ಸಮಾಜದಲ್ಲಿ ಉಳ್ಳವರು, ಮಧ್ಯಮ ವರ್ಗದವರು ಮತ್ತು ಅದಕ್ಕಿಂತ ಆರ್ಥಿಕವಾಗಿ ಹಿಂದುಳಿದವರು ಇದ್ದೇ ಇರುತ್ತಾರೆ. ಶಿಕ್ಷಣ, ಆರೋಗ್ಯ, ಉದ್ಯೋಗ ಹೀಗೆ ಬಹು ಬಗೆಯಲ್ಲಿ ಸಮುದಾಯದ ಸಮಗ್ರ ಪ್ರಗತಿಗಾಗಿ ಉಳ್ಳವರಿಂದ ಬೇಡಿ ಇಲ್ಲದವರಿಗೆ ನೀಡಿ ಅವರ ಅವಶ್ಯಕತೆಗಳನ್ನು ಪೂರೈಸಬೇಕು. ಬಂಟರಲ್ಲೂ ಈ ರೀತಿಯ ಸ್ಥಿತಿಗತಿಗಳ ಮಂದಿ ಇರುವುದು ಸಹಜ. ಅದನ್ನೆಲ್ಲಾ ನಿವಾರಿಸಿ ತಕ್ಕಮಟ್ಟಿಗೆ ಎಲ್ಲರ ಕ್ಷೇಮ ಚಿಂತನೆ ಮಾಡಲು ಪ್ರಯತ್ನಿಸೋಣ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಕರೆ ನೀಡಿದರು. ಮೂಡಬಿದ್ರಿ ವಿದ್ಯಾಗಿರಿಯ ಆಳ್ವಾಸ್ ಕ್ಯಾಂಪಸ್ ನ ಕೃಷಿ ಸಿರಿ ವೇದಿಕೆಯಲ್ಲಿ ಆಗಸ್ಟ್ 3 ರಂದು ಮೂಡಬಿದ್ರಿ ಬಂಟರ ಸಂಘದ ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಮೂರನೇ ವರ್ಷದ ಆಟಿಡೊಂಜಿ ದಿನ, ಪ್ರತಿಭಾ ಪುರಸ್ಕಾರ ಸನ್ಮಾನ, ಸಹಾಯಧನ ವಿತರಣೆ, ಅಡುಗೆ ಸ್ಪರ್ಧೆ, ಸಾಂಸ್ಕೃತಿಕ ಕಲಾಪಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷವಾಗಿ ಉಪಸ್ಥಿತರಿದ್ದು ಮಾತನಾಡಿದ ಶ್ರೀಯುತರು ಎಲ್ಲಾ ಸಮಾಜದವರನ್ನು ಪ್ರೀತಿಸುತ್ತಾ 35 ವರ್ಷಗಳಿಂದಲೂ ಬಂಟರ ಸಂಘದ ಜೊತೆ ಓಡಾಡಿಕೊಂಡು ಬರುತ್ತಿರುವ ತಾನು ಹುಟ್ಟು ಸಾವುಗಳ ನಡುವೆ ಇರುವ ಜೀವನವನ್ನು ಸಮಾಜ ಸೇವೆಯ ಮೂಲಕ ಸಾರ್ಥಕಗೊಳಿಸಬೇಕಾಗಿದೆ ಎಂಬ ತಿಳುವಳಿಕೆಯನ್ನು ಹೊಂದಿದ್ದೇನೆ ಎಂದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಹಿಳೆಯರು ಸಸಕ್ತರಾದಂತೆಲ್ಲ ಇಡೀ ಸಮಾಜವೇ ಸದೃಢವಾಗುವುದು. ಈ ದಿಸೆಯಲ್ಲಿ ಮೂಡುಬಿದರೆ ಬಂಟರ ಮಹಿಳಾ ಘಟಕದ ಆಶಯ, ಪ್ರಯತ್ನ ಶ್ಲಾಘನೀಯಎಂದರು. ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮುಖ್ಯ ಅತಿಥಿ ಸ್ಥಾನದಲ್ಲಿ ಮಾತನಾಡಿ, ಬಂಟರು ಯಾವತ್ತೂ ತೆರೆದ ಹಸ್ತವಾಗದೆ ಮುಷ್ಟಿ ಸ್ವರೂಪದಲ್ಲಿ ಗಟ್ಟಿತನದಲ್ಲಿ ಒಗ್ಗಟ್ಟಾಗಿರುವವರು. ಮಹಿಳೆಯರು ಸೂಜಿಯಂತೆ ಸಮಾಜವನ್ನು ಜೋಡಿಸುವ ಕೆಲಸವನ್ನು ಮಾಡಬೇಕೆ ಹೊರತು, ಕತ್ತರಿಯಂತೆ ಬೇರ್ಪಡಿಸುವ ಕೆಲಸವನ್ನು ಯಾವತ್ತೂ ಮಾಡುವವರಲ್ಲ ಎಂದು ಶ್ಲಾಘಿಸಿದರು. ಕಂಬಳದ ಪ್ರಧಾನ ತೀರ್ಪುಗಾರ, ಚಲನಚಿತ್ರ ನಟ ರಾಜೀವ ಶೆಟ್ಟಿ ಎಡ್ತೂರುರವರು ಆಷಾಢದ ನುಡಿ ಇತ್ತರು. ತುಳುನಾಡ ಪಾರಂಪರಿಕ ಆಚರಣೆಗಳು, ಸಂಪ್ರದಾಯಗಳು ಆಹಾರ, ಔಷಧ ಕ್ರಮಗಳು ಇದರ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿ, ಶ್ರೀಮತಿ ಪ್ರೇಮಲತಾ ಶೆಟ್ಟಿ ಖಂಡಿಗ ಬೆಳವಾಯಿ, ಗುರುಪುರ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ, ವಸಂತ ಶೆಟ್ಟಿ ಕೇದಗೆ ಅಧ್ಯಕ್ಷರು ಬಂಟರ ಸಂಘ ವಾಮದಪದವು, ಬಂಟ್ವಾಳ ಬಂಟರ ಸಂಘದ ಕೋಶಾಧಿಕಾರಿಗಳಾದ ಲೋಕೇಶ್ ಶೆಟ್ಟಿ ಕುಳ, ಬಂಟರ ಮಹಿಳಾ ಘಟಕದ ಕೋಶಾಧಿಕಾರಿಗಳಾದ ಗೀತಾ ಪಿ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಅತಿಥಿಗಳ ಪರಿಚಯವನ್ನು ಶ್ರೀಮತಿ ಅನಿತಾ ಶೆಟ್ಟಿಯವರು ಮಾಡಿಕೊಟ್ಟರು. ಸಂಘದ ವರದಿಯನ್ನು ಕಾರ್ಯದರ್ಶಿ ಸೌಮ್ಯ ಎಸ್ ಶೆಟ್ಟಿ ವಾಚಿಸಿದರು. ಶ್ರೀಮತಿ ರಂಜಿತಾ ಶೆಟ್ಟಿ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಯೋಜಿಸಿದರು. ಲಯನ್ ಶಿವಪ್ರಸಾದ್ ಹೆಗ್ಡೆಯವರು ಕಾರ್ಯಕ್ರಮ ನಿರೂಪಿಸಿ, ಹರಿಣಾಕ್ಷಿ ಶೆಟ್ಟಿ ವಂದಿಸಿದರು.
ಆಟಿಡೊಂಜಿ ದಿನ ಕಾರ್ಯಕ್ರಮದ ಅಂಗವಾಗಿ ಅದೇ ದಿನ ಬೆಳಗ್ಗೆ ನಡೆದ ರಂಗೋಲಿ ಸ್ಪರ್ಧೆ, ಅಡುಗೆ ಸ್ಪರ್ಧೆ, ಛದ್ಮವೇಷ ಸ್ಪರ್ಧೆ ಕಾರ್ಯಕ್ರಮವನ್ನು ಮೇಘನಾಥ ಶೆಟ್ಟಿ ಉದ್ಘಾಟಿಸಿದರು.
ಮುಖ್ಯ ಅಥಿತಿಗಳಾಗಿ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ವಿಜಯಲಕ್ಷ್ಮಿ ಮಾರ್ಲ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಬಂಟರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೋಭಾ ಎಸ್ ಹೆಗ್ಡೆ ವಹಿಸಿದ್ದರು.