
ಮಹಾರಾಷ್ಟ್ರದ ಪುಣೆಯ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಿಶ್ವಸ್ಥ ಮಂಡಳಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಪುಣೆಯ ಸಮಾಜ ಸೇವಕ ಶಿರ್ವ ಪಂಜಿಮಾರು ದೊಡ್ಡಮನೆ ಜಗದೀಶ್ ಬಿ. ಶೆಟ್ಟಿಯವರು 2026 -28 ರ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುಣೆ ತುಳು-ಕನ್ನಡಿಗರ ವಲಯದಲ್ಲಿ ಅತ್ಯಂತ ಪ್ರೀತಿಯ ವ್ಯಕ್ತಿಯಾಗಿರುವ ಜಗದೀಶ್ ಶೆಟ್ಟಿ ಅವರು ‘ಎಲ್.ಐ.ಸಿ ಜಗ್ಗಣ್ಣೆ’ ಎಂದೇ ಮನೆಮಾತಾದವರು. ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿಯಾಗಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಇವರು, ತಮ್ಮ ಮೃದು ಸ್ವಭಾವ ಹಾಗೂ ಜನಪರ ಕಾಳಜಿಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಭಾರತೀಯ ಜೀವವಿಮಾ ನಿಗಮದಲ್ಲಿ (LIC) ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿರುವ ಇವರು, ತಮ್ಮ ಕಠಿಣ ಪರಿಶ್ರಮದ ಫಲವಾಗಿ ಸತತವಾಗಿ ಅಂತರಾಷ್ಟ್ರೀಯ ಮಟ್ಟದ ‘ಮಿಲಿಯನ್ ಡಾಲರ್ ರೌಂಡ್ ಟೇಬಲ್ ಕಾನ್ಫರೆನ್ಸ್’ (MDRT – USA) ಗೆ ಆಯ್ಕೆಯಾಗುವ ಮೂಲಕ ವಿಮಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಕೇವಲ ಪಾಲಿಸಿ ಮಾಡಿಸುವುದಕ್ಕೆ ಸೀಮಿತವಾಗದೆ, ಪಾಲಿಸಿದಾರರಿಗೆ ಅದರ ಪ್ರತಿಯೊಂದು ಸೌಲಭ್ಯಗಳು ಮತ್ತು ಪ್ರಯೋಜನಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವುದು ಇವರ ವಿಶೇಷ ಗುಣವಾಗಿದೆ.ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಜಗದೀಶ್ ಶೆಟ್ಟಿ ಅವರು, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಬಂದಿದ್ದಾರೆ. ಈಗ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಗದ್ದುಗೆ ಏರಿರುವುದು ಭಕ್ತ ಸಮೂಹದಲ್ಲಿ ಸಂತಸ ತಂದಿದೆ. ಇವರ ನೇತೃತ್ವದಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಹಾಗೂ ಸೇವಾ ಚಟುವಟಿಕೆಗಳು ಮತ್ತಷ್ಟು ವೇಗ ಪಡೆಯಲಿ ಎಂದು ಸಂಘದ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಶುಭ ಹಾರೈಸಿದ್ದಾರೆ.

























































































































