ಸುವರ್ಣ ಸಂಭ್ರಮದಲ್ಲಿರುವ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2024- 25 ನೇ ಸಾಲಿನ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೇ 22ರಂದು ಏರ್ಪಡಿಸಿತ್ತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಕಾರ್ಯಕ್ರಮವನ್ನು ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ. ಅಶೋಕ್ ಬಿ. ಹಿಂಚಿಗೇರಿ ದೀಪ ಬೆಳಗಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಉದ್ಯಮ, ಸಂಸ್ಕೃತಿ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧಕ ಮಂಗಳೂರಿನ ಮಹೇಶ್ ಮೋಟಾರ್ಸ್ ಮಾಲೀಕ ಎ.ಕೆ ಜಯರಾಮ ಶೇಖ ಅವರು ಈ ಬಾರಿಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಿದರು. ಫರಂಗಿಪೇಟೆಯ ಶ್ರೀರಾಮ ಪ್ರೌಢ ಪ್ರಾಥಮಿಕ ಶಾಲೆಯ ನವೀಕರಣ, ಬಡ ವಿದ್ಯಾರ್ಥಿಗಳಿಗೆ ನೆರವು, ಸ್ಥಳೀಯ ಶಿಕ್ಷಕರ ನೇಮಕಾತಿ, ಯಕ್ಷ ಶಿಕ್ಷಣ, ರಂಗಮಂದಿರ ಮತ್ತು ಜಯಪದ್ಮ ಸಭಾಂಗಣಗಳ ನಿರ್ಮಾಣ ಇತ್ಯಾದಿ ಶೈಕ್ಷಣಿಕ ಸೇವೆಗಳಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿದ ಅವರ ಸಾಧನೆಯನ್ನು ಪರಿಗಣಿಸಿ ಆರ್ಯಭಟ ಸಂಸ್ಥೆಯು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಹೆಚ್.ಎಲ್.ಎನ್. ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, ಹಿರಿಯ ಚಲನಚಿತ್ರ ನಟಿಯರಾದ ಪದ್ಮಶ್ರೀ ಭಾರತಿ ವಿಷ್ಣುವರ್ಧನ್, ಡಾ. ಜಯಮಾಲಾ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಸಂಗೀತ ನಿರ್ದೇಶಕ ಪ್ರೇಮಕವಿ ಕೆ.ಕಲ್ಯಾಣ್ ಅತಿಥಿಗಳಾಗಿದ್ದರು. ಸ್ವಾಗತ ಸಮಿತಿಯ ಡಾ. ಕೆ.ಎನ್ ಅಡಿಗ ಅಡೂರು, ಗುರುರಾಜ್, ಡಾ. ಬಸವರಾಜು, ಎಚ್.ಎಸ್. ಹನುಮಂತ ರಾವ್, ಮಂಗಳೂರಿನ ಪ್ರತಿನಿಧಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಸುಗ್ಗನಹಳ್ಳಿ ಷಡಕ್ಷರಿ ಹಾಗೂ ಸಾರ್ಥವಳ್ಳಿ ನಾರಾಯಣಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭಕ್ಕೆ ಮುನ್ನ ಆರ್ಯಭಟ ನೃತ್ಯೋತ್ಸವ ಹಾಗೂ ವಿದ್ವಾನ್ ಎಚ್.ಎಸ್ ವೇಣುಗೋಪಾಲ್ ಅವರ ನಿರ್ದೇಶನದಲ್ಲಿ 50 ಕೊಳಲು ವಾದಕರಿಂದ ಸಾಮೂಹಿಕ ವೇಣುವಾದನ ಜರಗಿತು.
