ಮಾಜಿ ಯೋಧ ಗರೋಡಿ ತಿಮ್ಮಪ್ಪ ಆಳ್ವ ಅವರು ಗುರುವಾರ ಸಂಜೆ ಮಂಗಳೂರಿನ ಕುಂಟಿಕಾನ ಬಳಿಯ ಲೋಹಿತ್ ನಗರದ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ ಪುತ್ರಿಯನ್ನು ಅಗಲಿದ್ದಾರೆ. ಅವರ ಇಚ್ಛೆಯಂತೆ ದೇಹವನ್ನು ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾನ ನೀಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆವರು ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದು, 1971 ರ ಭಾರತ ಪಾಕ್ ಯುದ್ಧ ಸಂದರ್ಭ ಹೆಲಿಕಾಪ್ಟರ್ ನಲ್ಲಿ ಯುದ್ಧ ಶಿಬಿರಕ್ಕೆ ಪ್ರಯಾಣಿಸುವ ವೇಳೆ ಪಾಕ್ ಫಿರಂಗಿ ದಾಳಿಗೆ ತುತ್ತಾಗಿ ಚಿತ್ತಗಾಂಗ್ ಪ್ರದೇಶದ ಕಾಡಿನಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸಿ ಬದುಕಿದ್ದರು. ಬಳಿಕ 10 ವರ್ಷ ಕಾಲ ದೇಶ ಸೇವೆಯಲ್ಲಿ ತೊಡಗಿದ್ದರು. ಸೇನೆಯಿಂದ ಸ್ವಯಂ ನಿವೃತ್ತರಾಗಿ ಮಂಗಳೂರಿನಲ್ಲಿ ಫುಡ್ ಇನ್ಸ್ ಪೆಕ್ಟರ್ ಆಗಿದ್ದರು. ಬೆಳ್ತಂಗಡಿ, ಬಂಟ್ವಾಳದಲ್ಲಿ ಕರ್ತವ್ಯ ನಿರ್ವಹಿಸಿ 2000 ರಲ್ಲಿ ನಿವೃತ್ತರಾಗಿದ್ದರು. ಇತ್ತೀಚೆಗೆ ಅವರ ಅನುಭವ ಕಥನ ‘ಗರೋಡಿ ಮನೆಯಿಂದ ಸೇನಾ ಗರಡಿಗೆ’ ಪ್ರಕಟವಾಗಿತ್ತು. ಪಾಕ್ ವಿರುದ್ಧದ ಮೂರೂ ಯುದ್ಧದಲ್ಲಿ ಭಾಗವಹಿಸಿದ್ದ ಹಿರಿಮೆ ಜಿ.ಟಿ ಆಳ್ವ ಅವರದ್ದು. ಡೆಹ್ರಾಡೂನ್, ನಾಗಾಲ್ಯಾಂಡ್, ಉತ್ತರಪ್ರದೇಶ, ಅಸ್ಸಾಂ ಮತ್ತಿತರ ಕಡೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು.
