ಲಯನ್ಸ್ ಕ್ಲಬ್ ಮೂಡುಬಿದಿರೆ ಇದರ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆಯನ್ನು ಕ್ಲಬ್ ಅಧ್ಯಕ್ಷ ಲ. ಶಿವಪ್ರಸಾದ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಆಲಂಗಾರಿನ ಮೌಂಟ್ ರೋಸರಿ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು. ಈ ಸಂದರ್ಭ ಆಶ್ರಮದ ನಿರ್ದೇಶಕ 94 ವರ್ಷ ವಯಸ್ಸಿನ ಮೋನ್ಸಿಂಜೊರ್ ಎಡ್ವಿನ್ ಸಿ. ಪಿಂಟೋ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಡ್ವಿನ್ ಸಿ. ಪಿಂಟೋ ಅವರು ಸನ್ಮಾನಕ್ಕೆ ಕೃತಜ್ಞತೆಗಳನ್ನು ತಿಳಿಸಿದರಲ್ಲದೆ ಈ ಸನ್ಮಾನವು 94ರ ವಯಸ್ಸಿನಲ್ಲಿ ತಾವು ವೃದ್ಧಾಶ್ರಮ ಮತ್ತು ಮೌಂಟ್ ರೋಸರಿ ಆಸ್ಪತ್ರೆಯ ಮೂಲಕ ಕೈಗೊಳ್ಳುವ ಸೇವಾ ಕಾರ್ಯಗಳಿಗೆ ಇನ್ನಷ್ಟು ಸ್ಪೂರ್ತಿ ತುಂಬಲಿದೆ ಎಂದರಲ್ಲದೆ ತಮ್ಮ ಆಸ್ಪತ್ರೆಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಅತ್ಯುತ್ತಮ ರೀತಿಯಲ್ಲಿ ಡಯಾಲಿಸಿಸ್ ಚಿಕಿತ್ಸೆ ನೀಡುವ ಯೋಜನೆ ಹಾಕಿಕೊಂಡಿದ್ದು ದಾನಿಗಳು ಉದಾರ ಮನಸ್ಸಿನಿಂದ ಈ ಯೋಜನೆಗೆ ಮುಕ್ತ ಮನಸ್ಸಿನಿಂದ ಸಹಾಯ ನೀಡಬೇಕೆಂದು ವಿನಂತಿಸಿದರು.

ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆಯವರು ಮಾತನಾಡಿ, ವಂ. ಎಡ್ವಿನ್ ಸಿ. ಪಿಂಟೋ ಅವರಿಗೆ ಉನ್ನತ ಸ್ಥಾನಮಾನಗಳು ಸಿಗುವ ಅವಕಾಶಗಳು ಪ್ರಾಪ್ತವಾಗಿದ್ದರೂ, ಅದನ್ನೆಲ್ಲಾ ನಿರಾಕರಿಸಿ 94ರ ಇಳಿ ವಯಸ್ಸಿನಲ್ಲೂ ವೃದ್ಧಾಶ್ರಮದ ಸೇವೆಯೇ ಸರ್ವಶ್ರೇಷ್ಠ ಸೇವೆ ಎಂದು ಭಾವಿಸಿ ಇಲ್ಲಿಯೇ ಉಳಿದು ಕೊಂಡಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದರಲ್ಲದೆ ಅವರಿಗೆ ನೀಡಿರುವ ಸನ್ಮಾನದಿಂದ ನಮಗೆ ಕೃತಾರ್ಥಭಾವ ಮೂಡಿದೆ ಎಂದರು. ಮೂಡುಬಿದಿರೆ ಲಯನ್ಸ್ ಕ್ಲಬ್ ವತಿಯಿಂದ ಹತ್ತು ಸಾವಿರ ರೂಪಾಯಿಗಳನ್ನು ಡಯಾಲಿಸಿಸ್ ಕೇಂದ್ರಕ್ಕೆ ಈ ಸಂದರ್ಭದಲ್ಲಿ ನೀಡಲಾಯಿತು.
ಲಯನ್ಸ್ ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ವಿನೋದ್ ಕುಮಾರ್ ಸನ್ಮಾನಪತ್ರ ವಾಚಿಸಿದರು. ಕ್ಲಬ್ ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ, ಖಜಾಂಚಿ ಹರೀಶ್ ತಂತ್ರಿ, ನಿಕಟಪೂರ್ವ ಅಧ್ಯಕ್ಷ ಬೊನವೆಂಚರ್ ಮಿನೇಜಸ್, ವೃದ್ಧಾಶ್ರಮದ ಸುಪೀರಿಯರ್ ಸಿ. ಪ್ರೆಸಿಲ್ಲಾ, ಕ್ಲಬ್ ಸದಸ್ಯರಾದ ಮುನ್ನಾ ರಾವ್, ಮುರಳೀಧರನ್, ಎಂ.ಕೆ. ದಿನೇಶ್, ವಿನೋದ್ ಡೇಸಾ, ರಿಚರ್ಡ್ ಕರ್ಡೋಜಾ, ಮಾರ್ಕ್ ಮೆಂಡೋನ್ಸಾ, ನವಾನಂದ, ದಯಾನಂದ, ಆಂಟನಿ ಡಿಸೋಜ, ರೋಕ್ಕಿ ಪಿಂಟೋ, ಸಂಗನ ಬಸಯ್ಯ ಹಿರೇಮಠ್, ಆಶ್ರಮದ ಮೇಲ್ವಿಚಾರಕರು ಹಾಗೂ ಆಶ್ರಮವಾಸಿಗಳು ಉಪಸ್ಥಿತರಿದ್ದರು.