ಬಾಲ್ಯದಿಂದಲೂ ನಾವು ಅತೀವವಾಗಿ ಸಂಭ್ರಮಿಸುವ ಕ್ಷಣವೆಂದರೆ ಒಂದು ದೀಪಾವಳಿ ಹಬ್ಬ. ಮತ್ತೊಂದು ನೀಲಾವರ ರಥೋತ್ಸವ. ಮೊನ್ನೆಯ ದಿನ ನೀಲಾವರ ಹಬ್ಬ ಬಹಳ ಅದ್ದೂರಿಯಾಗಿ ನಡೆಯಿತು. ಎಷ್ಟೇ ಸಂತಸವಾದರೂ ಬಾಲ್ಯದ ಸವಿ ಈವಾಗ ಇಲ್ಲ, ನೀಲಾವರ ಹಬ್ಬಕ್ಕೆ ಮೂರು ತಿಂಗಳ ಹಿಂದೆಯೇ ತಯಾರಿ ನಡೆಯುತ್ತಿತ್ತು. ಒಂದಿಷ್ಟು ಗೇರು ಬೀಜವನ್ನು ಸಂಗ್ರಹಿಸಿ ಅದನ್ನು ಮಾರಿ ಹಬ್ಬಕ್ಕೆ ಖರ್ಚು ಮಾಡುತ್ತಿದ್ದ ನೆನಪುಗಳು ಇದ್ದವು. ಮನೆಯವರು ಕೊಟ್ಟ ಹಣ ಸಾಕಾಗುದಿಲ್ಲವೆಂದು ಜಗಳ ಮಾಡಿ ಪೆಟ್ಟು ತಿಂದು ಹಬ್ಬಕ್ಕೆ ಹೋಗುವುದಿಲ್ಲವೆಂದು ಸಿಟ್ಟು ಮಾಡಿ ಮೂಲೆಯಲ್ಲಿ ಕೂತು ಅದಕ್ಕೆ ಮತ್ತೆರಡು ಸೇರಿಸಿಕೊಟ್ಟು ಕಡೆಗೆ ಮುಖ ತೊಳೆದುಕೊಂಡು ಹಬ್ಬಕ್ಕೆ ಓಡುತ್ತಿದ್ದೆವು. ಬೆಳಿಗ್ಗೆ ಹಬ್ಬಕ್ಕೆ ಹೋದವರು ಮತ್ತೆ ವಾಪಸ್ಸು ಮನೆಗೆ ಬರುತ್ತಿದ್ದದ್ದು ರಾತ್ರಿಯೇ. ಇದ್ದ ಒಂದು ಅಂಗಡಿಯನ್ನು ಬಿಡುತ್ತಿರಲಿಲ್ಲ ಅದೆಷ್ಟು ಸುತ್ತು ಹಾಕಿದರೂ ಕಾಲಿಗೆ ದಣಿವು ಅನಿಸುತ್ತಿರಲಿಲ್ಲ. ವಸ್ತುಗಳಿಗೆ ರಿಂಗ್ ಹಾಕುವುದು, ಅದೃಷ್ಟ ಚೀಟಿಯಲ್ಲಿ ಐಸ್ ಕ್ರೀಮ್ ಈ ಆಟದಲ್ಲಿ ತಂದೆ ಕೊಟ್ಟ 20-30 ರೂಪಾಯಿ ಖಾಲಿಯಾಗಿ ಮನೆಯವರು ಹಬ್ಬಕ್ಕೆ ಎಷ್ಟೊತ್ತಿಗೆ ಬರುತ್ತಾರೆಂದು ದಾರಿ ಇಣುಕಿ ಇಣುಕಿ ಕುತ್ತಿಗೆ ಕೊಕ್ಕರೆಯಷ್ಟು ಉದ್ದವಾಗಿರುತ್ತಿತ್ತು. ನಾನು 8 ಐಸ್ ಕ್ರೀಮ್ ನಾನು 10 ಐಸ್ ಕ್ರೀಮ್ ತಿಂದೆ ಎಂದು ಗೆಳೆಯರ ಬಳಿ ಹೆಮ್ಮೆಯಿಂದ ಲೆಕ್ಕ ಹೇಳುವುದೇ ದೊಡ್ಡ ಸಾಧನೆಯ ಕ್ಷಣವಾಗಿತ್ತು. ಶಿಕ್ಷಣವನ್ನು ಅರ್ಧಕ್ಕೆ ಮೊಟುಕುಗೊಳಿಸಿ ಸಂಪಾದನೆಗಾಗಿ ಪರ ಊರನ್ನು ಸೇರಿಕೊಂಡವರು ಹಬ್ಬಕ್ಕೆ ಬರುವುದು ಖಾಯಂ ಆಗಿತ್ತು. ಅಂಥವರ ಹಿಂದೆ ನಾವು ತಿರುಗುವುದು ನಮಗೂ ಪ್ರತಿಷ್ಠೆಯ ಸಂಗತಿಯಾಗಿತ್ತು. ಬಾಲ್ ಐಸ್ಕ್ರೀಮ್ ಕೊಂಡು ಅದನ್ನು ತಿಂದು ಮರುದಿನ ಅದೇ ಪ್ಲಾಸ್ಟಿಕ್ ಚೆಂಡಿನಲ್ಲಿ ಕ್ರಿಕೆಟ್ ಆಡುವುದು ಶ್ರೀಮಂತಿಕೆಯ ದೃಷ್ಟಾಂತವಾಗಿತ್ತು. ಗೋಬಿ ಮಂಚೂರಿ ತೂಗುವ ತೊಟ್ಟಿಲುಗಳು ಇದು ನಾವು ಬದುಕಿನಲ್ಲಿ ನೋಡದಿರುವ ಸೋಜಿಗವಾಗಿತ್ತು. ಸಿಕ್ಕಿದನ್ನು ತಿಂದ್ರೆ ಆರೋಗ್ಯ ಕೆಡುತ್ತೆ ಶೀತವಾಗುತ್ತೆ ಎಂಬ ಪರಿವೆಯೇ ಇಲ್ಲವಾಗಿತ್ತು. ಇನ್ನೊಂದು ವಿಶೇಷವೆಂದರೆ ನಾವು ಹೋಗದಿದ್ರೆ ಹಬ್ಬವೇ ಆಗೋದಿಲ್ಲವೇನು ಎನ್ನುವ ವೈಯಕ್ತಿಕ ಅಹಂಕಾರ ಎಲ್ಲರಿಗಿತ್ತು.ಈಗ ವರುಷಗಳು ಕಳೆದಿದೆ. ನಮಗೂ ಆಸಕ್ತಿ ಕಡಿಮೆಯಾಗಿದೆ. ಹಬ್ಬಕ್ಕೆ ಹೋಗಬೇಕೆನ್ನುವ ತರಾತುರಿಯಿಲ್ಲ. ಆದರೂ ಹೆಚ್ಚಿನವರು ಹೋಗುತ್ತಾರೆ. ದೂರ ದೂರದ ಊರಿನಿಂದ ತಮ್ಮ ಮಕ್ಕಳೊಂದಿಗೆ ಬರುತ್ತಾರೆ. ಕಾರಣವಿಷ್ಟೇ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಲು, ತಮ್ಮ ಆವಾಗಿನ ಸಂಭ್ರಮವನ್ನು ಮಕ್ಕಳು ಸಂಸಾರದೊಂದಿಗೆ ಹಂಚಿಕೊಳ್ಳಲು, ದೇವಿಯನ್ನು ನಂಬಿ ಬದುಕುವವರು ಆಶೀರ್ವಾದ ಪಡೆಯಲು, ಅಪರೂಪಕ್ಕೆ ಸಿಗುವವರನ್ನು ಭೇಟಿಯಾಗಿ ಒಂದರೆಕ್ಷಣ ಕುಶಲೋಪರಿ ವಿಚಾರಿಸಲು. ಯಾರು ಇರಲಿ ಇಲ್ಲದಿರಲಿ ಹಬ್ಬ ನಡೆಯುತ್ತೆ ಒಂದಿಷ್ಟು ಮುಗ್ದ ಮನಸ್ಸುಗಳು ತಮ್ಮ ಬಾಲ್ಯವನ್ನು ಸಂಭ್ರಮಿಸುತ್ತೆ.

-ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ