ಬಾರಕೂರು ರಾಜಧಾನಿ ರಾಜ ಗಣೇಶೋತ್ಸವದ ಮೂಲಕ ಮತ್ತೆ ಬಾರಕೂರಿನ ಗತವೈಭವ ಮರುಕಳಿಸುವಂತಾಗಬೇಕು. ಯುವ ಶಕ್ತಿಗಳು ಒಂದಾಗಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ದೇಶ ಕಟ್ಟುವ ಕಾರ್ಯ ಮಾಡಬೇಕು ಎಂದು ಎಂಆರ್ಜಿ ಗ್ರೂಪ್ ಸಂಸ್ಥಾಪಕ ಡಾ| ಕೆ ಪ್ರಕಾಶ್ ಶೆಟ್ಟಿ ಹೇಳಿದರು. ಇಲ್ಲಿನ ರಾಜಧಾನಿ ರಾಜ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕೋಟೆಕೇರಿ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ಬಾರಿಗೆ ಬಾರಕೂರಿಗೆ ಆಗಮಿಸಿದ ಡಾ|ಕೆ ಪ್ರಕಾಶ್ ಶೆಟ್ಟಿ, ಬೆಂಗಳೂರು ಕುಂದಾಪ್ರ ಕನ್ನಡ ಪ್ರತಿಷ್ಠಾನ ಅಧ್ಯಕ್ಷ ದೀಪಕ್ ಶೆಟ್ಟಿ, ಭಾಗವತ ಉದಯ ಕುಮಾರ್ ಹೊಸಾಲ, ದೈವ ನರ್ತಕ ಸಂತೋಷ ಕುಮಾರ್ ಆರ್ಡಿ ಅವರನ್ನು ಗೌರವಿಸಲಾಯಿತು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಾರಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ ಸಾಗರ, ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ, ವಸಂತ ಗಿಳಿಯಾರು ಉಪಸ್ಥಿತರಿದ್ದರು. ದಾಮೋದರ ಶರ್ಮ ಸ್ವಾಗತಿಸಿದರು. ಸತೀಶ್ ಚಂದ್ರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಶರಣ್ ಶೆಟ್ಟಿ ವಂದಿಸಿದರು.