ಬಂಟರ ಸಂಘ ಮುಂಬಯಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಆಶ್ರಯದಲ್ಲಿ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವು ಜುಲೈ 6 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮೀರಾ ರೋಡ್ ನ ವಿಜಯ್ ಪಾರ್ಕ್ ಬಳಿ ಶಾಂತಿ ಪಾರ್ಕ್ ನ ಸ್ವಸ್ತಿಕ್ ಅಂಬರ್ ಪ್ಲಾಜಾ ಬ್ಯಾಂಕ್ವೆಟ್ಸ್ ನಲ್ಲಿ ನಡೆಯಿತು. ರಕ್ತದಾನ ಶಿಬಿರವನ್ನು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದ ಬಳಿಕ ಮಾತನಾಡುತ್ತಾ, ಯುವ ವಿಭಾಗದ ಸದಸ್ಯರು ಬಹಳ ಉತ್ಸಾಹದಿಂದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಯಾವುದೇ ಕಂಪನಿಗಳಲ್ಲಿ ಉತ್ಪತ್ತಿ ಮಾಡಲಾಗದ ರಕ್ತ ಮನುಷ್ಯನ ಶರೀರದಲ್ಲಿ ಉತ್ಪತ್ತಿಯಾಗುವುದರಿಂದ ಇನ್ನೊಬ್ಬರ ಬದುಕಿಗೆ ಅಗತ್ಯವಿರುವ ಸಂದರ್ಭದಲ್ಲಿ ದಾನ ಮಾಡಬೇಕು. ರಕ್ತದಾನಕ್ಕೆ ಭಯಪಡುವ ಅಗತ್ಯವಿಲ್ಲ. ಅದರಿಂದ ಮತ್ತೊಬ್ಬರ ಜೀವ ಉಳಿಯುವಂತಾಗುತ್ತದೆ. ಪ್ರಾದೇಶಿಕ ಸಮಿತಿಯಲ್ಲಿ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ರವೀಂದ್ರ ಶೆಟ್ಟಿ ಕೊಟ್ರಪಾಡಿಯವರು ಬಹಳಷ್ಟು ಸಮಾಜದ ಬಂಧುಗಳಿಗೆ ಆಶಯವಾಗುವ ರೀತಿಯಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ ಎಂದು ನುಡಿದರು.

ಮುಖ್ಯ ಅತಿಥಿ ಮೀರಾ ಭಯಂದರ್ ಶಾಸಕ ನರೇಂದ್ರ ಎಲ್ ಮೆಹ್ತಾ ಮಾತನಾಡಿ, ಪ್ರದೇಶದ ತುಳು ಕನ್ನಡಿಗರ ಆರೋಗ್ಯ ಮತ್ತು ಶೈಕ್ಷಣಿಕವಾಗಿ ಬಲಿಷ್ಠಗೊಳ್ಳಲು ಬಂಟರ ಸಂಘದ ಪ್ರಾದೇಶಿಕ ಸಮಿತಿಯು ಬಹಳಷ್ಟು ಜನಪರ ಕಾರ್ಯಗಳನ್ನು ಮಾಡುತ್ತಿದೆ. ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಮೀರಾ ಭಯಂದರ್ ನಲ್ಲಿ ಎಲ್ಲಾ ಅನುಕೂಲಗಳು ಇವೆ. ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚು ಜವಾಬ್ದಾರಿ ವಹಿಸಬೇಕು ಎಂದು ನುಡಿದರು. ಮುಂಬಯಿ ಬಂಟರ ಸಂಘದ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡಿ, ರಕ್ತದಾನದ ಬಗ್ಗೆ ಭಯಪಡದೆ ಪ್ರತಿಯೊಬ್ಬರು ರಕ್ತದಾನವನ್ನು ಮಾಡುವಂತಾಗಬೇಕು. ಈ ಪ್ರಾದೇಶಿಕ ಸಮಿತಿಯ ಎಲ್ಲರೂ ರಕ್ತದಾನ ಮಾಡುವುದಕ್ಕೆ ಉತ್ಸಾಹದಿಂದ ಸೇರಿಕೊಂಡಿದ್ದಾರೆ. ರಕ್ತದಾನವನ್ನು ಮಾಡುವುದರಿಂದ ಶರೀರಕ್ಕೆ ಉತ್ತಮ. ಎಲ್ಲರಿಗೂ ರಕ್ತ ನೀಡುವುದಕ್ಕೆ ಆಗುವುದಿಲ್ಲ. ಬಂಟರ ಸಂಘ ಆರೋಗ್ಯ ಮತ್ತು ಶಿಕ್ಷಣಕ್ಕೆ ಅತೀ ಹೆಚ್ಚು ಮಹತ್ವ ನೀಡುತ್ತಾ ಸಮಾಜದ ಜನರಿಗೆ ಸಹಕಾರಿಯಾಗುತ್ತಿದೆ ಎಂದು ನುಡಿದರು.
ಸ್ತ್ರೀರೋಗ ತಜ್ಞೆ ಡಾ. ಪ್ರತಾಸ್ವಿನಿ ಶೆಟ್ಟಿ ಸಲಹೆ ಸೂಚನೆಗಳನ್ನು ನೀಡುತ್ತಾ, ಬಂಟರ ಸಂಘದ ಈ ಪ್ರಾದೇಶಿಕ ಸಮಿತಿಯು ಸಮಾಜದ ಜನರ ಕಾಳಜಿಯನ್ನು ಹೆಚ್ಚು ವಹಿಸುತ್ತಿದೆ. ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಹೆಚ್ಚು ಗಮನದಲ್ಲಿ ಇಡಬೇಕು. ಅದರಲ್ಲೂ ಮಹಿಳೆಯರು ತಮಗೆ ಯಾವುದೇ ಕಾಯಿಲೆಗಳು, ಆರೋಗ್ಯದಲ್ಲಿ ಏರುಪೇರುಗಳಾದಾಗ ವೈದ್ಯರನ್ನು ಸಂಪರ್ಕಿಸಬೇಕು. ಆದ್ದರಿಂದ ಅವರ ಆರೋಗ್ಯ ಸ್ಥಿತಿ ಸುಧಾರಿಸಿಕೊಳ್ಳಬಹುದು. ವ್ಯಾಯಾಮ ಯೋಗ ಮಾಡುವ ಅಭ್ಯಾಸವನ್ನು ಮಾಡಬೇಕು ಎಂದು ನುಡಿದರು. ಪ್ರಾದೇಶಿಕ ಸಮಿತಿಯ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು ಬಂಟರ ಸಂಘದ ಯೋಜನೆಗಳ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ, ಶುಭರಂಭ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಅರವಿಂದ್ ಎ ಶೆಟ್ಟಿ, ಡಾ. ಗೌರೀಶ್ ಶೆಟ್ಟಿ (ಮಲ್ಲಿಕಾ ಹೆಲ್ತ್ ಕ್ಲಿನಿಕ್), ಡಾ. ಸಾಯಿನಾಥ್ ಹೆಗ್ಡೆ (ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಹೃದಯ ಶಸ್ತ್ರಚಿಕಿತ್ಸಕ), ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಜೊತೆ ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವೃಷಬ್ ಶೆಟ್ಟಿ, ಉಪಾಧ್ಯಕ್ಷ ಸುಶಾಂತ್ ಶೆಟ್ಟಿ, ಕಾರ್ಯದರ್ಶಿ ನಿರೀಕ್ಷಾ ಶೆಟ್ಟಿ, ಖಜಾಂಚಿ ಸ್ವಾತಿ ಶೆಟ್ಟಿ, ಜೊತೆ ಕಾರ್ಯದರ್ಶಿ ಅನುಷಾ ಶೆಟ್ಟಿ ಉಪಸ್ಥಿತರಿದ್ದರು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ, ಸ್ವಾಗತಿಸಿದರು. ಯುವ ವಿಭಾಗದ ಕಾರ್ಯಾಧ್ಯಕ್ಷ ವೃಷಬ್ ಶೆಟ್ಟಿ ಯುವ ವಿಭಾಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ರಕ್ತದಾನ ಶಿಬಿರದ ಬಗ್ಗೆ ತಿಳಿಸಿದರು. ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ ಧನ್ಯವಾದ ನೀಡಿದರು. ಚಲನಚಿತ್ರ ನಟ ಪ್ರತಿಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಸಂತಿ ಆಶೋಕ್ ಶೆಟ್ಟಿ ಪ್ರಾರ್ಥನೆ ಮಾಡಿದರು.
ಚಿತ್ರ, ವರದಿ : ದಿನೇಶ್ ಕುಲಾಲ್