿಗಳು ಪಾಲ್ಗೊಂಡರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

















































































































