ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ಡಾ. ನಿರಂಜನ್ ಶೆಟ್ಟಿ ಅವರ ಕನಸಿನ ಕೂಸು ಸುಮತಿ ಮಾನವಾಲಯ ಭಾನುವಾರ ಅಧಿಕೃತವಾಗಿ ಲೋಕಾರ್ಪಣೆಗೊಂಡಿತು. ಸಮಾಜ ಸೇವೆ ಮತ್ತು ಮನುಜ ಸೇವೆ ಇವೆರಡನ್ನು ಉದ್ದೇಶವಾಗಿಟ್ಟುಕೊಂಡು ಅದಕ್ಕೆ ತನ್ನನ್ನು ಮುಡುಪಾಗಿಟ್ಟು ಸೇವೆ ಸಲ್ಲಿಸುತ್ತಿರುವ ಮನೋವೈದ್ಯ ಡಾ. ನಿರಂಜನ್ ಶೆಟ್ಟಿ ಮತ್ತು ಕುಟುಂಬ ಹಲವು ವರ್ಷಗಳಿಂದ ಮಾನವಾಲಯ ಎಂಬ ಸಂಸ್ಥೆಯನ್ನು ಆರಂಭಿಸುವ ಉದ್ದೇಶ ಹೊಂದಿತ್ತು. ಹಲವು ಸಮಯಗಳ ಇವರ ಕನಸು ಆಗಸ್ಟ್ 17ರಂದು ಬೆಳಗ್ಗೆ 10 ಗಂಟೆಗೆ ‘ಸುಮತಿ ಮಾನವಾಲಯ’ ಎಂಬ ಹೆಸರಿನೊಂದಿಗೆ ಮಂಗಳೂರು ಎಸ್.ಡಿ.ಎಂ ಲಾ ಕಾಲೇಜು ಹಿಂಭಾಗ ಅಧಿಕೃತವಾಗಿ ಮಧು ಕನ್ಸ್ಟ್ರಕ್ಷನ್ ಮತ್ತು ಆಟಂ ಫಿಟ್ನೆಸ್ ಕ್ಲಬ್ ನ ಮಾಲಕಿ ಶ್ರೀಮತಿ ವಿಜಯಲಕ್ಷ್ಮಿ ಮಲ್ಲಿ, ಡೈಜಿ ವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಶ್ರೀಮತಿ ಸುನಂದ ಶೇಖರ್ ಶೆಟ್ಟಿ ಮಲ್ಲಾರ್ ಇವರ ಸಮ್ಮುಖದಲ್ಲಿ ಆರಂಭಗೊಂಡಿತು.

ನಂತರ ಸಂಸ್ಥೆಯ ವತಿಯಿಂದ ಓಶಿಯನ್ ಪರ್ಲ್ ಹೋಟೆಲಿನ ಸಭಾಂಗಣದಲ್ಲಿ ಜನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಂದ ವೆಲ್ ನೆಸ್ ಸೆಂಟರ್ ಸಂಸ್ಥಾಪಕ ಡಾ. ನಿರಂಜನ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲೆ ಶ್ರೀಮತಿ ಬಿ ನಯನಾ ಪೈ, ಉದ್ಯಮಿ ಸುಧೀಂದ್ರ ಪೂಜಾರಿ ಕುಂದಾಪುರ, ಉಷಾ ಪ್ರಭಾಕರ್ ಉಪಸ್ಥಿತರಿದ್ದರು.