ಅವಕಾಶ ವಂಚಿತ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಕಲಾ ನೈಪುಣ್ಯತೆಯನ್ನು ಬೆಳಗಿಸಿ ಸಂಸ್ಕಾರ ಬದ್ಧ ಬುನಾದಿಯನ್ನು ಹಾಕಿಕೊಡುವ ವಿಶಿಷ್ಟ ಯೋಜನೆ ಯಕ್ಷಧ್ರುವ ಯಕ್ಷ ಶಿಕ್ಷಣವು ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಇದರ ಕನಸಾಗಿದೆ. ಮೂರನೇ ಶೈಕ್ಷಣಿಕ ಸಾಲಿಗೆ ಪಾದಾರ್ಪಣೆ ಮಾಡುತ್ತಿರುವ ಯಕ್ಷ ಶಿಕ್ಷಣ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಜುಲೈ 1 ರಂದು ಹಮ್ಮಿಕೊಳ್ಳಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗುವುದರ ಮೂಲಕ ಯಕ್ಷಧ್ರುವ ಯಕ್ಷ ಶಿಕ್ಷಣಕ್ಕೆ ಚಾಲನೆ ನೀಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಮಾತನಾಡಿ, ಯಾವುದೇ ಕಲೆಗಳನ್ನು ಒಲಿಸಿಕೊಳ್ಳಲು ಅದಕ್ಕೆ ಋಣಾನುಬಂಧ ಬೇಕು. ಕಷ್ಟದ ದಿನಗಳಲ್ಲೂ ಕೂಡ ಯಕ್ಷಗಾನದ ಒಲವಿಗೆ ಶರಣಾಗಿ ಮೇಲೆದ್ದ ಅನೇಕ ಕಲಾವಿದರ ಪಾಲಿಗೆ ಕೊರತೆಯಾಗದಂತೆ ಈ ಕಾಲಘಟ್ಟವು ವಿನೂತನ ಪ್ರಯೋಗದ ಮೂಲಕ ಯಕ್ಷಗಾನದ ಪ್ರತಿಭೆಗಳನ್ನು ಬೆಳೆಸುತ್ತಿದೆ. ಪಟ್ಲ ಫೌಂಡೇಶನ್ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದೆ ಎಂದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಿಕೆ ಮಾತನಾಡಿ, ಯಕ್ಷ ಪ್ರತಿಭೆಗಳಿಗೆ ಪಟ್ಲ ಫೌಂಡೇಶನ್ ಎನ್ನುವುದು ಒಂದು ಆಶಾಕಿರಣವಾಗಿದೆ. ತಳ ಮಟ್ಟದಿಂದ ತುತ್ತ ತುದಿಯವರೆಗೆ ಯಕ್ಷಗಾನದ ರಂಗನ್ನು ಬಯಲುಗೊಳಿಸಿದ ಹಿರಿಮೆ ಪಟ್ಲ ತಂಡಕ್ಕೆ ಸಲ್ಲುತ್ತದೆ. ನಮ್ಮ ಸೀಮೆಯ ಗಂಡು ಕಲೆ ಯಕ್ಷಗಾನವನ್ನು ಮನೆ ಮನೆಗೂ ಬಿತ್ತರಿಸಿ ಆ ಮೂಲಕ ಸಾಮೂಹಿಕ ಯಕ್ಷ ಪ್ರತಿಭೆಗಳನ್ನು ಹುಟ್ಟು ಹಾಕುವ ವಿನೂತನ ಕಾರ್ಯ ಯೋಜನೆ ವಿಶಿಷ್ಟವಾಗಿದೆ. ನಗರ ಗ್ರಾಮ್ಯವೆನ್ನದೇ ಶಾಲಾ ವಿದ್ಯಾರ್ಥಿಗಳನ್ನು ಯಕ್ಷಧ್ರುವ ಯಕ್ಷ ಶಿಕ್ಷಣದ ಮೂಲಕ ಯಕ್ಷರಂಗಕ್ಕೆ ಪ್ರವೇಶಗೊಳಿಸುವ ಪಟ್ಲ ಫೌಂಡೇಶನ್ ಕಾರ್ಯ ಸಾಧನೆ ಪ್ರಶಂಸಾರ್ಹ ಎಂದರು.
ಯಕ್ಷಗಾನ ಗುರುಗಳಾಗಿ ಕಟೀಲು ಮೇಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಅಶ್ವತ್ ಮಂಜನಾಡಿ ಮಾತನಾಡಿ, ಎಲ್ಲಾ ಪ್ರಬುದ್ಧ ಯಕ್ಷಗಾನ ಕಲಾವಿದರ ಸಂಪನ್ಮೂಲ ಕ್ರೋಢೀಕರಿಸಿ ಈ ಬಾರಿ ಸಿದ್ಧವಾಗಿರುವ ಯಕ್ಷಗಾನ ಪುಸ್ತಕವು ಭವಿಷ್ಯದ ಪ್ರತಿಭೆಗಳನ್ನು ಒಂದೇ ಸೂರಿನಡಿ ಸೇರಿಸುವ ಪ್ರಯತ್ನ ಸಫಲವಾಗಲಿದೆ. ಪ್ರತಿಯೊಂದು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಯಕ್ಷಗಾನ ಒಂದು ಉತ್ತಮ ಮಾಧ್ಯಮವಾಗಿದ್ದು ಬಹಳಷ್ಟು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯವಲ್ಲಿ ಯಶಸ್ವಿಯಾಗಿದ್ದಾರೆ. ಪಟ್ಲ ಭಾಗವತರ ಕನಸನ್ನು ಈಡೇರಿಸುವಲ್ಲಿ ಪ್ರತಿಯೊಬ್ಬ ಗುರುಗಳು ಪ್ರಯತ್ನಿಸುತ್ತಿದ್ದಾರೆ ಎಂದರು. ನಂತರ ಯಕ್ಷ ಶಿಕ್ಷಣಕ್ಕೆ ದಾಖಲಾತಿ ಹೊಂದಿದ 60 ವಿದ್ಯಾರ್ಥಿಗಳಿಗೆ ಸಾಂಕೇತಿಕ ನಾಟ್ಯ ಬೋಧನೆ ಮಾಡಿದರು. ಈ ಸಂದರ್ಭದಲ್ಲಿ ಮಂಚಿ ಕೊಳ್ನಾಡು ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಯುಕ್ಷಗಾನ ರಂಗದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಕಾರ್ತಿಕ್ ಕುಲಾಲ್ ಮಂಚಿ ಹಾಗೂ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಯಕ್ಷ ಪ್ರತಿಭೆ ಕುಮಾರಿ ದಿವ್ಯಶ್ರೀ ಇವರನ್ನು ಗೌರವದಿಂದ ಅಭಿನಂದಿಸಲಾಯಿತು.
ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ವಿಟ್ಲ ಘಟಕದ ಗೌರವ ಮಾರ್ಗದರ್ಶಕರಾದ ದೇವಪ್ಪ ಶೇಖ ಪೀಲ್ಯಡ್ಕ, ಪ್ರಧಾನ ಸಂಚಾಲಕರಾದ ಅರವಿಂದ ರೈ ಮೂರ್ಜೆಬೆಟ್ಟು, ಸಂಘಟನಾ ಕಾರ್ಯದರ್ಶಿ ಪದ್ಮನಾಭ ಕುಡ್ತಮುಗೇರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಜಯಂತ ಕುಕ್ಕಾಜೆ, ಶಿಕ್ಷಕ ವೃಂದದ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲ ವಿಟ್ಲ ವಂದಿಸಿದರು. ಕಲಾವಿದ ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.