ಇದೊಂದು ಚೋಟುದ್ದದ, ರುಚಿಕರ ಪಚ್ಚೆ ಬಾಳೆಹಣ್ಣಿನ ಕತೆ. ಆಗಸ್ಟ್ 17 ರಂದು ಗುರುವಾಯೂರಿನ ಶ್ರೀಕೃಷ್ಣನ ದರ್ಶನಕಾಂಕ್ಷಿಯಾಗಿ, ಮಗ, ಮಡದಿಯೊಂದಿಗೆ ಹೋಗಿದ್ದೆ. ಬೆಳಿಗ್ಗೆ ಬೇಗ ನಾಲ್ಕರಿಂದ ಆರೂವರೆವರೆಗೆ ಹಿರಿಯ ನಾಗರಿಕರಿಗೆ ಹಾಗೂ ಅವರ ಜೊತೆಗಾರರಿಬ್ಬರಿಗೆ ನೇರ ಪ್ರವೇಶ ಎಂದು ಬರೆದಿತ್ತು ಜಾಲತಾಣದಲ್ಲಿ. ಹಾಗಾಗಿ ಬೇಗ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಆಹ್ನಿಕಗಳನ್ನು ತೀರಿಸಿ, ಮಡಿಯುಟ್ಟು ಮೂವರೂ ದೇವಸ್ಥಾನಕ್ಕೆ ಧಾವಿಸಿದೆವು. ಅಲ್ಲಿ ಹೋದರೆ, ಜಯ ವಿಜಯರು ತಡೆದು, ಆದಿತ್ಯವಾರ ಈ ವಿಶೇಷ ಸವಲತ್ತು ಹಿರಿಯ ನಾಗರಿಕರಿಗೆ ಇಲ್ಲ ಎಂದು ಹಿಂದೆ ಕಳುಹಿಸಿದರು. ಸಾಮಾನ್ಯ ದರ್ಶನ ಆಕಾಂಕ್ಷಿಗಳ ಏಳು ಸುತ್ತಿನ ಸಾಲು ನೋಡಿದರೆ, ಆ ದಿನ ದೇವಸ್ಥಾನದ ಗರ್ಭಗುಡಿಯ ತನಕ ಹೋಗಲು ನಾಲ್ಕಾರು ತಾಸು ಬೇಕು. ಅಳೆದೂ, ಸುರಿದೂ ಅರ್ಧ ಗಂಟೆ ಸರತಿ ಸಾಲಿನಲ್ಲಿ ನಿಂತು, ಪ್ರತಿಯೊಬ್ಬರೂ ಸಾವಿರ ರೂಪಾಯಿಯ ಪೂಜೆಯ ರಸೀತಿ ಪಡೆದು, ಇನ್ನೇನು ಒಳ ಹೋಗಬೇಕು ಎನ್ನುವಾಗ ಬಲಿ (ದೇವಸ್ಥಾನಕ್ಕೆ ಪ್ರದಕ್ಷಿಣೆ) ಆರಂಭವಾಯಿತು. ಕುಂಜರದ ಮೇಲೆ ಉತ್ಸವ ಮೂರ್ತಿಯನ್ನು ಹಿಡಿದುಕೊಂಡು, ಸಕಲ ವಾದ್ಯ ಮೇಳದೊಂದಿಗೆ ಪುರೋಹಿತರು ಗೋವರ್ಧನ ಗಿರಿಧಾರಿಗೆ ಮೂರು ಪ್ರದಕ್ಷಿಣೆ ಹಾಕಿದರು. ಬಲಿ ಮುಗಿದು ಗಂಟೆಯ ನಂತರ ದರ್ಶನ ಮುಗಿಸಿ, ಹೊರ ಬಂದೆವು. ಹೊರಾಂಗಣದಲ್ಲಿ ಸುತ್ತು ಬರುತ್ತಿದ್ದಂತೆ, ತಡೆದು ನಿಲ್ಲಿಸಿದ್ದರು ಸುಮಾರು 15 ನಿಮಿಷ. ದೊಡ್ಡ ದೊಡ್ಡ ಕವುಳಿಗೆಗಳಲ್ಲಿ ಬಿಸಿ ಬಿಸಿ ಕುದಿಯುವ ಹಾಲನ್ನು ದೇವಸ್ಥಾನದ ಒಳಗೆ ಸಾಗಿಸುತ್ತಿದ್ದರು. ಅದು ಮುಗಿಯುತ್ತಿದ್ದಂತೆ, ಒಮ್ಮೆಲೆ ಜನ ಸಂದಣಿ ಪ್ರದಕ್ಷಿಣೆ ಮುಂದುವರಿಸಿತು. ನೈಋತ್ಯ ಮೂಲೆಯಲ್ಲಿ ಒಂದು ಕ್ರೇಟ್ ತುಂಬಾ ಸಣ್ಣ ಪಚ್ಚೆ ಬಾಳೆಹಣ್ಣುಗಳ ಹಣಿಗೆಗಳನ್ನು ಇಟ್ಟಿದ್ದರು ಪ್ರಸಾದವಾಗಿ. ನೂಕುನುಗ್ಗಲಿನ ಮಧ್ಯೆ ಸಾವರಿಸಿಕೊಂಡು ಒಂದು ಹಣಿಗೆಯನ್ನು ಎತ್ತಿಕೊಂಡು, ಮಗನಿಗೊಂದು, ಮಡದಿಗೊಂದು ಕೊಟ್ಟು, ನಾನೆರಡು ತೆಗೆದುಕೊಂಡೆ. ಉಳಿದ ಹಣ್ಣಿನ ಹಣಿಗೆಯನ್ನು, ಗುಂಪಿನಲ್ಲಿ ಹೋರಾಡಲಾಗದೆ ನಿಂತು ಕೊಂಡಿದ್ದ ಪೆಣ್ ಕುಟ್ಟಿಯೊಬ್ಬಳಿಗೆ ಕೊಟ್ಟು ಕೃತಾರ್ಥನಾದೆ. ಒಂದು ಹಣ್ಣಿನ ಸಿಪ್ಪೆ ಸುಲಿದು, ತಿಂದು ಮುಗಿಸಿದೆ.

ಎರಡನೇ ಹಣ್ಣಿನ ಸಿಪ್ಪೆ ಸುಲಿಯುತ್ತಿದ್ದಂತೆ, ಹೂವಿನ ಬಾಣದಂತೆ ನನ್ನ ಬಲಗಡೆಯಿಂದ ಬಂತೊಂದು ಮಾತು “ಅದೇಕೆ ಎರಡು ಹಣ್ಣು ಎತ್ತಿ ಕೊಂಡಿರಿ?”. ಹೇಗೂ ಸುಲಿದೆ, ಬಾಯಿಗೆ ಇಟ್ಟುಕೊಂಡೆ ಹೂಬಾಳೆ. “ನಿಮಗೆ ಬಾಳೆಹಣ್ಣು ಬೇಕಾದರೆ, ಹೊರಗೆ ಮಾರುತ್ತಿದ್ದಾರಲ್ಲ, ಅವರಿಂದ ಕೊಳ್ಳಬಹುದಿತ್ತು. ಇಲ್ಲಿ ಒಬ್ಬೊಬ್ಬ ಭಕ್ತರಿಗೆ ಒಂದೊಂದು ಪ್ರಸಾದ ರೂಪದಲ್ಲಿ ಇಟ್ಟಿರುವ ಹಣ್ಣಿನಲ್ಲಿ ನೀವೊಂದು ಹೆಚ್ಚು ತಿಂದು, ಒಬ್ಬ ಭಕ್ತನನ್ನು ಪ್ರಸಾದಿಂದ ವಂಚಿತನಾಗಿ ಮಾಡಲಿಲ್ಲವೇ?” ಮಗನ ಧರ್ಮ ಬೋಧನೆ. “ಹಾಗೇನು ಇಲ್ಲ ಮಾರಾಯ, ನೋಡು ಜನಗಳು ಎರಡೆರೆಡು ಡಜನ್ ನ ಹಣಿಗೆಗಳನ್ನು ಹೊತ್ತೊಯ್ಯುತ್ತಿದ್ದಾರೆ” ಎಂದೆ, ಬಾಯೊಳಗಿನ ಹಣ್ಢನ್ನು ಜಗಿದು ನುಂಗುತ್ತಾ. “ಜನರು ಕೆಲವರು ಬೆಟ್ಟದಿಂದ ಹಾರಿ ಪ್ರಾಣ ಕಳೆದುಕೊಳ್ಳುತ್ತಾರೆ, ನೀವು ಹಾಗೆ ಮಾಡಲಾಗುತ್ತದೆಯೇ? ತಪ್ಪು ಮಾಡಿ, ಮೇಲಿನಿಂದ ಸಮಜಾಯಿಷಿ ಕೊಡುತ್ತಿರುವಿರಿ” ಮಾರುತ್ತರ ಬಂತು. ಅಯ್ಯೋ, ನಾನೇಕೆ ತಿಂದೆ ಒಂದು ಹಣ್ಣು ಹೆಚ್ಚು? ಎಂದು ನನ್ನ ಮೇಲೆಯೇ ನನಗೆ ಮರುಕ, ಅನುಕಂಪ ಎಲ್ಲಾ ಹುಟ್ಟಿತು. ಹಣ್ಣುಗಳೆರಡೂ ನನ್ನ ಖಾಲಿ ಹೊಟ್ಟೆ ಸೇರಿದ್ದವು. ಇಲ್ವಲನಂತೆ ಅವುಗಳನ್ನು ಹಿಂಪಡೆಯುವ ಸಾಮರ್ಥ್ಯ ನನಗಿಲ್ಲ. “ವಾತಾಪಿ ಜೀರ್ಣೋಭವ” ಎಂಬಂತೆ ನನ್ನ ಜಠರ ಸೇರಿದ ಹೆಚ್ಚಿನ ತಿನಸುಗಳು ಜೀರ್ಣವಾಗುತ್ತವೆ. ಯಾರೋ ಒಬ್ಬ ಭಕ್ತರ ಪ್ರಸಾದ ಅಪಹರಿಸಿದ ಪಾಪಪ್ರಜ್ಞೆ ಕಾಡ ಹತ್ತಿತು. “ಮಹಾ ಪ್ರಮಾದವಾಯಿತು, ಬೇರೆ ಹಣ್ಣುಗಳನ್ನು ತಂದು ಅಲ್ಲಿ ಇಡಲೇ?” ಎಂದೆ. “ಇದರಿಂದ ನಿಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಆಗುತ್ತದೆ ಎಂದು ಭಾವಿಸಿದಿರಾ?” ಎಂದ ಮಗನ ಮಾತು ಕೇಳಿ, ಪಿಚ್ಚೆನಿಸಿತು. ಮನಸಾ, ಬೆಣ್ಣೆ ಕಳ್ಳ ದೇವರಲ್ಲಿ ಹಲವಾರು ಬಾರಿ ಕ್ಷಮೆಯಾಚನೆ ಮಾಡಿದೆ. ಆ ದೇವರು ನನ್ನನ್ನು ಕ್ಷಮಿಸಿರಲೂ ಬಹುದು, ಆದರೆ ನನ್ನ ಮಗ ಕ್ಷಮಿಸಲಿಲ್ಲ. ಎಳವೆಯಲ್ಲಿ, ದೇವಸ್ಥಾನಗಳಲ್ಲಿ ಹಣ್ಣುಕಾಯಿ ಮಾಡಿಸುತ್ತಿದ್ದರು. ಒಂದು ತೆಂಗಿನಕಾಯಿ, ಮೂರೋ ಐದೋ ಸಣ್ಣ ಮೈಸೂರು ಬಾಳೆಹಣ್ಣು. ಗಂಧ ಪೂಸಿದ ತೆಂಗಿನ ಒಂದು ಗಡಿ (ಅರ್ಧ ಭಾಗ), ಎರಡೋ ಮೂರೋ ಸಣ್ಣ ಬಾಳೆಹಣ್ಣು ಪ್ರಸಾದ ರೂಪದಲ್ಲಿ ಮನೆ ತಲುಪುತ್ತಿತ್ತು. ಹೆಚ್ಚಾಗಿ ಮೈಸೂರು ಬಾಳೆ. ಒಂದು ಬಾಳೆಹಣ್ಣನ್ನು ಚಿಪ್ಸ್ ತರಹ ನಾಲ್ಕಾರು ತುಂಡರಸಿ, ಒಂದೊಂದು ತುಂಡು ಹಂಚುತ್ತಿದ್ದರು ಮಕ್ಕಳಿಗೆ. ಬಾಳೆಹಣ್ಣು ನನಗೆಷ್ಟು ಇಷ್ಟ ಅಂದರೆ, ಸಿಪ್ಪೆಯನ್ನೂ ತಿನ್ನುವ ಆಸೆ ಆಗುತ್ತಿತ್ತು. ಆದರೆ ಮಾವಿನ ಹಣ್ಣಿನ ಸಿಪ್ಪೆಯಂತೆ, ಬಾಳೆಹಣ್ಣಿನ ಸಿಪ್ಪೆ ತಿನ್ನಲಾಗದು ಅಲ್ಲವೇ? ಬೈಲೂರಿನ ನರಂಗಣ್ಣನ ಬೀಡಾ ಅಂಗಡಿಯಲ್ಲಿ ನೇತು ಹಾಕುತ್ತಿದ್ದ, ಗೊನೆಯಿಂದ ಕಿತ್ತು ತಿನ್ನುತ್ತಿದ್ದ ದೇವ ಬಾಳೆ, ಮೈಸೂರು ಬಾಳೆಹಣ್ಣುಗಳು ಹಾಗೂ ತಮ್ಮ ಪರಿಶ್ರಮದಿಂದ, ಅಂಗವೈಕಲ್ಯಕ್ಕೆ ಸಡ್ಡು ಹೊಡೆದು ಬಾಳಿದ ನರಂಗಣ್ಣ ನೆನಪಾದರು.
ಬರಹ : ಕೌಡೂರು ನಾರಾಯಣ ಶೆಟ್ಟಿ, ಇಟೆಲಿ.