ಆರೋಗ್ಯ ಕಾಳಜಿ ಹಾಗೂ ರಕ್ಷಣೆಯ ಧ್ಯೇಯದೊಂದಿಗೆ ನಮ್ಮ ಕ್ಲಿನಿಕ್ ತೆರೆಯಲಾಗುತ್ತಿದ್ದು, ಗ್ರಾಮಸ್ಥರು ಹಾಗೂ ಅರ್ಹರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು. ಭಾನುವಾರ ಉಪ್ಪುಂದ ಗ್ರಾಮದ ತಾರಪತಿ ಹಾಗೂ ತಗ್ಗರ್ಸೆಯ ವಸ್ರೆಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು. ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ. ಎಸ್. ಸುರೇಶ್ ಶೆಟ್ಟಿ ಮಾತನಾಡಿ, ಇಂದು ಅನೇಕ ಸೌಲಭ್ಯಗಳು ನಮ್ಮ ಬಳಿಗೆ ಬರುತ್ತಿದೆ. ಅದರ ಸದುಪಯೋಗ ಮಾಡಿಕೊಳ್ಳಬೇಕು. ವ್ಯವಸ್ಥೆಯನ್ನು ಒದಗಿಸುವುದು ಎಷ್ಟು ಮುಖ್ಯವೋ ಅದನ್ನು ಅಷ್ಟೇ ಚೆನ್ನಾಗಿ ಬಳಸಿಕೊಳ್ಳುವುದು ಅವಶ್ಯಕ ಎಂದರು.
ನಮ್ಮ ಕ್ಲಿನಿಕ್ ನಲ್ಲಿ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳ 12 ಪ್ಯಾಕೇಜ್ ಗಳು ಲಭ್ಯವಿರಲಿದೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ ಆರೈಕೆ, ಬಾಲ್ಯ ಮತ್ತು ಹದಿ ಹರೆಯದವರ ಸಮಗ್ರ ಆರೋಗ್ಯ ಸೇವೆಗಳು, ಸಾರ್ವತ್ರಿಕ ಲಸಿಕೆಗಳು, ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳು, ಸ್ಕ್ರೀನಿಂಗ್, ತಡೆಗಟ್ಟುವಿಕೆ ಮತ್ತು ನಿರ್ವಹಣೆ, ಮೂಲಭೂತ ಆರೋಗ್ಯ ಸೇವೆಗಳು, ನೇತ್ರ ಹಾಗೂ ಕಿವಿ, ಮೂಗು, ಗಂಟಲು ಆರೈಕೆ ಸೇವೆಗಳು, ಮಾನಸಿಕ ಆರೋಗ್ಯದ ಸ್ಕ್ರೀನಿಂಗ್ ಸೇವೆಗಳು, ವೃದ್ಧಾಪ್ಯ ಆರೈಕೆ ಮತ್ತು ಉಪಶಮನಕಾರಿ ಆರೈಕೆ ಸೇವೆಗಳು, ಸುಟ್ಟ ಗಾಯಗಳು, ಅಪಘಾತ, ಮತ್ತಿತರ ಗಾಯಗಳು ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳು ಸಾರ್ವಜನಿಕರಿಗೆ ದೊರೆಯಲಿದೆ.
