ಕನ್ನಡ ಕಥಾ ಸಂಕಲನ ಅವಳೆಂದರೆ ಬರಿ ಹೆಣ್ಣೆ ಕನ್ನಡ ಕಥಾ ಲೋಕಕ್ಕೆ ಸೇರ್ಪಡೆಯಾದ ಒಂದು ಮೌಲ್ಯಯುತ ಕೃತಿ. ಕನ್ನಡ ಕಥಾ ಪರಂಪರೆಗೆ ಶತಮಾನಗಳ ಇತಿಹಾಸ ಇರುವುದಾದರೂ ಇಂದಿಗೂ ಭಿನ್ನ ರೀತಿಯ ನಿರೂಪಣೆಯೊಡನೆ ಉತ್ತಮ, ಅಪೂರ್ವ ಹಾಗೂ ಹೊಸ ಹೊಸ ಕಥಾವಸ್ತುವುಳ್ಳ ಕಥೆಗಳು ಸಾಹಿತ್ಯ ಲೋಕಕ್ಕೆ ದಕ್ಕುತ್ತಿರುವುದು, ಕಥಾಲೋಕ ಓದುಗರನ್ನು ಹೆಚ್ಚು ಹೆಚ್ಚು ಸೆಳೆಯುತ್ತಿರುವುದಕ್ಕೆ ಬಹು ಮುಖ್ಯ ಕಾರಣ. ಇಂತಹದೇ ಒಂದು ಅಪೂರ್ವ, ಭಿನ್ನ ಶೈಲಿಯ ನಿರೂಪಣೆಗಳುಳ್ಳ, ಬಹು ನೆಲೆಯ ಕಥಾ ವಸ್ತುಗಳನ್ನುಳ್ಳ ಕೃತಿ, ‘ಅವಳೆಂದರೆ ಬರಿ ಹೆಣ್ಣೆ’. ಈ ಕೃತಿಯಲ್ಲಿರುವ ಒಟ್ಟು ಹದಿಮೂರು ಕಥೆಗಳಲ್ಲಿ ಹೆಚ್ಚಿನ ಎಲ್ಲಾ ಕಥೆಗಳು ಹೆಣ್ಣು ಬದುಕಿನ ವಿವಿಧ ಮಜಲುಗಳನ್ನು ಚಿತ್ರಿಸುತ್ತವೆ. ಈ ಕಥೆಗಳನ್ನು, “ಪ್ರಯೋಗಾತ್ಮಕವಾಗಿ ಕಟ್ಟಿದ ಕಥೆಗಳು ಹಾಗು ಸಹಜ ಹರಿವಿನ ಕತೆಗಳು” ಎಂದು ಎರಡು ರೀತಿಯಲ್ಲಿ ಗುರುತಿಸಬಹುದು. ಆದರೆ ಎಲ್ಲಾ ಕಥೆಗಳಲ್ಲೂ ಇರುವ ಸಮಾನ ಗುಣವೆಂದರೆ ಜೀವಪರವಾದ ನೋಟ ಅಥವಾ ಸೂಕ್ಷ್ಮ ಸಂವೇದನೆಯ ಸ್ತೀಕೇಂದ್ರಿತ ನೋಟ. ಇಲ್ಲಿ ಯಾವುದೋ ರೀತಿಯಲ್ಲಿ ಶೋಷಣೆಗೊಳಗಾದ ಪಾತ್ರಗಳು ಸೋತು ಕೊರಗುವುದಿಲ್ಲ. ಇನ್ನಾವುದೋ ದಾರಿ ಕಂಡುಕೊಂಡು ಬಾಳುತ್ತಾರೆ.

ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮತ್ತೆ ಮತ್ತೆ ಕಾಣಸಿಗುವ ಹೆಣ್ಣಿನ ಪಾವಿತ್ರತೆಯ ಪ್ರಶ್ನೆ ಹಾಗೂ ಅಸಮ ದಾಂಪತ್ಯದಲ್ಲಿ ಗಂಡಿನ ಜಡತ್ವ, ಸಂವೇದನಾ ಶೂನ್ಯತೆಗೆ ಸಿಲುಕಿ ಮುರಿದು ಮುಕ್ಕಾಗುವ ಹೆಣ್ಣಿನ ಅಂತರಂಗದ ಶೋಧ ನಡೆಸುವ ಪ್ರಯತ್ನವನ್ನು ಇಲ್ಲಿಯ ಕಥೆಗಳು ಕಾಣಿಸುತ್ತವೆ. ‘ಕೈಧಾರೆ’ ಎನ್ನುವ ಕಥೆಯ ಒಂದು ಭಾಗವಾಗಿ ಬರುವ ದೈವಾರಾಧನೆಯಲ್ಲಿ ಭೂತ ಕಟ್ಟುವಾತ ಸಾಮಾನ್ಯತೆಯಿಂದ ದೈವತ್ವಕ್ಕೆ ಪ್ರವೇಶ ಪಡೆಯುವ ಹಾಗೂ ಆ ಘಳಿಗೆಯ ದೈವತ್ವಕ್ಕೆ ಭಕ್ತವೃಂದ ಕಾಯಾ ವಾಚಾ ಮನಸಾ ಶರಣಾಗುವ ಸೂಕ್ಷ್ಮ ಗಳಿಗೆಗೆ ಪೂರಕವಾಗುವಂತಹ ವಾತಾವರಣ ಹೇಗೆ ಕಟ್ಟಲ್ಪಡುತ್ತದೆ ಎಂಬುದನ್ನು ಸಾಂದ್ರವಾಗಿ ಕಟ್ಟಿಕೊಡುತ್ತಲೇ ಕಥಾ ಪಾತ್ರಗಳ ಒಳಲೋಕ ದೈವಕ್ಕೆ ತಮ್ಮ ತಮ್ಮ ಬೇಡಿಕೆಗಳೊಂದಿಗೆ ಸಮರ್ಪಿಸಿಕೊಳ್ಳುವುದನ್ನು ಮಾಂತ್ರಿಕವಾಗಿ ಒಂದಾಗಿಸುತ್ತಾರೆ. ಇಲ್ಲಿ ಅಕ್ಷಯರ ಕಸುಬುಗಾರಿಕೆ ಕಥೆಯನ್ನು ಇನ್ನೊಂದು ಸ್ತರಕ್ಕೊಯ್ದು ಒಂದು ಒಳ್ಳೆಯ ಕಥೆ ಓದಿದ ಗಾಢ ಅನುಭವ ಕೊಡುತ್ತದೆ. ‘ಅರ್ಘ್ಯ’ ಮತ್ತು ‘ಕ್ವಾಟಿ’ ಎಂಬ ಎರಡು ಕಥೆಗಳು ಕೊರೊನಾ ಕಾಲದ ವೈರುದ್ಯವನ್ನು ಕಟ್ಟಿಕೊಡುತ್ತವೆ. ಕೊರೊನಾ ಕಾಲದಲ್ಲಿ ಒಂದು ಜಗತ್ತಿಗೆ ಕುಟುಂಬ ಸಂಗಮ ಕಾಲವಾಗಿ ನೆನಪಿನಲ್ಲುಳಿದರೆ ಇನ್ನೊಂದು ಜಗತ್ತಿಗೆ ಅಂದರೆ ಅಸ್ಥಿರ ಉದ್ಯೋಗ ವಲಯದ ದುಡಿವ ಕೈಗಳಿಗೆ ಕೆಲಸವಿಲ್ಲದೆ ಊಟಕ್ಕೂ ಗತಿಯಿಲ್ಲದ ಭೀಕರ ಅನುಭವಗಳ ಮೂಟೆ ಹೊತ್ತು ತೆವಳಿದ ಕಾಲವಾಗಿ ಹಿಂಸಿಸುತ್ತದೆ. ಅರ್ಘ್ಯ ಕಥೆ ಪುಟ್ಟ ಮಗುವೊಂದು ಆಧುನಿಕ ಕಾಲದ ಔದ್ಯೋಗಿಕ ಮಹತ್ವಾಕಾಂಕೆಯ ತಂದೆ ತಾಯಿಯ ಸಾಂಗತ್ಯಕ್ಕೆ, ಮಡಿಲಿಗೆ ಹಂಬಲಿಸುತ್ತಾ ಸೊರಗುತ್ತಿರುವ ಕಂದ ಕೊರೊನಾ ಸಮಯದ ವರ್ಕ್ ಫ್ರಮ್ ಹೋಂ ನಿಯಮದಿಂದಾಗಿ ಅದುವರೆಗೆ ಕಳೆದುಕೊಂಡ ಸಾಂಗತ್ಯವನ್ನು ಅನುಭವಿಸುವ ಚಿತ್ರಣ ಆಪ್ತವಾಗಿದೆ. ಮಕ್ಕಳು ಮಹತ್ವಾಕಾಂಕ್ಷಿ ಪಾಲಕರ ಸಾಂಗತ್ಯದಿಂದ, ಪಾಲನೆಯಿಂದ ವಂಚಿತರಾಗಿ ಸೊರಗುವ ಇನ್ನೊಂದು ಕಥೆ ಪಿಯೂ.
‘ಕ್ವಾಟಿ’ ಕೊರೊನಾ ಕಾಲದಲ್ಲಿ ಸಂಘ, ಸಂಸ್ಥೆ, ಸರ್ಕಾರದ ಕಿಟ್ಗಳ ಮೂಲಕ ಹೇಗೋ ಜೀವ ಉಳಿಸಿಕೊಂಡಿದ್ದವರ ನಡುವಿನ ಒಂದು ಕತೆ. ಈ ಕಥೆಯ ನಾಯಕಿ ಲೈಂಗಿಕ ವೃತ್ತಿಯ ಬಡವಿ. ಅಸ್ಥಿರ ಸಂಪಾದನೆ ಮಾತ್ರವಲ್ಲ ಸಾಮಾಜಿಕವಾಗಿ ಬಹಿಷ್ಕಾರದ ನೋಟವನ್ನೂ ಎದುರಿಸುವವಳು. ಇಂತವರ ಪಾಡು ವಿವರಿಸಲೂ ಸಾಧ್ಯವಿಲ್ಲದಂತದ್ದು. ಈ ಕಥೆ ಕೊರೊನಾ ಕಾಲದ ಸಾಮಾಜಿಕ ದುಃಸ್ಥಿತಿಯ ಜೊತೆಗೆ ಲೈಂಗಿಕ ವೃತ್ತಿಯ ಹೆಣ್ಣು ಮಕ್ಕಳಿಗೂ ಅವರದೇ ಸಂವೇದನೆಗಳಿವೆ ಎಂಬಂತ ಸೂಕ್ಷ್ಮ ಸಂಗತಿಗಳನ್ನು ಚರ್ಚಿಸುತ್ತದೆ. ‘ಅವಳು ಅವನು ಮತ್ತು ನಾನು’ ಎಂಬ ಕಥೆ ಯಾರು ಬೇಕಾದರೂ ಅವಳು ಅವನು ಆಗಬಹುದಾದ ಪಾತ್ರಗಳ ಭಾವ ಲೋಕದ ಕಥೆ ಮಧುರ ಪ್ರೇಮದ ಭಾವಗೀತಾತ್ಮಕದಂತೆ ಸಾಗಿ ಓದುಗರ ಮನದಲ್ಲಿ ಅವರವರ ಭಾವಕ್ಕೆ ತಕ್ಕಂತೆ ಮುಂದುವರಿಯುವ ಅಂತ್ಯವಿದೆ. ಅವರವರ ಭಾವಕ್ಕೆ ತಕ್ಕಂತೆ ಎಂಬುದು ಇಲ್ಲಿ ಬಹುಮುಖ್ಯ. ಮೇಲ್ನೋಟಕ್ಕೆ ಅತಿ ಮಧುರ ಪ್ರೇಮಗೀತೆಯಾಗಿಯೂ, ಹಗುರಾಗಿ ಓದಿದರೆ ನಿರೂಪಕರು ಪಲಾಯನವಾದದತ್ತ ವಾಲಿದರೇನೋ ಅನಿಸುವಂತೆಯೂ ಕಾಣುವ ಇದು ಒಡಲೊಳಗೆ ನಮ್ಮ ಸಾಮಾಜಿಕ ಕಟ್ಟುಪಾಡುಗಳ, ಜಾತಿ ಚೌಕಟ್ಟಿನ ಬಡ ಬಾಗ್ನಿಯನ್ನಿಟ್ಟುಕೊಂಡಿದೆ. ಕಥೆಯ ಅಂತ್ಯವನ್ನು ನೀವೇ ಬರೆಯಬೇಕಾಗಿರುವುದರಿಂದ ನಿಮ್ಮ ಕಣ್ಣಿಗೆ ನೀವೇ ಬೆರಳು ಹಾಕಿ ನೋಡಿಕೊಳ್ಳುವ ಧೈರ್ಯ ಬೇಕು.
‘ಅಮ್ಮೀಜಾನ್’ ಒಂದು ಪ್ರಯೋಗಶೀಲ ಕಥೆಯಾಗುವ ಮಹತ್ವಾಕಾಂಕ್ಷೆಗೆ ತುಡಿಯುತ್ತಿದೆ. ಬಹು ಆಯಾಮಗಳತ್ತ ಚಾಚಿಕೊಳ್ಳುವ ತಾಕತ್ತಿರುವ ಈ ಕಥೆಯ ಪಾತ್ರಗಳ ಮೂಲಕ ಅಂತರಂಗದ ಶೋಧದ ಸಾಧ್ಯತೆಗಳು ಕಾಣ ಸಿಗುತ್ತವೆ. ‘ಪೃಕೃತಿಚಿತ್ತ’, ಕಥೆಗಳಲ್ಲಿ ದಕ್ಷಿಣ ಕನ್ನಡದ ಸಾವಯವ ದೈವ ಭೂತಾರಾಧನೆಯ ನಂಬಿಕೆಯೇ ಕೇಂದ್ರವಾಗಿದೆ. ಎರಡು ಕಥೆಗಳಲ್ಲು ನಂಬಿಕೆಯ ನೆಲೆಯ ಬಗ್ಗೆ ಜಿಜ್ಞಾಸೆ ಕಾಣಿಸುತ್ತದೆ. ಪ್ರಕೃತಿ ಚಿತ್ತದಲ್ಲಿ ಅಣ್ಣ ತಮ್ಮಂದಿರ ನಡುವೆ ಹಿರಿಯರ ಭೂಮಿ ಹಂಚಿಕೆಯಾಗಿ ಗುಳಿಗ ಒಬ್ಬನ ಭಾಗಕ್ಕೆ ಹೋಗಿರುತ್ತದೆ. ಇನ್ನೊಬ್ಬನ ಮನೆಯಲ್ಲಿ ಮಗುವೊಂದು ಕಾಣದಾಗಿ ಹುಡುಕಾಟಕ್ಕೆ ತೊಡಗಿ ದುರಂತದ ಸೂಚನೆ ಸಿಗುತ್ತಿದ್ದಂತೆ ಆ ಮನೆಯ ಹಿರಿಯ ತಟ್ಟನೆ ಗುಳಿಗನಿಗೆ ಬೇಡಿಕೊಳ್ಳುತ್ತಾನೆ. ಕೊನೆಗೂ ಮಗು ಸುರಕ್ಷಿತವಾಗಿ ಸಿಗುತ್ತದೆ. ಆ ಕ್ಷಣಕ್ಕೆ ಹಿರಿಯನ ಬಾಯಲ್ಲಿ, “ಮೇಲ್ಪಡ್ಪುವನ್ನು ದೊಡ್ಡಪ್ಪನಿಗೆ ಬಿಟ್ಟುಕೊಟ್ಟಾಗ ಗುಳಿಗನೂ ಅವನಿಗೆ ಹೋಗಿದೆ ಅಂದುಕೊಂಡಿದ್ದೆ” ಎಂಬ ಮಾತು ಹೊರ ಬರುತ್ತದೆ. ಇನ್ನೊಂದು ಕಥೆಯಲ್ಲಿ ಸರ್ಕಾರದ ಜಮೀನು ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಬಲಿಯಾಗುವ ಕುಟುಂಬ ಸರ್ಕಾರ ಕೊಟ್ಟ ಜಾಗದಲ್ಲಿ ತನ್ನ ದೈವವನ್ನೂ ಪ್ರತಿಷ್ಠಾಪಿಸಬೇಕಾಗಿ ಬರುತ್ತದೆ. ನೆಲದ ಸತ್ಯದ ದೈವಗಳು ಮನೆಯೊಳಗಿನ ಕುಟುಂಬ ದೇವರಂತೆ ಕುಟುಂಬದೊಂದಿಗೆ ವಲಸೆ ಹೋಗುವುದು ಸರಳ ಅಲ್ಲ. ಯಾಕೆಂದರೆ ತುಳುನಾಡಿನ ದೈವಗಳು ನೆಲದ ದೈವಗಳು. ಹೊಸ ಜಾಗದಲ್ಲಿ ದೈವ ನುಡಿಯಲು ಸಾಧ್ಯವಾಗದಿದ್ದಾಗ ಮಧ್ಯಸ್ಥನ ಬಾಯಿಯಲ್ಲಿ ಬರುವ ಮಾತು, “ಸತ್ಯವನ್ನಿಲ್ಲಿಗೆ ತಂದರೂ ಸತ್ಯದ ಮಣ್ಣಿನಲ್ಲಿ ನಿಂತಾಗ ಮಾತ್ರ ದೈವ ನುಡಿಯಲು ಸಾಧ್ಯ” ಎಂಬುದಾಗಿ.
ಇದೇ ವಿಚಾರದಲ್ಲಿ ದೈವದ ಜಾಗವನ್ನು ಮರಳಿ ಪಡೆಯಲು ಕೋರ್ಟ್ ಮೊರೆ ಹೊಕ್ಕು ಅಲ್ಲಿ ನ್ಯಾಯಾಧೀಶರೆದುರು ಕ್ವಾಂಟಮ್ ಮೆಕ್ಯಾನಿಕ್ಸ್ ಥಿಯರಿ ಮೂಲಕ ಈ ಜಿಜ್ಞಾಸೆಯನ್ನು ಕುಟುಂಬಕ್ಕೆ ಸೇರಿದ ಯುವ ವಕೀಲ ಮಂಡಿಸಲು ಪ್ರಯತ್ನಿಸುತ್ತಾನೆ. ನೆಲಕ್ಕೆ ಸಂಬಂಧಿಸಿದ್ದು ದೈವ ಅಂದುಕೊಂಡ ನಾರ್ಣಜ್ಜ ದೊಡ್ಡಪ್ಪನಿಗೆ ಹೋದ ಭಾಗದಲ್ಲಿ ಗುಳಿಗನ ಕಲ್ಲಿದ್ದುದರಿಂದ ಗುಳಿಗವೂ ಅವನಿಗೇ ಸಂಬಂಧಿಸಿದ್ದು ಎಂದು ನಂಬಿರುತ್ತಾನೆ. ಆದರೆ, ಸಂಕಟ ಕಾಲದಲ್ಲಿ ಗುಳಿಗನ ನೆನಪು ಬಂದು ಪ್ರಾರ್ಥನೆ ಸಲ್ಲಿಸುತ್ತಾನೆ. ಅಂದರೆ, ನಂಬಿಕೆಯನ್ನು ನೆಲಮೂಲಕ್ಕೆ ಸೀಮಿತಗೊಳಿಸುವುದೋ ಜನ ಮೂಲಕ್ಕೆ ಸೀಮಿತಗೊಳಿಸುವುದೋ ಅಥವಾ ಎರಡೂ ಮಿಳಿತಗೊಂಡಿದೆಯೊ ಎಂಬ ಸಂಕೀರ್ಣತೆಯನ್ನು ಈ ಎರಡು ಕಥೆಗಳು ಚರ್ಚಿಸುತ್ತಿವೆ. ಇಲ್ಲಿರುವ ಕಥೆಗಳು ವಸ್ತುವಿಗೆ ಸಂಬಂಧಿಸಿದಂತೆ ಏಕತಾನತೆಯಿಂದ ತಪ್ಪಿಸಿಕೊಂಡಿರುವುದರ ಜೊತೆಗೆ ಭಾಷೆಯ ಬಳಕೆಯಲ್ಲಿಯೂ ಪ್ರಯೋಗಕ್ಕೊಳಪಟ್ಟಿವೆ. ಈಗಾಗಲೇ ಬರಹ ಲೋಕದಲ್ಲಿ ತನ್ನ ಹೆಸರು ಛಾಪಿಸಿರುವ ಅಕ್ಷಯರ ಮುಂದಿನ ಪ್ರಯೋಗ ಯಾವುದಿರಬಹುದೆಂಬ ಕುತೂಹಲವನ್ನು ಇಲ್ಲಿಯ ಕಥೆಗಳು ಮೂಡಿಸಿವೆ.
ಶ್ರೀಮತಿ ಅನುಪಮಾ ಪ್ರಸಾದ್
ಕಥೆಗಾರ್ತಿ