ಆಧ್ಯಾ ಫೌಂಡೇಶನ್ ವತಿಯಿಂದ ನವೆಂಬರ್ ತಿಂಗಳಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳಿಗೆ ಶಿಪ್ ಬಿಲ್ಡಿಂಗ್ ಹಾಗೂ ಆರ್ ಸಿ ಡ್ರೋನ್ ಫ್ಲೈಯಿಂಗ್ ಅಂತರಾಷ್ಟ್ರೀಯ ತಜ್ಞರ ಮೂಲಕ ತರಬೇತಿ ನೀಡಲಾಗುವುದು ಎಂದು ಆಧ್ಯಾ ಫೌಂಡೇಶನ್ ನ ಅಧ್ಯಕ್ಷ ರಾಕೇಶ್ ಅಜಿಲ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇದು ರಾಷ್ಟ್ರದ ಭವಿಷ್ಯದ ಭದ್ರತೆಗೆ ಪೂರಕವಾದ ಯೋಜನೆಯಾಗಿದ್ದು, ನಮ್ಮ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಇದರ ಭಾಗವಾಗುವ ಅವಕಾಶವನ್ನು ಕಲ್ಪಿಸಲಾಗುವುದು ಎಂದರು. ಜನವರಿ ತಿಂಗಳಲ್ಲಿ ಸೇನೆಗೆ ಸೇರಲು ಆಸಕ್ತ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ನುರಿತ ತರಬೇತಿದಾರರಿಂದ ಮೂರು ದಿನಗಳ ಸಂಯೋಜಿತ ತರಬೇತಿಯನ್ನು ಆಯೋಜಿಸಲಾಗುವುದು. ಆಸಕ್ತ ಯುವ ಜನರು ಇದರ ಪ್ರಯೋಜನವನ್ನು ಪಡೆಯಬಹುದು.

ಮಾರ್ಚ್ 2026 ರಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳಿಗೆ ಸರ್ಫಿಂಗ್ ಹಾಗೂ ಕಯಾಕಿಂಗ್ ಜಲ ಕ್ರೀಡಾ ತರಬೇತಿಯನ್ನು ಆಯೋಜಿಸಲಾಗುವುದು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಹಾಗೂ ಇತರ ಮಾದಕ ವ್ಯಸನಗಳಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ತುತ್ತಾಗುತ್ತಿದ್ದು, ಇದರ ನಿವಾರಣೆಗೆ ಸಂಬಂಧಿಸಿದ ಹಾಗೆ ಉನ್ನತ ಸರಕಾರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ ನಿಂದ ವಿವಿಧ ಶಾಲಾ ಕಾಲೇಜುಗಳಲ್ಲಿ ಪ್ರಾತ್ಯಕ್ಷಿಕ ಹಾಗೂ ಇದರ ದುಷ್ಪರಿಣಾಮದ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ 9619120324 ಸಂಪರ್ಕಿಸಬಹುದು ಎಂದು ತಿಳಿಸಿದರು. ಆಧ್ಯಾ ಫೌಂಡೇಶನ್ ಟ್ರಸ್ಟಿಗಳಾದ ಪ್ರವೀಣ್ ಭೋಪಯ್ಯ ಹಾಗೂ ಕಿರಣ್ ಈ ಸಂಧರ್ಭ ಉಪಸ್ಥಿತರಿದ್ದರು.