ಮುಂಬಯಿಯ ಹೆಸರಾಂತ ಉದ್ಯಮಿ, ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಬಂಟರತ್ನ ಪ್ರಶಸ್ತಿ ಪುರಸ್ಕೃತ, ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈ ಲಿಮಿಟೆಡ್ ನ ಸಿಎಂಡಿ ಡಾ| ಆರ್. ಕೆ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ಹೆಚ್ಚಿನ ದೇಣಿಗೆಯನ್ನು ನೀಡಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಈ ಮೊದಲು ಜಾಗತಿಕ ಬಂಟರ ಸಂಘಗಳ ಒಕ್ಕೂಟದಲ್ಲಿ ನಿರ್ದೇಶಕರಾಗಿದ್ದ ಡಾ| ಆರ್.ಕೆ ಶೆಟ್ಟಿಯವರು ಇನ್ನು ಮುಂದೆ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮುಂಬೈಯ ತುಳು ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಲಹೆಗಾರರೆಂದೇ ಪ್ರಸಿದ್ಧಿ ಪಡೆದ ಅಂತರಾಷ್ಟ್ರೀಯ ಖ್ಯಾತಿಯ ಆರ್ಥಿಕ ತಜ್ಞ, ಪ್ರಸಿದ್ಧ ಜೀವವಿಮಾ ಸಲಹೆಗಾರ ಡಾ| ಆರ್ ಕೆ ಶೆಟ್ಟಿ ಅವರಿಗೆ ಇತ್ತೀಚಿಗೆ ಭಾರತೀಯ ಜೀವವಿಮಾ ನಿಗಮದ ಎಲ್ಐಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಕ ಗೌರವ ಪುರಸ್ಕಾರವೂ ಲಭಿಸಿತ್ತು. ಸುಮಾರು ಶತಮಾನದ ಇತಿಹಾಸದಲ್ಲೇ ಎಂಡಿಆರ್ಟಿ ವಿಭಾಗೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಡಾ| ಆರ್ ಕೆ ಶೆಟ್ಟಿ ಅವರು 2025 ರ ಆಗಸ್ಟ್ ನಲ್ಲಿ ಚೀನಾದ ಮಕಾವುನಲ್ಲಿ ನಡೆದ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಜಾಗತಿಕ ಸಮ್ಮೇಳನದಲ್ಲಿ ಪ್ರಧಾನ ಭಾಷಣಕಾರರಾಗಿ ಆಯ್ಕೆಯಾಗಿ ವಿಶ್ವದ ಗಮನ ಸೆಳೆದಿದ್ದರು. ಕರ್ನಾಟಕ ಜಾನಪದ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಸಲಹಾ ಸದಸ್ಯ ಸಹಿತ ಹತ್ತಾರು ಸಂಘ ಸಂಸ್ಥೆಗಳಲ್ಲಿ ಸೇವಾ ನಿರತರಾಗಿರುವ ಅವರು ಪೀಪಲ್ಸ್ ಆರ್ಟ್ ಸೆಂಟರ್ ಮುಂಬೈ ಸಂಸ್ಥೆಯ ಛತ್ರಪತಿ ಶಿವಾಜಿ ಮಹಾರಾಜ್ ಸಾಧನ ಪುರಸ್ಕಾರ ಸಹಿತ ನೂರಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ.





































































































