ರೋಟರಿ ಹಾಗೂ ರೋಟರಿ ಆನ್ಸ್ ಕ್ಲಬ್ ಕಾರ್ಕಳವು ಅರುಣೋದಯ ಸ್ಪೆಷಲ್ ಸ್ಕೂಲ್ ಕಾರ್ಕಳದಲ್ಲಿ “ದೇವರ ಮಕ್ಕಳೊಂದಿಗೆ ನಮ್ಮ ಸಮಯ” ಎಂಬ ವಿಶೇಷ ಸೇವಾ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿತ್ತು. ಪ್ರಿಸಿಲ್ಲಾ ಪೆರೇರಾ ಅವರು ಸ್ನೇಹಭಾವದ ಸ್ವಾಗತ ಭಾಷಣದೊಂದಿಗೆ ಆರಂಭಿಸಿದರು. ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿ ಶ್ರೀಮತಿ ಕಾಂತಮ್ಮ ಅವರು ಮನೋಹರವಾಗಿ ನಿರೂಪಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೋಟೇರಿಯನ್ ರೇಖಾ ಉಪಾಧ್ಯಾಯ ಅವರು ಆಗಮಿಸಿ ಮಕ್ಕಳಿಗೆ ಪ್ರೋತ್ಸಾಹದ ಸಂದೇಶ ನೀಡಿ, ಸಮಾಜದಲ್ಲಿ ವಿಶೇಷ ಮಕ್ಕಳ ಅಭಿವೃದ್ದಿಗೆ ಅಗತ್ಯವಿರುವ ಸಂವೇದನೆ ಮತ್ತು ಸಹಕಾರದ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಆನ್. ಜ್ಯೋತಿ ಚೇತನ್ ಅವರು ಮನೋಜ್ಞವಾಗಿ ಮಂಡಿಸಿದರು. ಆನ್ಸ್ ಅಧ್ಯಕ್ಷೆ ಜಯಂತಿ ಆನಂದ್ ನಾಯಕ್ ರವರು ಮಕ್ಕಳ ಬಗ್ಗೆ ಪ್ರೋತ್ಸಾಹದ ಮಾತುಗಳನ್ನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.

ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷರಾದ ಕೆ. ನವೀನ್ ಚಂದ್ರ ಶೆಟ್ಟಿ ಅವರು ಮಕ್ಕಳೊಂದಿಗೆ ಸಂವಾದಿಸಿ, ಅವರ ಪ್ರತಿಭೆಯನ್ನು ಶ್ಲಾಘಿಸಿ, ಪ್ರೋತ್ಸಾಹದ ಮಾತು ಹೇಳಿದರು. ಸಮಾರಂಭದಲ್ಲಿ ಅಗತ್ಯ ವಸ್ತುಗಳನ್ನು ಮಕ್ಕಳಿಗೆ ಹಾಗೂ ಶಾಲೆಗೆ ವಿತರಿಸಲಾಯಿತು. ವಿಶೇಷ ಆಕರ್ಷಣೆಯಾಗಿದ್ದ ದೇವರ ಮಕ್ಕಳ ಜೊತೆ ನಮ್ಮಸಮಯ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳು ದೇಶಭಕ್ತಿ ಗೀತೆಗೆ ಡ್ಯಾನ್ಸ್ ಮಾಡುವುದರ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದರು. ಸಮಾರಂಭದಲ್ಲಿ ರೋಟರಿ ಸದಸ್ಯರು, ರೋಟರಿ ಆನ್ಸ್ ಸದಸ್ಯೆರು, ಶಿಕ್ಷಕರು ಶಾಲಾ ಸಿಬ್ಬಂದಿ, ಶಾಲಾ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಹನುಮಂತಪ್ಪ ಅವರು ಧನ್ಯವಾದ ಅರ್ಪಿಸಿದರು.











































































































