ಹಲವಾರು ಅನಿವಾಸಿ ಕನ್ನಡಿಗರ ಸಂಘಟನೆಗಳು ಡಾ| ರೊನಾಲ್ಡ್ ಕೊಲಾಸೊ ಅವರ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. 2023 ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಎರಡು ಪ್ರಮುಖ ಚುನಾವಣಾ ಭರವಸೆಗಳಾಗಿದ್ದ ಅನಿವಾಸಿ ಕನ್ನಡಿಗರ ವ್ಯವಹಾರಗಳಿಗೆ ಪ್ರತ್ಯೇಕ ಸಚಿವಾಲಯ ಮತ್ತು ಇಲಾಖೆಯ ರಚನೆ ಹಾಗೂ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಥವಾ ರಾಜ್ಯಕ್ಕೆ ಶಾಶ್ವತವಾಗಿ ಸ್ಥಳಾಂತರಗೊಳ್ಳಲು ಬಯಸುವ ಅನಿವಾಸಿ ಕನ್ನಡಿಗರನ್ನು ಬೆಂಬಲಿಸಲು 1,000 ಕೋ. ರೂ. ಮೊತ್ತದ ನಿಧಿ ಸ್ಥಾಪನೆ ಬಗ್ಗೆ ಸರಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಸರಕಾರ ರಚನೆಯಾಗಿ 2.5 ವರ್ಷ ಕಳೆದಿದ್ದರೂ ಈ ಭರವನೆಗಳನ್ನು ಈಡೇರಿಸದೆ ಇರುವುದು ನಮಗೆಲ್ಲ ತುಂಬಾ ಬೇಸರ ಉಂಟು ಮಾಡಿದೆ. ಈ ಭರವಸೆಗಳು ಈಡೇರಿದ್ದರೆ ರಾಜ್ಯಕ್ಕೆ ಹಾಗೂ ಅನಿವಾಸಿ ಕನ್ನಡಿಗರಿಗೂ ತುಂಬಾ ಅನುಕೂಲ ಆಗುತ್ತಿತ್ತು. ಆದ್ದರಿಂದ ಈ ಎರಡು ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇವೆರಡು ಕಾರ್ಯರೂಪಕ್ಕೆ ಬಂದರೆ ಹೂಡಿಕೆ, ಕುಂದು ಕೊರತೆ ಪರಿಹಾರ, ಆಸ್ತಿ ವಿವಾದಗಳು, ಕಾನೂನು ಸಹಾಯಕ್ಕಾಗಿ ರಚನಾತ್ಮಕ ಬೆಂಬಲ ನೀಡಲು ಸಹಾಯವಾಗಲಿದೆ. ಪ್ರವಾಸೋದ್ಯಮ ಸಹಿತ ವಿವಿಧ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಅನುಕೂಲವಾಗಲಿದೆ. ಉದ್ಯಮಗಳು, ಸ್ಟಾರ್ಟ್ ಅಪ್ಗಳು ಮತ್ತು ಕೌಶಲ ಆಧಾರಿತ ಉಪಕ್ರಮಗಳನ್ನು ಸ್ಥಾಪಿಸಲು ಮುಂದಾಗುವ ಅನಿವಾಸಿ ಕನ್ನಡಿಗರಿಗೆ ತುಂಬಾ ಅನುಕೂಲವಾಗಿ, ಹೊಸ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ. ಊರಿಗೆ ಮರಳಲು ಬಯಸುವ ಅನಿವಾಸಿ ಕನ್ನಡಿಗ ಉದ್ಯಮಿಗಳಿಗೂ ಹೊಸ ಪ್ರೋತ್ಸಾಹ ನೀಡಿದಂತಾಗಲಿದೆ. ಹೀಗೆ ರಾಜ್ಯಕ್ಕೆ ಹಾಗೂ ಅನಿವಾಸಿ ಕನ್ನಡಿಗರಿಗೆ ಅನೇಕ ರೀತಿಯಲ್ಲಿ ಅನುಕೂಲ ಮಾಡಿಕೊಡಲಿರುವ ಈ ಎರಡು ಭರವಸೆಗಳನ್ನು ಕೂಡಲೇ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಕೆ.ಎನ್.ಆರ್.ಐ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿ, ಅಬುದಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುದಾಬಿ, ಮೂಡಂಬೈಲ್ ರವಿ ಶೆಟ್ಟಿ ಕತಾರ್, ಝಕಾರಿಯ ಜೋಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
















































































































