ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಗಂಭೀರ ಸಮಸ್ಯೆಯಾಗಿರುವ ತಾಪಮಾನದ ಏರುವಿಕೆಗೆ ಕಡಿವಾಣವನ್ನು ಹಾಕುವುದರೊಂದಿಗೆ ಪರಿಸರವನ್ನು ರಕ್ಷಿಸಿ ಅದನ್ನು ಕಾಪಾಡಿಕೊಳ್ಳುವುದು ಪ್ರಜ್ಞಾವಂತ ನಾಗರೀಕರಾದ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವು ಪರಿಸರವನ್ನು ಉಳಿಸಿದರೆ ಮಾತ್ರ ನಮ್ಮನ್ನು ಪರಿಸರ ಉಳಿಸುತ್ತದೆ. ಇಂದು ವನಮಹೋತ್ಸವ ಆಚರಣೆಯ ನಿಮಿತ್ತ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಬಂಟರ ಸಂಘ ಮುಂಬಯಿ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯು ಪರಿಸರ ಸಂರಕ್ಷಣೆ ಬಗ್ಗೆ ಮಾಡುತ್ತಿರುವ ಸೇವೆಯನ್ನು ಮುಖ್ಯ ಅತಿಥಿ ಡಾ| ಪಿ.ವಿ ಶೆಟ್ಟಿಯವರು ಶ್ಲಾಘಿಸಿದರು. ಅವರು ಬಂಟರ ಸಂಘ ಮುಂಬಯಿ, ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯು ಜುಲೈ 30 ರಂದು ದಹಿಸರ್ ಪೂರ್ವದ ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನವನ, ಎನ್ಎಲ್ ಕಾಂಪ್ಲೆಕ್ಸ್ ನಲ್ಲಿ ಹಮ್ಮಿಕೊಂಡ ವನಮಹೋತ್ಸವ ಆಚರಣೆಯ ಅಂಗವಾಗಿ ಸಸಿ ನೆಡುವ ಅಭಿಯಾನದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಗೌರವ ಅತಿಥಿಗಳಾಗಿ ಆಗಮಿಸಿದ ಸ್ಥಳೀಯ ಮಾಜಿ ಕಾರ್ಪೊರೇಟರ್ ಜಗದೀಶ್ ಕೃಪಾಶಂಕರ್ ಓಝಾ ಮಾತನಾಡಿ, ಈ ಕಾರ್ಯಕ್ರಮವನ್ನು ಪ್ರಧಾನಮಂತ್ರಿಯವರ “ಏಕ್ ಪ್ಲಾಂಟ್ ಅಪ್ನೆ ಮಾಂ ಕೆ ನಾಮ್” ಅಭಿಯಾನಕ್ಕೆ ಪೂರಕವಾಗಿದೆ ಎಂದರು. ಮಾಜಿ ಸಂಸದ ಗೊಪಾಲ್ ಶೆಟ್ಟಿಯವರು ಇಲ್ಲಿ ಸ್ಥಾಪಿಸಿದ ಶಿವಾಜಿ ಪ್ರತಿಮೆ ನಮ್ಮೆಲ್ಲರ ಗೌರವದ ಸಂಕೇತವಾಗಿದೆ. ಇಲ್ಲಿ ನಿರಂತರವಾಗಿ ಕ್ರೀಡೆಗೆ ಪ್ರೋತ್ಸಾಹ ನೀಡಿಕೊಂಡು ಬರುತ್ತಿರುವ ದಯಾನಂದ ಶೆಟ್ಟಿ (ಕ್ರಿಕೆಟ್) ಹಾಗೂ ಪ್ರೇಮನಾಥ್ ಶೆಟ್ಟಿಯವರನ್ನು (ವಾಲಿಬಾಲ್) ಶ್ಲಾಘಿಸಿ ಮತ್ತು ಪರಿಸರದ ಕಾಳಜಿಯೊಂದಿಗೆ ಮನ್ನಡೆಯುತ್ತಿರುವ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿ ಹಾಗೂ ಉಡಾನ್ ತಂಡದ ಕಾರ್ಯವನ್ನು ಕೊಂಡಾಡಿದರು. ನನ್ನ ಸಾರ್ವಜನಿಕ ಜೀವನದಲ್ಲಿ ನನಗೆ ಸದಾ ಪ್ರೇರಣೆ ನೀಡಿ ನನ್ನನ್ನು ಬೆಂಬಲಿಸುತ್ತಿರುವವರು ಡಾ| ಪಿ.ವಿ ಶೆಟ್ಟಿ, ಡಾ| ಹರೀಶ್ ಶೆಟ್ಟಿ ಮತ್ತು ಡಾ| ಸತೀಶ್ ಶೆಟ್ಟಿಯವರು ಎಂದರು.
ಬಂಟರ ಸಂಘದ ಬೊರಿವಲಿ ಶಿಕ್ಷಣ ಸಂಸ್ಥೆಯ ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್ ಪಯ್ಯಡೆಯವರು ಮಾತನಾಡುತ್ತಾ, ಮಾನವನು ನಾಗರೀಕನಾದಂತೆ ಕಾಡನ್ನು ಕಡಿದು ನಾಡನ್ನಾಗಿಸಿದನು. ಈಗ ಅದು ಮುುಂದುವರಿದು ಎಲ್ಲಿಗೆ ಮುಟ್ಟಿದೆಯೆಂದರೆ ನಾಡಿನೆಲ್ಲೆಡೆ ಮರಗಿಡಗಳನ್ನು ಬೆಳೆಸಿ ಅದರಲ್ಲಿ ಸ್ವಲ್ಪ ಭಾಗವನ್ನು ಮರಳಿ ಕಾಡನ್ನಾಗಿಸುವ ಅನಿವಾರ್ಯತೆ ಬಂದೊದಗಿದೆ ಎಂದರು. ಬಂಟರ ಸಂಘದ ಯುವ ವಿಭಾಗದ ಉಪಾಧ್ಯಕ್ಷ ಗೌರವ್ ಆರ್ ಪಯ್ಯಡೆ, ದಹಿಸರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಮ್ ಪೊಟೆ, ಬಿಎಂಸಿಯ ಸಹಾಯಕ ಅರಣ್ಯ ರಕ್ಷಕ ಅಧಿಕಾರಿ ಶ್ರೀಮತಿ ಜಯಶ್ರೀ ಜಾದವ್, ಡಫೋಡಿಲ್ಸ್ ಹೋಟೆಲ್ಗಳ ಸಮೂಹದ ಡಾ| ಹರೀಶ್ ಶೆಟ್ಟಿ ಮತ್ತು ಡಾ| ಸತೀಶ್ ಶೆಟ್ಟಿ, ಗಾಂವ್ದೇವಿ ಮಂದಿರದ ಟ್ರಸ್ಟಿ ವಿವೇಕ್ ಬೊಯಿರ್, “ಉಡಾನ್” ಸಂಘಟನೆಯ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಶಿರೀಷ್ ಪಾರಿಖ್, ರಾಜಕಾರಿಣಿಗಳಾದ ನ್ಯಾ. ಪೂನಂ ಪಾಂಡೆ ಮತ್ತು ನಿಲೇಶ್ ಎಸ್ ದೇಶ್ ಮುಖ್ ಮೊದಲಾದವರು ಉಪಸ್ಥಿತರಿದ್ದು, ಸಂಧರ್ಭೋಚಿತವಾಗಿ ಮಾತನಾಡಿ ಸಸಿಗಳನ್ನು ನೆಟ್ಟು ಶುಭ ಹಾರೈಸಿದರು.
ಪ್ರಾರಂಭದಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸುತ್ತಾ, ವೃಕ್ಷಗಳು ಭೂಮಿಯ ಆಭರಣಗಳಾಗಿವೆ. ನಾವೆಲ್ಲರೂ ಒಟ್ಟಾಗಿ ವೃಕ್ಷಗಳನ್ನು ನೆಟ್ಟು ಬೆಳೆಸೋಣ. ಇಂದು ಜಗತ್ತು ಹವಾಮಾನ ಬದಲಾವಣೆ, ತಾಪಮಾನ ಏರುವಿಕೆ ಮತ್ತು ಮಾಲಿನ್ಯದ ಗಂಭೀರ ಸಮಸ್ಯೆಗಳಿಂದ ನರಳುತ್ತಿದೆ. ಈ ಸಮಸ್ಯೆಗಳಿಗೆ ಮುಖ್ಯ ಕಾರಣವೆಂದರೆ ವೃಕ್ಷಗಳ ಅತಿಯಾದ ನಾಶ. ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಶುದ್ಧ ಗಾಳಿಯನ್ನೂ ಖರೀದಿಸಬೇಕಾದ ದಿನ ದೂರವಿಲ್ಲ. ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ವೃಕ್ಷಗಳನ್ನು ನೆಟ್ಟು ಬೆಳೆಸೋಣ. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ ಎಂದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ ಮಾತನಾಡಿ, ವೃಕ್ಷಗಳಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದು ಮತ್ತು ಹವಾಮಾಲಿನ್ಯ ತಡೆಗೂ ಉಪಯೋಗವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ವಕ್ಷವನ್ನು ರಕ್ಷಿಸುವುದು ಬೆಳೆಸುವುದು ಅಗತ್ಯ ಎಂದರು.
ಅತಿಥಿಗಳನ್ನು ಶಾಲು, ಪುಷ್ಪಗುಚ್ಛ ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಬೊರಿವಲಿ ಶಿಕ್ಷಣ ಸಂಸ್ಥೆಯ ಕೋ. ಕನ್ವಿನರ್ ಅಶೋಕ್ ವಿ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮವನ್ನು ನಿರ್ವಹಿಸಿ ವಂದನಾರ್ಪಣೆ ಮಾಡಿದರು. ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ರಮೇಶ್ ಶೆಟ್ಟಿ, ಜತೆ ಕೋಶಾಧಿಕಾರಿ ರಮೇಶ್ ಎಚ್ ಶೆಟ್ಟಿ, ಸದಸ್ಯತ್ವ ಅಭಿಯಾನದ ಕಾರ್ಯಾಧ್ಯಕ್ಷ ಪ್ರವೀಣ್ ಜೆ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಧೀರಜ್ ಡಿ ರೈ, ಸಂಕೇಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್ ಹೆಗ್ಡೆ, ಕಾರ್ಯದರ್ಶಿ ಸರಿತಾ ಎಂ ಶೆಟ್ಟಿ, ಕೋಶಾಧಿಕಾರಿ ಶುಭಾಂಗಿ ಎಸ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್ ಶೆಟ್ಟಿ, ಕೋಶಾಧಿಕಾರಿ ವಿಭಾ ಶೆಟ್ಟಿ, ಜೊತೆ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಜೊತೆ ಕೋಶಾಧಿಕಾರಿ ವಿಶ್ವಾಸ್ ಶೆಟ್ಟಿ, ಗೌರವ್ ಪಯ್ಯಡೆ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಎಲ್ಲಾ ಅತಿಥಿಗಳು ಮತ್ತು ನೆರೆದ ಸಭಿಕರು ಉದ್ಯಾನವನದ ನಿಗದಿತ ಪ್ರದೇಶಕ್ಕೆ ತೆರಳಿ ಸಸಿಗಳನ್ನು ನೆಟ್ಟರು. ಕೊನೆಯಲ್ಲಿ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಚಿತ್ರ, ವರದಿ : ದಿನೇಶ್ ಕುಲಾಲ್