ಪಿಯುಸಿ ಹಂತವು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ಘಟ್ಟ. ಈ ಅವಧಿಯಲ್ಲಿ ಪ್ರತಿಯೊಬ್ಬರೂ ತಮ್ಮ ಗುರಿಯನ್ನು ಸಾಧಿಸಲು ಕ್ರಿಯಾಶೀಲರಾಗಬೇಕು. ನಿಜವಾದ ಕ್ರಿಯಾಶೀಲತೆಯೇ ಯಶಸ್ಸಿನ ದಾರಿಯನ್ನು ತೆರೆದಿಡುತ್ತದೆ ಎಂದು ಆಳ್ವ ಫಾರ್ಮಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗ್ರೀಷ್ಮಾ ಆಳ್ವ ನುಡಿದರು. ಅವರು ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಹಿಳಾ ಕ್ಷೇಮಪಾಲನಾ ಸಮಿತಿ ಹಾಗೂ ಆಂತರಿಕ ಸಮಿತಿಯ ೨೦೨೫-೨೬ರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವಕಾಶಗಳು ಎಲ್ಲರಿಗೂ ಸಮಾನವಾಗಿ ಲಭ್ಯ. ಆದರೆ ಅದನ್ನು ಬಳಸಿಕೊಳ್ಳುವ ರೀತಿಯೇ ಭವಿಷ್ಯವನ್ನು ನಿರ್ಧರಿಸುತ್ತದೆ. ತಪ್ಪು ಸರಿಗಳನ್ನು ಅರಿತು ಯೌವ್ವನದಲ್ಲಿ ಜಾಗರೂಕತೆಯಿಂದ ಹೆಜ್ಜೆಯಿಡಬೇಕು. ಸಾಧನೆಯ ಹಂಬಲವಿದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್., ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರಲ್ಲಿ ಗೊಂದಲ, ನೋವು, ರೋಷ, ಹತಾಶೆ, ಆತಂಕ ಇಂತಹ ಭಾವನೆಗಳು ಸಾಮಾನ್ಯ. ಇದು ವ್ಯಕ್ತಿತ್ವದ ಬೆಳವಣಿಗೆಯ ಒಂದು ಹಂತ. ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮ ಭಾವನೆಗಳೊಂದಿಗೆ ಮುನ್ನಡೆಯಲು ಪೋಷಕರು, ಶಿಕ್ಷಕರು ಹಾಗೂ ಸ್ನೇಹಿತರ ಬೆಂಬಲ ಅಗತ್ಯ. ನಮ್ಮ ಜೀವನದಲ್ಲಿ ಪ್ರತಿ ಒಬ್ಬರಿಗೂ ಆದರ್ಶ ವ್ಯಕ್ತಿಯೊಬ್ಬ ಅಗತ್ಯ. ‘ನನ್ನ ಆದರ್ಶ ಯಾರು? ಅವರು ನನಗೆ ಏಕೆ ಆದರ್ಶ?’ ಎಂಬ ಪ್ರಶ್ನೆಯನ್ನು ಆತ್ಮಾವಲೋಕನದಿಂದ ಅರಿತು ಸಾಗಿದರೆ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯ. ಆದರ್ಶ ವ್ಯಕ್ತಿಯ ಜೀವನಶೈಲಿ, ಪರಿಶ್ರಮ, ಮೌಲ್ಯಗಳು ಮತ್ತು ಧೈರ್ಯವನ್ನು ಅವಲೋಕಿಸಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಾವು ಸಹ ಶ್ರೇಷ್ಠತೆಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ., ಮಹಿಳಾ ಕ್ಷೇಮಪಾಲನಾ ಸಮಿತಿ ಸಂಯೋಜಕಿ ಕೀರ್ತನಾ ಶೆಟ್ಟಿ ಮತ್ತು ಆಂತರಿಕ ಸಮಿತಿ ಸಂಯೋಜಕಿ ಡಾ. ಸುಲತಾ ವಿದ್ಯಾಧರ್ ಇದ್ದರು. ವಿದ್ಯಾರ್ಥಿನಿ ಮಧು ಕಾರ್ಯಕ್ರಮ ನಿರೂಪಿಸಿ, ನಿಧಿ ಸ್ವಾಗತಿಸಿ, ಪೂರ್ವಿ ವಂದಿಸಿದರು.