ಖ್ಯಾತ ಯಕ್ಷಗಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಸ್ಥಾಪಿಸಲ್ಪಟ್ಟ ಯಕ್ಷಧ್ರುವ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ದೇರಳಕಟ್ಟೆ ಕಂಫರ್ಟ್ಸ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಈ ಶಾಖೆಯನ್ನು ದೇರಳಕಟ್ಟೆಯ ಮುಖ್ಯಪೇಟೆಗೆ ಸ್ಥಳಾಂತರಿಸಲಾಯಿತು. ಶಾಖೆಯ ಉದ್ಘಾಟನೆಯನ್ನು ಕಂಫರ್ಟ್ಸ್ ಬಿಲ್ಡಿಂಗ್ ಮಾಲಕರಾದ ಲ| ಚಂದ್ರಹಾಸ ಶೆಟ್ಟಿ ನೆರವೇರಿಸಿದರು. ದೇರಳಕಟ್ಟೆಯಲ್ಲಿ ಪ್ರಥಮ ಶಾಖೆಯನ್ನು ತೆರೆದು ಮಂಗಳೂರಿನ ಪಂಪ್ ವೆಲ್ ನಲ್ಲಿ ಎರಡನೇ ಶಾಖೆಯನ್ನು ಸ್ಥಾಪಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಯಕ್ಷಧ್ರುವ ಸೌಹಾರ್ದ ಸೊಸೈಟಿಗೆ ಶುಭವನ್ನು ಹಾರೈಸಿದರು. ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ, ಪಟ್ಲ ಫೌಂಡೇಶನ್ನಿನ ಸಂಘಟನಾ ಕಾರ್ಯದರ್ಶಿಯಾಗಿರುವ ಪ್ರದೀಪ್ ಆಳ್ವ ಕದ್ರಿ ದೀಪ ಬೆಳಗಿಸಿದರು.

ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಅವರು ಸಂಸ್ಥೆಯು ಕಳೆದ ಒಂದು ವರ್ಷದ ಅವಧಿಯಲ್ಲಿ ನಮ್ಮ ನಿರೀಕ್ಷೆಯನ್ನು ಮೀರಿ ಲಾಭವನ್ನು ಗಳಿಸಿರುತ್ತದೆ. ಇದಕ್ಕೆ ಸಂಘದ ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿ ವರ್ಗದವರು ಕಾರಣಕರ್ತರಾಗಿರುತ್ತಾರೆ. ಮುಂದಕ್ಕೂ ಸರ್ವ ಸಹಕಾರವು ಇದೇ ರೀತಿ ಮುಂದುವರೆಯಲಿ ಎಂದರು. ಕರ್ನಾಟಕ ಸರಕಾರದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಇದರ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಪ್ರಥಮ ಠೇವಣಿಗೆ ಚಾಲನೆಯನ್ನು ನೀಡಿದರು. ನಿರ್ದೇಶಕರುಗಳಾದ ಮಾತಾ ಬಿಲ್ಡರ್ ಇದರ ಮಾಲಕರಾದ ಸಂತೋಷ್ ಕುಮಾರ್ ಶೆಟ್ಟಿ, ರವಿಚಂದ್ರ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು. ಉಪಾಧ್ಯಕ್ಷ ಅಡ್ಯಾರ್ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ತನುಜಾ ಜೆ ಅಡ್ಯಂತಾಯ ವಂದಿಸಿದರು.














































































































