‘ತಾಯ್ನಾಡಿನ ಯಕ್ಷಗಾನಕ್ಕೆ ಬಹುದೊಡ್ಡ ಇತಿಹಾಸವಿದೆ. ವಿಶಾಲ ಬಯಲಿನಲ್ಲಿ ಬೇರೆ ಬೇರೆ ಮೇಳಗಳ ಜೋಡು ರಂಗಸ್ಥಳವನ್ನು ಹಾಕಿ ನಡೆಸುತ್ತಿದ್ದ ಸ್ಪರ್ಧೆಯ ಜೋಡಾಟವನ್ನು ನೋಡುವುದೇ ಒಂದು ಹಬ್ಬ. ಆದರೆ ಈಗ ಅದು ಕಾಣಸಿಗುವುದಿಲ್ಲ. ಅಜೆಕಾರು ಬಾಲಕೃಷ್ಣ ಶೆಟ್ಟರು ಮುಂಬಯಿ ಕಲಾರಸಿಕರಿಗೆ ಅಂತಹ ಒಂದು ಅಪೂರ್ವ ಅನುಭವ ನೀಡಲಿದ್ದಾರೆ. ಸೆಪ್ಟೆಂಬರ್ 21ರಂದು ಮುಂಬಯಿ ಬಂಟರ ಸಂಘದ ಸಭಾಂಗಣದಲ್ಲಿ ಅವರು ಏರ್ಪಡಿಸಿರುವ ಅಮೋಘ ಜೋಡಾಟದ ಮೂಲಕ ಯಕ್ಷಗಾನದ ಗತವೈಭವ ಮರುಕಳಿಸಲಿದೆ’ ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಹೇಳಿದ್ದಾರೆ. ಬಂಟರ ಸಂಘ ಮುಂಬೈ ಜೋಗೇಶ್ವರಿ ದಹಿಸರ್ ಸಮಿತಿ ವತಿಯಿಂದ ಕಾಂದಿವಲಿ ಪಶ್ಚಿಮದ ಮಹಾವೀರ ನಗರದಲ್ಲಿರುವ ಕಮಲ ವಿಹಾರ್ ಸ್ಪೋರ್ಟ್ಸ್ ಕ್ಲಬ್ ಸಭಾಂಗಣದಲ್ಲಿ ಊರಿನ ಪ್ರಸಿದ್ಧ ಕಲಾವಿದರಿಂದ ಜರಗಿದ ‘ಕೃಷ್ಣರಾಜಿ ಪರ್ಸಂಗೊ – ಅಂಕೊದ ಬೂಲ್ಯ’ ತುಳು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ 24ನೇ ವಾರ್ಷಿಕೋತ್ಸವ ‘ಚತುರ್ವಿಂಶತಿ ಸಂಭ್ರಮ ಮತ್ತು ಪ್ರಚಂಡ ಜೋಡಾಟ’ದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಮತ್ತು ಹಿರಿಯ ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಕಾರ್ಯಕ್ರಮದ ವಿವರ ನೀಡಿ ಮಾತನಾಡುತ್ತಾ, ‘ಮುಂಬಯಿಯಲ್ಲಿ ಪ್ರಥಮ ಬಾರಿಗೆ ಒಂದೇ ವೇದಿಕೆಯಲ್ಲಿ ಎರಡು ರಂಗಸ್ಥಳಗಳನ್ನು ನಿರ್ಮಿಸಿ ನಡೆಯುವ ಅದ್ದೂರಿಯ ಜೋಡಾಟದಲ್ಲಿ ಪ್ರಸಿದ್ಧ ವೇಷಧಾರಿಗಳ ಸ್ಪರ್ಧಾತ್ಮಕ ಪಾತ್ರಗಳ ಪೈಪೋಟಿ ನಡೆಯಲಿದೆ. ಎರಡೆರಡು ಮಹಿಷಾಸುರರ ಅಬ್ಬರ, ಏಕಕಾಲದಲ್ಲಿ ಉಭಯ ದೇವಿಯರ ಪ್ರತ್ಯಕ್ಷ, ನಾಲ್ಕು ಮಂದಿ ಚಂಡ – ಮುಂಡರ ಮಿಂಚಿನ ಪ್ರವೇಶ ಇತ್ಯಾದಿ ಮೈ ರೋಮಾಂಚನಗೊಳಿಸುವ ವಿಶೇಷ ಆಕರ್ಷಣೆಗಳಿವೆ. ಜೊತೆಗೆ ಅಜೆಕಾರು ಕಲಾಭಿಮಾನಿ ಬಳಗದ 24ನೇ ವಾರ್ಷಿಕೋತ್ಸವ, ಯಕ್ಷರಕ್ಷಾ ಪ್ರಶಸ್ತಿ ಪ್ರದಾನ, ಕಲಾ ಗೌರವ, ಸಭಾ ಕಲಾಪಗಳನ್ನು ಕೂಡಾ ಆಯೋಜಿಸಲಾಗಿದೆ’ ಎಂದರು. ಇದೇ ಸಂದರ್ಭದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟರು ವಿವಿಧ ಗಣ್ಯರಿಗೆ ಕರೆಯೋಲೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಜೋಗೇಶ್ವರಿ ದಹಿಸರ್ ಸಮಿತಿ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ವಿದ್ವಾಂಸ ಡಾ| ಎಂ ಪ್ರಭಾಕರ ಜೋಶಿ, ಸಮಿತಿ ಸಲಹೆಗಾರರಾದ ಮುಂಡಪ್ಪ ಎಸ್. ಪಯ್ಯಡೆ, ಮುಖ್ಯ ಪದಾಧಿಕಾರಿಗಳು ಮತ್ತು ಆಹ್ವಾನಿತ ಅತಿಥಿಗಳು, ತಾಳಮದ್ದಳೆ ಕಲಾವಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರಘುನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.