
ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಯೂತ್ ರೆಡ್ ಕ್ರಾಸ್ ಮಂಗಳೂರು ವಿ.ವಿ ಮತ್ತು ನಿಟ್ಟೆ ಪರಿಗಣಿತ ವಿ.ವಿ ಸಹಯೋಗದಲ್ಲಿ ನಗರದ ರೆಡ್ ಕ್ರಾಸ್ ಶತಮಾನೋತ್ಸವ ಭವನದ ಪ್ರೇರಣಾ ಸಭಾಂಗಣದಲ್ಲಿ ವಿಶ್ವ ಆರೋಗ್ಯ ದಿನ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಕೆಎಂಸಿ ಆಸ್ಪತ್ರೆಯ ಸ್ತ್ರೀರೋಗಶಾಸ್ತ್ರ ತಜ್ಞೆ ಡಾ. ಶ್ರದ್ಧಾ ಶೆಟ್ಟಿ ಮಾತನಾಡಿ, ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆ ಕೂಡಾ ಆರಂಭಿಕ ಹಂತದಲ್ಲಿಯೇ ಪತ್ತೆಯಾದರೆ ಪರಿಣಾಮಕಾರಿ ಚಿಕಿತ್ಸೆ ನೀಡಿ ಜೀವ ಉಳಿಸಬಹುದು. ಮುಂಜಾಗ್ರತಾ ಕ್ರಮ ನಿಯಮಿತ ತಪಾಸಣೆ ರೋಗ ತಡೆಗಟ್ಟುವ ಅತ್ಯುತ್ತಮ ಮಾರ್ಗವಾಗಿದೆ. ಆರೋಗ್ಯ ರಕ್ಷಣೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡುವುದು ಅಗತ್ಯ ಎಂದರು.


ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಬಿ ಸಚ್ಚಿದಾನಂದ ರೈ, ಖಾಜಾಂಚಿ ಗುರುದತ್ ನಾಯಕ್, ನಿರ್ದೇಶಕರಾದ ಡಾ. ಸತೀಶ್ ರಾವ್, ಪಿ.ಬಿ ಹರೀಶ್ ರೈ, ರಾಘವೇಂದ್ರ ರಾವ್, ನಿಟ್ಟೆ ಪರಿಗಣಿತ ವಿ.ವಿಯ ನೋಡಲ್ ಅಧಿಕಾರಿ ಡಾ. ಶಂತನು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯೂತ್ ರೆಡ್ ಕ್ರಾಸ್ ಯೋಜನಾಧಿಕಾರಿಗಳಾದ ಸೈಂಟ್ ಅಲೋಶಿಯಸ್ ಕಾಲೇಜಿನ ಇಮ್ತಿಯಾಜ್ ಆಲಿ, ಬೆಸೆಂಟ್ ಮಹಿಳಾ ಕಾಲೇಜಿನ ದೀಕ್ಷಿತಾ, ಸೈಂಟ್ ಆಗ್ನೆಸ್ ಕಾಲೇಜಿನ ನಿಮಿತಾ ಕೆ. ಮತ್ತು ತ್ರಿಷಾ ಕಾಲೇಜಿನ ಶಿಲ್ಪಾ ಶೆಟ್ಟಿ ಉಪಸ್ಥಿತರಿದ್ದರು.
ಮ.ವಿವಿಯ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್ ಸ್ವಾಗತಿಸಿ, ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ ವಂದಿಸಿದರು. ಯೂತ್ ರೆಡ್ ಕ್ರಾಸ್ ಉಪ ಸಮಿತಿ ನಿರ್ದೇಶಕಿ ಡಾ. ಸುಮನ ಬಿ ಕಾರ್ಯಕ್ರಮ ನಿರೂಪಿಸಿದರು.

























































































































