ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ವೇದಿಕೆ ಸಕ್ಷಮ ಹಾಗೂ ಐಎಪಿಇಎನ್ ಸಂಸ್ಥೆಯ ಮಂಗಳೂರು ಘಟಕದ ಸಹಯೋಗದಲ್ಲಿ ಗುರುವಾರ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಮಹಿಳಾ ಆರೋಗ್ಯದ ಕುರಿತು ಒಂದು ದಿನದ ರಾಷ್ಟ್ರೀಯ ಸಮಾವೇಶ ನಡೆಯಿತು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಕ್ಷೇಮವನ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್, ಇಂದಿನ ಮಹಿಳೆ ಶಿಕ್ಷಣದಲ್ಲಿ ಮೇಲುಗೈ ಸಾಧಿಸಿದ್ದರೂ, ಜಾಗತಿಕ ಮಟ್ಟದಲ್ಲಿ ಕೇವಲ 15% ಮಹಿಳೆಯರು ಉನ್ನತ ಕಂಪೆನಿಗಳ ಪ್ರಮುಖ ನಿರ್ವಹಣಾ ಸ್ಥಾನದಲ್ಲಿದ್ದಾರೆ. ಮಹಿಳೆಯರಿಂದ ಮುನ್ನಡೆಸುವ ಸಂಸ್ಥೆಗಳು ಹೆಚ್ಚಿನ ಉತ್ಪಾದಕತೆ ಮತ್ತು ಕಾರ್ಯಕ್ಷಮತೆ ತೋರುತ್ತಿದ್ದರೂ ಮಹಿಳೆಯರ ನಾಯಕತ್ವ ಪ್ರತಿನಿಧಿತ್ವದಲ್ಲಿ ಗಣನೀಯ ಏರಿಕೆ ಕಂಡುಬಂದಿಲ್ಲ ಎಂದರು. ಮುಟ್ಟಿನ ರಜಾ ನೀತಿ ಪ್ರಗತಿ ಶೀಲವಾದರೂ, ಕಾರ್ಯಕ್ಷಮತೆಯ ಕೊರತೆ ಎಂಬ ಭಾವನೆಯನ್ನು ಮೂಡಿಸಬಹುದು ಎಂದರು. ಸ್ತ್ರೀರೋಗ ತಜ್ಞೆ ಡಾ. ಅಖಿಲಾ ವಾಸುದೇವನ್ ಮಾತನಾಡಿ, ಪ್ರೌಢಾವಸ್ಥೆಯಲ್ಲಿ ಹೆಣ್ಣುಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ. ಈ ಸಮಯದಲ್ಲಿ ಪಾಲಕರ ಮಾರ್ಗದರ್ಶನ ಅತೀ ಅಗತ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮ ಮತ್ತು ಸರಿಯಾದ ಆಹಾರ ಪದ್ಧತಿಗಳನ್ನು ಪಾಲಿಸುವುದು ಅಗತ್ಯ ಎಂದು ಸಲಹೆ ನೀಡಿದರು.

ಪೌಷ್ಟಿಕಾಂಶ ತಜ್ಞೆ ಡಾ. ಶಿಲ್ಪಾ ವರ್ಮಾ ಮಾತನಾಡಿ, 60-70% ಮಹಿಳೆಯರಲ್ಲಿ ರಕ್ತ ಹೀನತೆ ಸಾಮಾನ್ಯ ಸಮಸ್ಯೆಯಾಗಿರುತ್ತದೆ. ವಿಟಮಿನ್ ಬಿ12, ವಿಟಮಿನ್ ಡಿ ಹಾಗೂ ಒಮೆಗಾ-3 ಕೊರತೆ ಇದಕ್ಕೆ ಮುಖ್ಯ ಕಾರಣ ಎಂದರು. ಶಿಕ್ಷಣ ತಜ್ಞೆ ಡಾ. ಮಂಜುಳಾ ಎಂ. ವೈ ಮಾತನಾಡಿ, ಭಾರತೀಯ ತತ್ವಶಾಸ್ತ್ರದ ಅರ್ಥನಾರೀಶ್ವರ ತತ್ವವನ್ನು ಉಲ್ಲೇಖಿಸಿ, ಇದು ಪುರುಷ ಸ್ತ್ರೀ ಶಕ್ತಿಗಳ ಸಮತೋಲನ ಮತ್ತು ಪರಸ್ಪರ ಪೂರಕತೆಯ ಸಂಕೇತ. ಶಿವ ಪಾರ್ವತಿಯ ಏಕತ್ವವು ಕೇವಲ ಭಕ್ತಿ ಭಾವದ ಸಂಕೇತವಲ್ಲ. ಪುರುಷ ಆಧಿಪತ್ಯದ ಆಲೋಚನೆಗೆ ಸ್ಪಷ್ಟ ಸಂದೇಶವೂ ಹೌದು ಎಂದರು. ಪ್ರತಿಯೊಬ್ಬರು ದೈಹಿಕವಾಗಿ ಒಬ್ಬರಿಗಿಂತ ಇನ್ನೊಬ್ಬರು ಭಿನ್ನರು. ಶೇ. 50ರಷ್ಟು ಯುವತಿಯರು ತಮ್ಮ ದೇಹದ ಆಕಾರದ ಕುರಿತು ಚಿಂತಿಸುತ್ತಾರೆ. ಇಂತಹ ಒತ್ತಡಗಳು ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ, ವಿಶೇಷವಾಗಿ ಹದಿಹರೆಯದವರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದರು. ಯೋಗ ತಜ್ಞೆ ಕವಿತಾ ವೆಂಕಟಾಚಲಂ ವಿ ಮಹಿಳೆಯರ ದೈಹಿಕ ಮಾನಸಿಕ ಸಮತೋಲನದಲ್ಲಿ ನೈಸರ್ಗಿಕ ಚಿಕಿತ್ಸೆಗಳ ಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಗ್ರೀಷ್ಮ ವಿವೇಕ್ ಆಳ್ವ, ಮಹಿಳೆಯರು ತಮ್ಮ ಆರೋಗ್ಯದ ಕುರಿತು ಸದಾ ಗಮನ ಹರಿಸಬೇಕು. ಒಂದು ಕುಟುಂಬದಲ್ಲಿ ತಾಯಿ ಆರೋಗ್ಯವಂತಳಾಗಿದ್ದರೆ ಅವರ ಸಂಪೂರ್ಣ ಕುಟುಂಬವೂ ಆರೋಗ್ಯಪೂರ್ಣವಾಗಿರಲು ಸಾಧ್ಯ ಎಂದರು. ಬೆಂಗಳೂರು ಮೂಲದ ವೆಲ್ನೆಸ್ ಎಜುಕೇಟರ್ ಸ್ಮಿತಾ ವರ್ಷಾ ಎಂ.ಯು ಮಾತನಾಡಿದರು. ರಾಷ್ಟ್ರೀಯ ಸಮಾವೇಶದಲ್ಲಿ ವಿವಿಧ ಭಾಗಗಳಿಂದ 850ಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಉಪನ್ಯಾಸಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಸಕ್ಷಮ ವೇದಿಕೆಯ ಅಧ್ಯಕ್ಷೆ ಡಾ. ಅರ್ಚನಾ ಪ್ರಭಾತ್ ಇದ್ದರು. ಕಾರ್ಯಕ್ರಮವನ್ನು ಹಿಸಾನತ್ ಮನೋರತ್ ನಿರೂಪಿಸಿ, ಸಕ್ಷಮದ ಕಾರ್ಯದರ್ಶಿ ಡಾ. ದೀಪಾ ಕೊಠಾರಿ ವಂದಿಸಿದರು.










































































































