ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ಉನ್ನತ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ, ಬಂಟ್ಸ್ ತರಂಗ ದಿ ಯೂತ್ ವೇವ್ ಭಾರತ್ ಕಾ ಸಫರ್ ಹಾಗೂ ಪದವಿ ಪ್ರದಾನ ಸಮಾರಂಭ ಫೆ. 26ರಂದು ಅಪರಾಹ್ನ ಜೂಯಿ ನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಶ್ರೀಮತಿ ಸೌಮ್ಯಲತಾ ಸದಾನಂದ ಶೆಟ್ಟಿ ಆಡಿಟೋರಿಯಂನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಮಾತನಾಡಿ, ಅಸೋಸಿಯೇಷನ್ ನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಶಿಕ್ಷಣ ಸಂಸ್ಥೆ ಮೂಲಕ ಅಸೋಸಿಯೇಷನ್ ಕೀರ್ತಿ ಬಹಳಷ್ಟು ಎತ್ತರಕ್ಕೆ ಬೆಳೆದಿದೆ. ಇಲ್ಲಿಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ, ಉತ್ತಮ ಅಂಕ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪೂರ್ತಿಗೊಳಿಸಿದ ಬಳಿಕವೂ ನಮ್ಮ ಸಂಸ್ಥೆ ಜತೆ ಸಂಬಂಧ ಉಳಿಸಿ ಬೆಳೆಸಿಕೊಳ್ಳಬೇಕು. ಶಿಕ್ಷಣ ಸಮಿತಿ ಪದಾಧಿಕಾರಿಗಳು, ಸದಸ್ಯರ ಸಹಕಾರದೊಂದಿಗೆ ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬ್ಬಂದಿ ಉತ್ತಮ ರೀತಿಯಲ್ಲಿ ಸಂಸ್ಥೆಯನ್ನು ನಡೆಸುತ್ತಿದ್ದು, ಅವರನ್ನು ಅಭಿನಂದಿಸುತ್ತೇನೆ. ಸುಪ್ತ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರ ಜತೆಗೆ ನಮ್ಮ ಶ್ರೀಮಂತ ಸಂಸ್ಕೃತಿ ಹಾಗೂ ಕಲೆಗಳ ಸೆಲೆ ನಿರಂತರವಾಗಿಸುವ ಮಹಾದಾಸೆಯನ್ನು ಬಾಂಬೆ ಬಂಟ್ಸ್ ಅಸೋಸಿಯೇಷನ್ ಉನ್ನತ ಶಿಕ್ಷಣ ಹೊಂದಿದೆ. ಪ್ರತಿಯೊಂದು ಮಗುವಿನಲ್ಲೂ ದೈವದತ್ತ ಸುಪ್ತ ಪ್ರತಿಭೆಗಳು ಅಡಕವಾಗಿದ್ದು, ಆ ಸುಪ್ತ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ನಿರಂತರವಾಗಿ ನಡೆದಾಗ ಮಕ್ಕಳು ಪ್ರತಿಭಾವಂತರಾಗಿ ಬೆಳೆಯಲು ಸಾಧ್ಯವಿದೆ. ಸಾವಿರಾರು ಮಕ್ಕಳು ನಮ್ಮ ಸಂಸ್ಥೆಯಿಂದ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವುದು ಹೆಮ್ಮೆಯ ವಿಷಯ ಎಂದರು.
ಮುಖ್ಯ ಅತಿಥಿಯಾಗಿದ್ದ ವಾಡಾ ಡಾ. ಶಾಂತಿಲಾಲ್ ಧಾನಾಜೀ ದೇವ್ಸೆ ಆರ್ಟ್ಸ್ ಕಾಲೇಜ್ ಆಂಡ್ ಕಾಮರ್ಸ್ ಆಂಡ್ ಸಾಯನ್ಸ್ ಕಾಲೇಜಿನ ಪ್ರಾಂಶುಪಾಲೆ ಡಾ. ಕಿಶೋರಿ ಜಗದೀಶ್ ಭಗತ್ ಮಾತನಾಡಿ, ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಯಿತು. ಮಕ್ಕಳು ಶಿಕ್ಷಣದೊಂದಿಗೆ ಸುಸಂಸ್ಕತರಾಗಿ ಬೆಳೆಯಬೇಕು. ಶಿಕ್ಷಣ ಸಮಾಜ ಹಾಗೂ ವ್ಯಕ್ತಿಯ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಶೈಕ್ಷಣಿಕ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಆದರ್ಶ ಪ್ರಜೆಗಳಾಗಿ ಬಾಳಬೇಕು ಎಂದು ತಿಳಿಸಿದರು.

ಬಾಂಬೆ ಬಂಟ್ಸ್ ಅಸೋಸಿಯೇಷನ್ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ರತ್ನಾಕರ ವಿ. ಶೆಟ್ಟಿ, ಉಪಾಧ್ಯಕ್ಷ ನ್ಯಾಯವಾದಿ ಡಿ.ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ. ಶೆಟ್ಟಿ ಮೊದಲಾದವರು ಶುಭ ಹಾರೈಸಿದರು. ಅತಿಥಿ ಗಣ್ಯರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನಗೈದು ಶುಭ ಹಾರೈಸಿದರು ಮತ್ತು ಶೈಕ್ಷಣಿಕ ಸಾಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬಹುಮಾನವನ್ನಿತ್ತು ಗೌರವಿಸಿದರು.
ಬಾಂಬೆ ಬಂಟ್ಸ್ ಅಸೋಸಿಯೇಷನ್ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಎಸ್. ಶೆಟ್ಟಿ, ಯುವ ವಿಭಾಗದ ದೃಶ್ಯಾ ಕೆ. ಶೆಟ್ಟಿ, ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ಶೇಕ್ ಮೋಹದ್ ಮೊದಲಾದವರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಕಟ್ಟಡ ಸಮಿತಿಯ ಸದಾನಂದ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರು ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನ ಕಾರ್ಯಕ್ರಮ ಜರಗಿದವು.
ಅಸೋಸಿಯೇಷನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಹಾಗೂ ಗಣ್ಯರು, ಬಾಂಬೆ ಬಂಟ್ಸ್ ಅಸೋಸಿಯೇಷನ್ ಮತ್ತು ಶಿಕ್ಷಣ ಸಮಿತಿಯ ಪದಾಧಿಕಾರಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂಶುಪಾಲೆ ಡಾ. ರಶ್ಮಿ ಚಿಂತ್ಲಾಂಗೆ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಪ್ರೊ ಪ್ರಥಮೇಶ್ ಪಾಟೀಲ್ ಮತ್ತು ಸಾಂಸ್ಕೃತಿಕ ವಿಭಾಗದ ನಿಧಿ ಎಸ್. ಸಾವಂತ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬ್ಬಂದಿ, ಪಾಲಕ ಪೋಷಕರು, ಹಿತೈಷಿಗಳು, ಶಿಕ್ಷಣ ಪ್ರೇಮಿಗಳು, ದಾನಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.