ಮುಂಬಯಿ ಕನ್ನಡಿಗರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾ ಮುಂಬಯಿಗರ ಜೊತೆ ಉಳಿದುಕೊಂಡು ಅಭಿಮಾನದಿಂದ ಬಾಳುತ್ತಿದ್ದಾರೆ. ಅನ್ಯೋನ್ಯತೆಯ ಬದುಕು ಸುಂದರವಾದ ಬದುಕು ಕಟ್ಟಿಕೊಂಡು ಜೀವನದಲ್ಲಿ ಕೂಡಾ ಯಶಸ್ವಿಯನ್ನು ಗಳಿಸಿಕೊಂಡಿದ್ದಾರೆ. ಅದರೊಟ್ಟಿಗೆ ನಮ್ಮ ಭಾಷೆ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ನಾಡಿನ ಜನರಿಗೆ ಸಹಕಾರವಾಗುತ್ತಿದ್ದಾರೆ. ನಮ್ಮಷ್ಟು ಶ್ರೀಮಂತ ಗುಣದವರು ಬಹಳ ವಿರಳ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ನುಡಿದರು. ಸೆ. ೨೮ರಂದು ಕಾಂದಿವಲಿ ಪಶ್ಚಿಮದ ಆರ್ಯ ಸಮಾಜದ ಸಭಾಗೃಹದಲ್ಲಿ ದಿ. ಎಂ.ಎಸ್ ರಾವ್ ವೇದಿಕೆಯಲ್ಲಿ ನಡೆದ ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ಇದರ ಬೆಳ್ಳಿ ಹಬ್ಬದ ಸಂಭ್ರಮ, ವಾರ್ಷಿಕ ಶಾರದಾ ಪೂಜೆ, ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು ಸಂಘ ಎಂದರೆ ವಿಭಿನ್ನ ಚಿಂತನೆಯ ಅಪೂರ್ವ ಮನುಷ್ಯನ ಸಂಗಮ. ಈ ಸಂಗಮಕ್ಕೆ ಒಂದಾಗಿ ವಿಭಿನ್ನ ಚಿಂತನೆ ಮಾಡಿ ಯೋಚನೆಯನ್ನು ಯೋಜನೆಯಾಗಿ ಪರಿವರ್ತಿಸಿ ಸಮಾಜಕ್ಕೆ ಅನುಕೂಲ ಮಾಡಲು ಒಂದಾಗಿ ಕಾರ್ಯನಿರ್ವಹಿಸುವುದು. ಈ ನಿಟ್ಟಿನಲ್ಲಿ ಈ ಮರಾಠಿ ಮಣ್ಣಲ್ಲಿ ನಮ್ಮ ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ಅತ್ಯುತ್ತಮ ಕೆಲಸ ಮಾಡುವುದರೊಂದಿಗೆ ಕಳೆದ ೨೫ ವರ್ಷಗಳಿಂದ ನಮ್ಮ ಸುಂದರವಾದ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ನಿರ್ವಹಿಸುತ್ತಿದೆ. ಅದೇ ರೀತಿ ನಮ್ಮ ರಾಜ್ಯದ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಮುಂಬಯಿಯಲ್ಲಿನ ಕನ್ನಡಿಗರು ಕನ್ನಡವನ್ನು ಬಹಳ ಪ್ರೀತಿ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಮುಂಬೈಯಲ್ಲಿ ಕನ್ನಡ ಭಾಷೆ ಅಂದ್ರೆ ಚಿಕ್ಕ ಮಗುವಿನ ಬೆಳವಣಿಗೆಯಂತೆ. ಕನ್ನಡ ಭಾಷೆ ಅತ್ಯಂತ ಮುಗ್ಧ ಹಾಗೂ ಚೆಂದ ಎಂದರು.

ಬಂಟರ ಸಂಘ ಮುಂಬಯಿಯ ಸಲಹಾ ಸಮಿತಿಯ ಸದಸ್ಯರಾದ ಸಿಎ ಸತೀಶ್ ಶೆಟ್ಟಿ, ಬಾಂಬೆ ಬಂಟ್ಸ್ ಅಸೋಷಿಯೇಶನ್ನಿನ ನಿಕಟ ಪೂರ್ವ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ, ಹಿರಿಯ ನಟ ದಯಾನಂದ ರೈ ಬೆಟ್ಟಂಪಾಡಿ, ಕಲಾವಿದ ಜಯಶೀಲ ಕೆ. ಸುವರ್ಣ, ಶಂಕರ್ ಡಿ ಫೂಜಾರಿ, ಅಶ್ವತ್ ಪುತ್ತೂರು, ಕಲಾವಿದ ಲತೀಷ್ ಪೂಜಾರಿ ಇವರನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಂಬೆ ಬಂಟ್ಸ್ ಅಸೋಷಿಯೇಶನ್ನಿನ ನಿಕಟ ಪೂರ್ವ ಅಧ್ಯಕ್ಷ ಸಿ.ಎ ಸುರೇಂದ್ರ ಕೆ ಶೆಟ್ಟಿಯವರು, ಮಕ್ಕಳಲ್ಲಿ ಮಾನವೀಯತೆಯನ್ನು ಮೂಡಿಸುವಲ್ಲಿ ಪಾಲಕರು ಹಾಗೂ ಗುರುಹಿರಿಯರು ಮಹತ್ತರವಾದ ಕೆಲಸವನ್ನು ಮಾಡಬೇಕು. ಕಷ್ಟ ಸುಖಗಳ ಬದುಕು ನಮ್ಮದು. ಭಗವಂತನ ಅನುಗ್ರಹದಿಂದ ಜೀವನದಲ್ಲಿನ ಏರು ಪೇರುಗಳನ್ನು ಪಾರು ಮಾಡುವ ಶಕ್ತಿ ನಮಗಿದೆ. ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿಯ ಎಲ್ಲಾ ಕಾರ್ಯಕ್ರಮಗಳು ಇನ್ನು ಮುಂದೆಯೂ ಸುಸಾಂಗವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಸನ್ಮಾನಿತರಾದ ಕಲಾವಿದ ಜಯಶೀಲ ಕೆ. ಸುವರ್ಣಮಾತನಾಡಿ, ಈ ಸಂಘಟನೆಗೂ ನನಗೂ ಆತ್ಮೀಯ ನಂಟು. ಬಳಗದ ಎಲ್ಲರೂ ಜೊತೆಗೂಡಿ ಕೈಜೋಡಿಸಿ ಬೆಳ್ಳಿ ಹಬ್ಬವನ್ನು ಬಹಳ ಸುಂದರವಾಗಿ ನಡೆಸಿದ್ದಾರೆ. ನನ್ನನ್ನು ಇಲ್ಲಿಗೆ ಕರೆಸಿ ಸನ್ಮಾನಿಸಿದ್ದು ಬಳಗಕ್ಕೆ ನಾನು ನನ್ನ ಪ್ರೋತ್ಸಾಹ ನೀಡುವೆನು ಎಂದರು. ಅತಿಥಿಯಾಗಿ ಉಪಸ್ಥಿತರಿದ್ದ ವಿಜಯಲಕ್ಷಿ ಎಸ್ ರಾವ್ ಮಾತನಾಡುತ್ತಾ, ಚಾರ್ಕೋಪ್ ಶಬ್ದ ಹೆಸರು ಕೇಳುವಾಗ ಎಂ.ಎಸ್. ರಾವ್ ಅವರ ನೆನಪಾಗುತ್ತದೆ. ಬೆಳ್ಳಿ ಹಬ್ಬವು ಮುಂದೆ ಸುವರ್ಣ ಮಹೋತ್ಸವ ಹಾಗೂ ಶತಮಾನೋತ್ಸವ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು. ಅತಿಥಿ ವಿಶ್ವಕರ್ಮ ಅಸೋಷಿಯೇಶನ್ನಿನ ಅಧ್ಯಕ್ಷರಾದ ರವೀಶ್ ಆಚಾರ್ಯ ಮಾತನಾಡುತ್ತಾ, ಎಲ್ಲಾ ಕನ್ನಡಿಗರನ್ನು ಒಗ್ಗೂಡಿಸಿ ಸಂಘಟಿಸಿದ ಸಂಸ್ಥೆ ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ. ನಮ್ಮ ಕನ್ನಡ ಬಾಷೆ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಇಂತಹ ಸಂಘಟನೆಯಿಂದ ನಡೆಯುತ್ತಿದ್ದು, ಮುಂದಿನ ಪೀಳಿಗೆಗೆ ಸಂಘವು ಉತ್ತಮ ಮಾರ್ಗದರ್ಶನ ನೀಡುವಂತಾಗಲಿ ಎಂದರು.
ಸನ್ಮಾನಿತರಾದ ಹಿರಿಯ ನಟ ನಿರ್ದೇಶಕ ದಯಾನಂದ ರೈ ಬೆಟ್ಟಂಪಾಡಿ ಮಾತನಾಡಿ, ಚಾರ್ಕೋಪ್ ನನ್ನ ತವರು ಮನೆಯಂತೆ. ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ಸ್ಥಾಪನೆಯಲ್ಲಿ ನಾನೂ ಕೈಜೋಡಿಸಿದ್ದೆ ಎನ್ನಲು ಅಭಿಮಾನವಾಗುತ್ತಿದೆ. ಆ ಸಮಯದಲ್ಲಿ ನಮಗೆ ಅನೇಕರು ನಮಗೆ ಸಹಕರಿಸಿದ್ದು, ನನ್ನ ಕಲಾ ಸೇವೆಗೂ ಇಲ್ಲಿನ ಕೊಡುಗೆಯಿದೆ ಎಂದರು. ಚಾರ್ಕೋಪ್ ಕನ್ನಡಿಗರ ಬಳಗದ ಸಂಸ್ಥಾಪಕ ಬಳಗದ ಮಾಜಿ ಅಧ್ಯಕ್ಷ ಭಾಸ್ಕರ ಸರಪಾಡಿ ದಂಪತಿ ಮತ್ತು ಅವರ ಪರಿವಾರವನ್ನು ಸನ್ಮಾನಿಸಲಾಯಿತು. ಸಂಘದ ಹಿರಿಯ ಸದಸ್ಯರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಂಡಪ್ಪ ಎಸ್ ಪಯ್ಯಡೆಯವರು, ಮಕ್ಕಳಿಗೆ ಉತ್ತಮ ಸಂಸ್ಕೃತಿಯನ್ನು ನೀಡಿದ್ದಲ್ಲಿ ಬದುಕು ಸಾರ್ಥಕ. ಧರ್ಮದಿಂದ ಬದುಕಿದಲ್ಲಿ ಧರ್ಮ ರಕ್ಷಿಸುತ್ತದೆ. ನಮ್ಮ ಸಮಯ ಒಳ್ಳೆಯದಾಗಿದ್ದಲ್ಲಿ ಎಲ್ಲರೂ ನಮ್ಮವರಾಗುತ್ತಾರೆ. ಮನುಷ್ಯ ತನ್ನ ಜೀವನದಲ್ಲಿ ಉತ್ತಮ ಕಾರ್ಯ ಮಾಡಿದಲ್ಲಿ ಆತನ ಜೀವನ ಸಾರ್ಥಕ. ಚಾರ್ಕೋಪ್ ಕನ್ನಡಿಗರ ಬಳಗವು ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೇರಲಿ ಎಂದು ಶುಭ ಹಾರೈಸಿದರು. ಚಾರ್ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷರಾದ ರವೀಂದ್ರ ಎಂ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದರು. ಬಳಗದ ಗೌರವ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಎಂ. ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ, ಖಜಾಂಜಿ ರಾಜೀವಿ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶೋಕ ಪಕ್ಕಳ ಮತ್ತು ಭಾಸ್ಕರ ಸರಪಾಡಿ ನಿರ್ವಹಿಸಿದರು.
ಸಂಘದ ಸದಸ್ಯರಿಂದ, ಮಹಿಳಾ ವಿಭಾಗದವರಿಂದ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಚಿಣ್ಣರ ಬಿಂಬ ಕಾಂದಿವಲಿ, ಮೀರಾ ಭಯಂಧರ್ ಶಿಬಿರದ ಮಕ್ಕಳಿಂದ ವಾಸು ಶೆಟ್ಟಿ ಮಾರ್ನಾಡ್ ನಿರ್ದೇಶನದ ’ಇಂದ್ರಜಿತು ಕಾಳಗ’ ಯಕ್ಷಗಾನ ಪ್ರದರ್ಶನವಿತ್ತು.
ಚಿತ್ರ, ವರದಿ : ದಿನೇಶ್ ಕುಲಾಲ್