ಬೊರಿವಲಿ ಪಶ್ಚಿಮದ ಜಯರಾಜ್ ನಗರದಲ್ಲಿರುವ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವೆಂಬರ್ 17 ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಮಂತೂರು ನಡಿಗುತ್ತು ಡಾ. ಪಿ.ವಿ. ಶೆಟ್ಟಿ ಮತ್ತು ಅವರ ಪರಿವಾರದವರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮವಾದ ರಂಗಪೂಜೆಯನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಡಾ. ಪಿ.ವಿ. ಶೆಟ್ಟಿಯವರಿಗೆ ದೇವಸ್ಥಾನದ ವತಿಯಿಂದ ಸನ್ಮಾನ ಕಾರ್ಯಕ್ರಮವೂ ನಡೆಯಿತು.ಪುರೋಹಿತರಾದ ಕಲ್ಲಮುಂಡ್ಕೂರು ವಿನಾಯಕ ಭಟ್, ಕೃಷ್ಣ ಮೂರ್ತಿ ಭಟ್, ಪ್ರಶಾಂತ್ ಭಟ್ (ಉಡುಪಿ) ಮತ್ತು ವಿಪ್ರವೃಂದರು ರಂಗಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಡಾ. ಪಿ.ವಿ. ಶೆಟ್ಟಿಯವರೊಂದಿಗೆ ಅವರ ಸಹಧರ್ಮಿಣಿ ಶಕೀಲಾ ಶೆಟ್ಟಿ ಮತ್ತು ಪುತ್ರಿ ಅನೀಷಾ ಶೆಟ್ಟಿ ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ರಂಗಪೂಜೆಯ ಬಳಿಕ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ ಯವರು ಡಾ. ಪಿ.ವಿ. ಶೆಟ್ಟಿಯವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ ಅಭಿನಂದಿಸಿದರು.

ಸನ್ಮಾನಿತರನ್ನು ಉದ್ದೇಶಿಸಿ ಮಾತನಾಡಿದ ಪ್ರದೀಪ್ ಸಿ. ಶೆಟ್ಟಿ ಅವರು, ಡಾ. ಪಿ.ವಿ. ಶೆಟ್ಟಿ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಸತ್ಯನಿಷ್ಠೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಾತ್ಯಾತೀತವಾಗಿ ಬಡವರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿರುವ ಅವರು, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ ಮತ್ತು ಧಾರ್ಮಿಕ ಸತ್ಕಾರ್ಯಗಳ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಮತ್ತು ಕ್ರೀಡಾ ಕ್ಷೇತ್ರಕ್ಕೆ ಅವರು ನೀಡಿರುವ ಅನುಪಮ ಕೊಡುಗೆಯನ್ನು ಕರ್ನಾಟಕ ಸರ್ಕಾರ ಗುರುತಿಸಿ, 2025 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಮಹಾನಗರದ ಸರ್ವ ತುಳು ಕನ್ನಡಿಗರಿಗೆ ಅಭಿಮಾನ ತಂದಿದೆ ಎಂದು ಶ್ಲಾಘಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ. ಪಿ.ವಿ. ಶೆಟ್ಟಿ ಅವರು, ಸಮಾಜ ಸೇವೆ ಎಂಬುದು ಬದುಕಿನ ಸಹಜ ಧರ್ಮವಾಗಿದೆ. ತಮ್ಮ ಪರಿಶ್ರಮದ ಸೇವೆಯು ದುರ್ಬಲ ವರ್ಗದ ಜನರಿಗೆ ತಲುಪಿದಾಗ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸಮಾಜ ಸೇವೆ ಆತ್ಮ ಮತ್ತು ಪರಮಾತ್ಮ ಇಬ್ಬರಿಗೂ ಸಂತುಷ್ಟವಾದಾಗ ಪ್ರತಿಫಲ ಸಾಕ್ಷಾತ್ಕಾರಗೊಳ್ಳುತ್ತದೆ. ಮಹಾನಗರದ ತುಳು-ಕನ್ನಡಿಗರ ಆಶೋತ್ತರದ ಫಲವಾಗಿ ಕರ್ನಾಟಕ ಸರ್ಕಾರ ತಮ್ಮ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ, ಇದು ತಮ್ಮ ಬದುಕಿನ ಸಂತೋಷದ ಕ್ಷಣ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ. ಪಿ.ವಿ. ಶೆಟ್ಟಿ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಆಡಳಿತ ಮೊಕ್ತೇಸರರಾದ ಪ್ರದೀಪ್ ಸಿ. ಶೆಟ್ಟಿ ಅವರಿಗೆ ಶ್ರೀ ತಿರುಪತಿ ದೇವರ ಮೂರ್ತಿಯನ್ನು ನೀಡಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಸಮಾಜದ ಹಲವಾರು ಗಣ್ಯರು, ಸಮಾಜ ಸೇವಕರು ಮತ್ತು ಶ್ರೀ ಮಹಿಷಮರ್ದಿನಿ ದೇವಸ್ಥಾನ ಭಜನ ಮಂಡಳಿಯ ಸದಸ್ಯರು ಡಾ. ಪಿ.ವಿ. ಶೆಟ್ಟಿಯವರನ್ನು ಅಭಿನಂದಿಸಿದರು.ದೇವಸ್ಥಾನದ ಪರಿವಾರ ಸದಸ್ಯರು, ಸಮಾಜ ಸೇವಕ ಶಿವರಾಮ ಅಮೀನ್ (ಐ.ಸಿ. ಕಾಲೊನಿ), ಶ್ರೀ ಸಾಯಿಬಾಬಾ ಪೂಜಾ ಮಿತ್ರ ಮಂಡಳಿಯ ಅಧ್ಯಕ್ಷರಾದ ಮಾಧವ ಶೆಟ್ಟಿ, ಬೆಳ್ಮಣ್ಣು ವೆಂಕಟರಮಣ ತಂತ್ರಿ, ಡಾ. ಪಿ.ವಿ. ಶೆಟ್ಟಿ ಅವರ ಪರಿವಾರ ಸದಸ್ಯರು, ಹಾಗೂ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮತ್ತು ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಗುರುದೇವಾ ಸೇವಾ ಬಳಗ (ಮುಂಬಯಿ ಘಟಕ)ದ ಗೌರವ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.









































































































