ವಿದ್ಯಾರ್ಥಿ ವೇತನವನ್ನು ನೀಡುತ್ತಿರುವ ದಾನಿಗಳ ಆದರ್ಶವನ್ನು ಮೈಗೂಡಿಸಿಕೊಳ್ಳಿ. ಮುಂದೆ ಜೀವನದಲ್ಲಿ ನೀವು ಅವರಂತೆ ಶಿಕ್ಷಣಕ್ಕೆ ನೆರವು ನೀಡುವವರಂತಾಗಿ. ಟ್ರಸ್ಟಿನ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿಯವರ ನಿಸ್ವಾರ್ಥ ಸೇವೆಗೆ ಅಭಿನಂದನೆಗಳು ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ ಇಲ್ಲಿ “ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್” ವತಿಯಿಂದ ಎಸ್.ಕೆ.ಎಸ್ ಇನ್ಫ್ರಾ ಕಾರ್ಕಳ ಇವರ ಸಹಕಾರದೊಂದಿಗೆ ಹತ್ತನೇ ತರಗತಿ ಹಾಗೂ ಪಿಯುಸಿಯಲ್ಲಿ 90 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿರುವ ಹೆಬ್ರಿ ಪರಿಸರದ ಸರಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಸ್.ಆರ್ ವಿದ್ಯಾಸಂಸ್ಥೆ ಹೆಬ್ರಿ ಇದರ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡುತ್ತಾ, ಕಷ್ಟಪಟ್ಟು ಕಲಿತ ಶಿಕ್ಷಣವು ನಮಗೆ ಅನೇಕ ಪಾಠಗಳನ್ನು ಕಲಿಸುತ್ತದೆ. ಸರಕಾರಿ ಶಾಲೆಗಳಲ್ಲಿ ಸಿಗುವ ಉತ್ತಮ ಶಿಕ್ಷಣವನ್ನು ಸದುಪಯೋಗಪಡಿಸಿಕೊಂಡು ಸಂಸ್ಕಾರಯುತ ನಾಗರೀಕರಾಗಿ ಎಂದು ಶುಭ ಹಾರೈಸಿದರು.

ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ ಎಸ್ ಎಲ್ ಮಾತನಾಡುತ್ತಾ, ತನ್ನ ಗಳಿಕೆಯ ದೊಡ್ಡ ಮೊತ್ತವನ್ನು ಹಾಗೂ ತನ್ನ ಆತ್ಮೀಯರ ಸಹಕಾರವನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ನೀಡುತ್ತಿರುವುದು ಪ್ರಶಂಶನೀಯ ಇದು ಇತರರಿಗೂ ಆದರ್ಶವಾಗಲಿ ಎಂದರು. ಇದೇ ಸಂದರ್ಭದಲ್ಲಿ ಮೂರು ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ ಧನ ಸಹಾಯ ನೀಡಲಾಯಿತು. 7 ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಕಾರ ಮಾಡಲಾಯಿತು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವಿಜೇಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಲಕ್ಷ್ಮೀನಾರಾಯಣ ನಾಯಕ್, ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾರಾನಾಥ ಬಂಗೇರಾ, ಶಾಲಾ ಪೂರ್ವ ವಿದ್ಯಾರ್ಥಿ ಹಾಗೂ ದಾನಿ ರಾಜೇಶ್ ನಾಯಕ್, ನಿವೃತ್ತ ಪ್ರಾಂಶುಪಾಲ ಉಮೇಶ್ ಎ.ಡಿ., ಪ್ರಾಂಶುಪಾಲ ವಿಜಯಕುಮಾರ್, ಉಪ ಪ್ರಾಂಶುಪಾಲ ದಿವಾಕರ್ ಮರಕಲ ಹಾಗೂ ಟ್ರಸ್ಟಿನ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಇಂಚರ ಮತ್ತು ತಂಡದವರು ಪ್ರಾರ್ಥಿಸಿದರು. ಎಲ್ಲರನ್ನು ಸ್ವಾಗತಿಸಿದ ಟ್ರಸ್ಟಿನ ಮಾರ್ಗದರ್ಶಕ ವಸಂತ್ ಎಂ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.