ಬಾರ್ಕೂರಿನಂತಹ ಐತಿಹಾಸಿಕ ಪ್ರದೇಶ ಚಾರಿತ್ರಿಕ ಕಾಲಘಟ್ಟದಲ್ಲಿ ತುಳುನಾಡಿನ ರಾಜಧಾನಿಯಾಗಿದ್ದು, ತನ್ನದೇ ವೈಶಿಷ್ಟತೆ ಹೊಂದಿದೆ ಎಂದು ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡು ಹೇಳಿದರು. ಬಾರ್ಕೂರಿನ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ ನಡೆದ ‘ಬಾರ್ಕೂರು ಮರೆಯಲಾಗದ ತುಳುನಾಡಿನ ರಾಜಧಾನಿ’ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಗೋವಾ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ್ ಮತ್ತು ಇತಿಹಾಸಕಾರ ಪ್ರೊ ನಾಗೇಂದ್ರ ರಾವ್ ದಿಕ್ಸೂಚಿ ಭಾಷಣ ಮಾಡಿ ಬಾರ್ಕೂರಿನ ಸಾಂಸ್ಕೃತಿಕ, ಆರ್ಥಿಕ ಮತ್ತು ಭೌಗೋಳಿಕ ಅನನ್ಯತೆ, ತುಳುನಾಡು ಮತ್ತು ವಿಜಯನಗರ ಸಾಮ್ರಾಜ್ಯದ ನಡುವೆ ಬಾರ್ಕೂರು ಮುಖ್ಯ ಪ್ರದೇಶವಾಗಿದ್ದುದರ ಕುರಿತು ವಿವರಿಸಿದರು.

ಸಂಸ್ಥೆಯ ಪ್ರಿನ್ಸಿಪಲ್ ಪ್ರೊ. ಭಾಸ್ಕರ್ ಶೆಟ್ಟಿ ಸಲ್ವಾಡಿ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಹೇಶ್ ಉಡುಪ, ತುಳು ಅಕಾಡೆಮಿ ರಿಜಿಸ್ಟರ್ ಪೂರ್ಣಿಮಾ, ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು. ವಿಚಾರ ಸಂಕಿರಣದಲ್ಲಿ ಮೂರು ಪ್ರಮುಖ ಗೋಷ್ಠಿಗಳು ನಡೆದವು. ಪ್ರಾಕ್ತನ ಶಾಸ್ತ್ರ ವಿದ್ವಾಂಸ ಪ್ರೊ. ಮುರುಗೇಶಿ, ಇತಿಹಾಸ ತಜ್ಞ ಪ್ರೊ. ಜಗದೀಶ ಶೆಟ್ಟಿ, ಮಣಿಪಾಲ ವಿವಿಯ ಪ್ರಾಧ್ಯಾಪಕಿ ಪ್ರೊ. ದೀಪಿಕಾ ಶೆಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಶೋಭಾ ಆರ್ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕಿ ಅಮೃತ ವಂದಿಸಿದರು. ಸಮಾಜ ಕಾರ್ಯ ವಿಭಾಗದ ಡಾ| ಶ್ರೀದೇವಿ ಕೆ ಕಾರ್ಯಕ್ರಮ ನಿರೂಪಿಸಿದರು.