ಉಡುಪಿಯ ಇಂದ್ರಾಳಿಯಲ್ಲಿನ ರೈಲ್ವೆ ನಿಲ್ದಾಣಕ್ಕೆ ಶ್ರೀಕೃಷ್ಣ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಜುಲೈ 4ರಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ಶ್ರೀ ಕೃಷ್ಣ ರೈಲ್ವೆ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಈಗ ರೈಲ್ವೆ ಇಲಾಖೆ ಅಂಗೀಕರಿಸಿ ಮರುನಾಮಕರಣ ಮಾಡಿ ಆದೇಶ ನೀಡಿದೆ. ಕೊಂಕಣ ರೈಲ್ವೆ ನಿಗಮಕ್ಕೆ ಒಳಪಟ್ಟ ಈ ನಿಲ್ದಾಣಕ್ಕೆ 32 ವರ್ಷಗಳು ಸಂದಿವೆ. ಉತ್ತರ ಭಾರತ ಉತ್ತರ, ಕರ್ನಾಟಕ, ಗೋವಾ ಬಾಂಬೆ ಭಾಗಗಳಿಂದ ನಿತ್ಯ ಸಾವಿರಾರು ಮಂದಿ ಉಡುಪಿಗೆ ಬರುತ್ತಾರೆ.

ಶ್ರೀ ಕೃಷ್ಣ ಮಠ ಸೈಂಟ್ ಮೇರಿ ದ್ವೀಪ ಸಮುದ್ರ ಕಿನಾರೆಗಳ ಭೇಟಿಗಾಗಿ ಹಾಗೂ ಕರಾವಳಿಯ ಇತರ ದೇಗುಲಗಳಿಗೆ ಬರುವವರಿಗೆ ಉಡುಪಿ ರೈಲು ನಿಲ್ದಾಣವೇ ಪ್ರಮುಖ ಸಂಪರ್ಕ ಕೇಂದ್ರವಾಗಿದೆ ಇದಲ್ಲದೆ ವ್ಯಾಪಾರ, ಶಿಕ್ಷಣ, ಆರೋಗ್ಯ ಸೇವೆಗೆ ಹೆಸರಾದ ಮಣಿಪಾಲಕ್ಕೆ ಕೂಡ ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ರೈಲಿನ ಮೂಲಕ ಬರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಉಡುಪಿ ಭಾಗದಿಂದ ಮುಂಬೈ, ಬೆಂಗಳೂರು, ಚೆನ್ನೈ ನೋಯ್ಡಾ, ದಿಲ್ಲಿಗಳಿಗೆ ಉದ್ಯೋಗವನ್ನರಸಿ ಯುವಜನತೆ ತೆರಳುತ್ತಾರೆ. ಅವರಿಗೂ ಇಂದ್ರಾಳಿ ನಿಲ್ದಾಣವೇ ಪ್ರಮುಖ ಸಾರಿಗೆಯಾಗಿದೆ.