ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು. ಆ ಮೂಲಕ ಭವಿಷ್ಯದ ಉತ್ತಮ ಪ್ರಜೆಗಳಾಗಿ ಸುಸಂಸ್ಕೃತ ಜೀವನ ನಡೆಸುವಂತಾಗಬೇಕೆಂಬ ದೃಷ್ಟಿಯಿಂದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಪ್ರಾರಂಭದಿಂದಲೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದೆ. ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಯೊಂದಿಗೆ ಯಾವಾಗಲೂ ಯಶಸ್ವಿ ಜೀವನದ ಬಗ್ಗೆ ಯೋಚಿಸಬೇಕು. ಕಠಿಣ ಪರಿಶ್ರಮ, ಶ್ರದ್ಧೆಯಿಂದ ಶಿಕ್ಷಣ ಪಡೆದು ಗುರಿ ತಲುಪಬೇಕು ಎಂದು ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ ತಿಳಿಸಿದರು. ಜುಯಿ ನಗರದ ಬಂಟ್ಸ್ ಸೆಂಟರ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದ ದಿ. ಪ್ರಮೋದ ಶಿವರಾಮ ಕೆ ಶೆಟ್ಟಿ ವೇದಿಕೆಯಲ್ಲಿ ಆಗಸ್ಟ್ 17 ರಂದು ಜರಗಿದ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ವಾರ್ಷಿಕ ಶೈಕ್ಷಣಿಕ ನೆರವು ವಿತರಣಾ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಂಬೆ ಬಂಟ್ಸ್ ಅಸೋಸಿಯೇಷನ್ ಪ್ರತೀ ವರ್ಷ ಲಕ್ಷಾಂತರ ರೂಪಾಯಿಗಳನ್ನು ಶೈಕ್ಷಣಿಕ ನೆರವಿಗಾಗಿ ವಿನಿಯೋಗಿಸುತ್ತಿದೆ. ಸಮಾಜದ ದಾನಿಗಳು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ದಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಮಾತನಾಡಿದ ಬಂಟರ ಸಂಘ ಮುಂಬೈ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು, ಮುಂಬೈ ಮಹಾನಗರದಲ್ಲಿ ಬಂಟರ ಎರಡು ಸಂಘಟನೆಗಳು ಅತ್ಯಂತ ಬಲಿಷ್ಠವಾಗಿದ್ದು ಸಮಾಜ ಸೇವೆಗೆ ಸದಾ ಪ್ರೋತ್ಸಾಹ ನೀಡುತ್ತಿದೆ. ಮಕ್ಕಳಿಗೆ ಶೈಕ್ಷಣಿಕ ನೆರವಿಗಾಗಿ ವಿಶೇಷ ಆಸಕ್ತಿಯಿಂದ ಕೆಲಸ ಮಾಡುತ್ತಿದೆ. ಬಾಂಬೆ ಅಸೋಸಿಯೇಷನ್ ನ ಸಮಾಜಸೇವೆ ಮೆಚ್ಚುವಂತದ್ದು. ವೈದ್ಯಕೀಯ ಕ್ಷೇತ್ರದಲ್ಲೂ ಸಹಾಯ ಮಾಡುವ ದೃಷ್ಟಿಯಿಂದ ನಮ್ಮ ಸಮಾಜದ ಸ್ವಂತ ಆಸ್ಪತ್ರೆ ನಿರ್ಮಾಣವಾಗಬೇಕಿದ್ದು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ರೀಜೆನ್ಸಿ ಗ್ರೂಪ್ ಆಫ್ ಹೋಟೆಲ್ ಜಯರಾಮ ಎಂ ಶೆಟ್ಟಿ, ಗೌರವ ಅತಿಥಿಯಾಗಿದ್ದ ಬಂಟರ ಸಂಘಮುಂಬೈಯ ಉಪಾಧ್ಯಕ್ಷ ಮಹೇಶ್ ಶೆಟ್ಟಿ, ಕೃಷ್ಣ ಪ್ಯಾಲೇಸ್ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ ಕೃಷ್ಣ ವೈ ಶೆಟ್ಟಿ ಶುಭ ಹಾರೈಸಿದರು.
ಬಂಟರ ಸಂಘ ಮುಂಬೈಯ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ ಶೆಟ್ಟಿ ಮಾತನಾಡಿ, ಕೇಂದ್ರ, ರಾಜ್ಯ ಸರಕಾರ ಹಾಗೂ ಕೆಲವು ಖಾಸಗಿ ಕಂಪನಿಗಳೊಂದಿಗೆ ಸೇರಿ ಯುವಜನರ ವಿದ್ಯಾಭ್ಯಾಸ ಉದ್ಯೋಗದ ಸಲುವಾಗಿ ಅನೇಕ ಯೋಜನೆಗಳನ್ನು ಕೈಗೊಂಡಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು. ಬಂಟರ ಸಂಘ ಮುಂಬೈ ಹಾಗೂ ತನ್ನ ಸಂಜೀವಿನಿ ಟ್ರಸ್ಟ್ ನ ಮೂಲಕ ಅಸಹಾಯಕ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದೇನೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಟ್ರಸ್ಟಿಗಳು, ಮಾಜಿ ಅಧ್ಯಕ್ಷರು, ಉಪಸಮಿತಿಯ ಕಾರ್ಯಾಧ್ಯಕ್ಷರು ಅತಿಥಿ ಗಣ್ಯರನ್ನು ಹೂಗುಚ್ಛ ನೀಡಿ ಗೌರವಿಸಿದರು. ಬಾಂಬೆ ಬಂಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಕಿಶೋರ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶೇಖರ ಆರ್ ಶೆಟ್ಟಿ, ಕೋಶಾಧಿಕಾರಿ ಸಿಎ ವಿಶ್ವನಾಥ್ ಎಸ್ ಶೆಟ್ಟಿ, ಶೈಕ್ಷಣಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ್ ಕೆ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯರಾಜ್ ರೈ, ಜೊತೆ ಕೋಶಾಧಿಕಾರಿ ಸಿಎ ದಿವಾಕರ ಕೆ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತ ಎನ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರತೀಕ್ ಪಿ ಶೆಟ್ಟಿ ಉಪಸ್ಥಿತರಿದ್ದರು. ಪತ್ರಕರ್ತ ದಯಾಸಾಗರ್ ಚೌಟ ಕಾರ್ಯಕ್ರಮ ನಿರೂಪಿಸಿ, ಗೌರವ ಕಾರ್ಯದರ್ಶಿ ನ್ಯಾಯವಾದಿ ಶೇಖರ ಆರ್ ಶೆಟ್ಟಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಜೆಕಾರು ಬಾಲಕೃಷ್ಣ ಶೆಟ್ಟಿ ನಿರ್ದೇಶನದಲ್ಲಿ ಬಾಂಬೆ ಬಂಟ್ಸ್ ಅಸೋಶಿಯೇಷನ್ ನ ಪದಾಧಿಕಾರಿಗಳು, ಸದಸ್ಯರು ಹಾಗೂ ನುರಿತ ಕಲಾವಿದರಿಂದ ಶಿವ ಪಂಚಾಕ್ಷರಿ ಮಹಾತ್ಮೆ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು. ಕಿಕ್ಕಿರಿದ ಜನ ಸಮೂಹವನ್ನು ಮಂತ್ರಮುಗ್ದರನ್ನಾಗಿಸಿ, ಯಕ್ಷಗಾನವನ್ನು ವಿಭಿನ್ನವಾಗಿ ಆಡಿ ತೋರಿಸಿದರು. ಊರಿನ ಪ್ರಸಿದ್ದ ಕಲಾವಿದರು ಎಂದಿನಂತೆ ಉತ್ತಮ ಪ್ರದರ್ಶನ ನೀಡಿದರೆ, ಅಸೋಷಿಯೇಷನ್ ಸದಸ್ಯರು, ನಾವು ಕೂಡಾ ಯಾರಿಗೂ ಕಡಿಮೆಯಿಲ್ಲ ಎಂಬ ರೀತಿಯಿಂದ ಅಭಿನಯಿಸಿ ಪ್ರೇಕ್ಷರ ಮನಗೆದ್ದರು. ಕಲಾಭಿಮಾನಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.