ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಬೇಡಿ, ಹುಚ್ಚಪ್ಪಗಳಿರಾ ಎಂಬ ಪದ ಮನುಜನ ಬದುಕಿನ ಸಾರ್ಥಕ್ಯಕ್ಕೆ ಕನ್ನಡಿಯಾಗಿದೆಯೋ ಅದೇ ರೀತಿ ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಮಾನವನಾಗಿ ಬದುಕಿ ನಾವು ಸಮಾಜಕ್ಕೆ ಮಾದರಿಯಾಬೇಕು. ಜೀವನದಲ್ಲಿ ತೃಪ್ತಿ ಎಂಬುದು ಇದ್ದರೆ ದುರಾಸೆ ಬರುವುದಿಲ್ಲ ಹಾಗೂ ಜೀವನ ಸಮಾಧಾನಕರವಾಗಿರುತ್ತದೆ. ಶಾಂತಿ ಸೌಹಾರ್ದತೆ ಸಮಾಜದಲ್ಲಿ ನೆಲೆಯಾದರೆ ದೇಶ ಸದೃಡವಾಗಲು ಸಾದ್ಯ. ದೇಶ ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬರ ಪಾಲು ಮಹತ್ವದ್ದು. ಆಕಾಂಕ್ಷೆ ಎಲ್ಲರಲ್ಲಿಯೂ ಇರಬೇಕು. ಆದರೆ ನಿಯತ್ತು ಮತ್ತು ಕಾನೂನು ಚೌಕಟ್ಟಿನಲ್ಲಿರಬೇಕು. ಮನುಷ್ಯ ಜೀವನದಲ್ಲಿ ವೈಯುಕ್ತಿಕವಾಗಿ ಮತ್ತು ಸಮಾಜದಲ್ಲಿ ನಮ್ಮ ಭಾವನೆಗಳು ಬದಲಾವಣೆ ಆಗುವುದು ಸಹಜ. ಆದರೆ ನಿಯತ್ತಿಗೆ ಬೆಲೆ ತರುವಂತಹ ಬದಲಾವಣೆ ಆಗಬೇಕು. ಅಧಿಕಾರದಲ್ಲಿರುವಾಗ ಅನ್ಯಾಯ, ಮೋಸ, ವಂಚನೆ, ಭ್ರಷ್ಟಾಚಾರ ಮಾಡುವುದು ಮಾನವೀಯತೆಯಲ್ಲ. ಅದು ದೇಶ ದ್ರೋಹ. ಕೇವಲ ವ್ಯಕ್ತಿಯಿಂದ ಮಾತ್ರ ತಪ್ಪುಗಳಾವುದು ಅಲ್ಲ. ಸಮಾಜದಿಂದ ಕೂಡಾ ತಪ್ಪುಗಳಾಗುತ್ತವೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಮಾನವೀಯತೆಯ ಸೇವೆಯಿಂದ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾದ್ಯ ಎಂದು ಸುಪ್ರೀಂಕೋರ್ಟ್ ನ ಮಾಜಿ ನ್ಯಾಯಾದೀಶ ಕರ್ನಾಟಕ ರಾಜ್ಯ ಮಾಜಿ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ನಿಟ್ಟೆ ನುಡಿದರು.
ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕೋತ್ಸವ ಸಮಾರಂಭ ಫೆಬ್ರವರಿ 9 ರಂದು ಚಿಂಚ್ವಾಡ್ ನ ಪ್ರೊ. ರಾಮಕೃಷ್ಣ ಮೋರೆ ನಾಟ್ಯಗೃಹದಲ್ಲಿ ಜರಗಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂತೋಷ್ ಹೆಗ್ಡೆಯವರು ಮಾತನಾಡಿ, ಸಮಾಜ ಕಾರ್ಯ ಯಾವುದೇ ಇರಲಿ ಧನಾತ್ಮಕವಾಗಿ ನಡೆದಾಗ ಅದಕ್ಕೆ ಫಲ ಸಿಗುವುದು. ಸೃಷ್ಟಿಯ ನಿಯಮ ಹಾಗೂ ಸಮಾಜದಲ್ಲಿ ಅಂತಹವರನ್ನು ಸನ್ಮಾನಿಸುವುದು ಕೂಡಾ ಉತ್ತಮ. ಅಭಿವೃದ್ದಿ ಎಂದರೆ ಹೇಗೆ? ಇದರಿಂದ ಸಮಾಜಕ್ಕೆ ಏನು ಸಿಗುತ್ತದೆ? ಎಂಬುದನ್ನು ಅರಿತು ನಾವು ನಡೆಯಬೇಕು. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಸಮಾಜ ಸೇವೆಯಲ್ಲಿ ಮಾನವೀಯತೆಯ ಸೇವೆ ನಿರಂತವಾಗಿ ನಡೆಯಲಿ. ನಿಮ್ಮ ಸಮಾಜ ಸೇವೆಗೆ ಶುಭ ಹಾರೈಸುತ್ತೇನೆ. ಉತ್ತಮ ಸಂದೇಶ ನೀಡುವ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದಿದೆ. ನನಗೆ ಇಲ್ಲಿ ಸನ್ಮಾನ ಮಾಡಿ ಗೌರವಿಸಿದ್ದೀರಿ. ಇದಕ್ಕೆ ಚಿರ ಋಣಿಯಾಗಿದ್ದೇನೆ ಎಂದರು.ಸಂಘದ ಅಧ್ಯಕ್ಷರಾದ ಜಗದೀಶ್ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ನಡೆದ ಈ ವಾರ್ಷಿಕೋತ್ಸವ ಸಮಾರಂಭದ ವೇದಿಕೆಯಲ್ಲಿ ಗೌರವ ಅತಿಥಿಗಳಾದ ಹಿಂಜೆವಾಡಿ ರೂಬಿ ಹಾಲ್ ಹಾಸ್ಪಿಟಲ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಸುಧೀರ್ ಶಂಕರ ರೈ, ನಿಕಟಪೂರ್ವ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಉಪಾಧ್ಯಕ್ಷರುಗಳಾದ ಪ್ರಸಾದ್ ಶೆಟ್ಟಿ, ಹರೀಶ್ ಶೆಟ್ಟಿ ಕುರ್ಕಾಲ್, ಪ್ರಧಾನ ಕಾರ್ಯದರ್ಶಿ ರವಿ ಶೆಟ್ಟಿ, ಗೌ. ಕೋಶಾಧಿಕಾರಿ ದಿನೇಶ್ ಶೆಟ್ಟಿ ಉಜಿರೆ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್ ಶೆಟ್ಟಿ ಪೆಲತ್ತೂರು, ಕಾರ್ಯಾಧ್ಯಕ್ಷರುಗಳಾದ ಲೀಲಾಧರ್ ಶೆಟ್ಟಿ, ಮಹೇಶ್ ಎಸ್ ಶೆಟ್ಟಿ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಜಯ ಶೆಟ್ಟಿ ರೆಂಜಾಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಭಾ ಎಸ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶುಭಂ ಶೆಟ್ಟಿ, ಕಾರ್ಯಾಧ್ಯಕ್ಷೆ ಅನ್ವಿತಾ ಶೆಟ್ಟಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು, ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ದೀಪ ಪ್ರಜ್ವಲಿಸಿ, ಕಲ್ಪವೃಕ್ಷದ ಹೂ ಅರಳಿಸಿ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಡಿ ಶೆಟ್ಟಿ, ರಘುರಾಮ್ ಶೆಟ್ಟಿ, ಎರ್ಮಾಳ್ ವಿಶ್ವನಾಥ್ ಶೆಟ್ಟಿ, ಪದ್ಮನಾಭ ಕೆ ಶೆಟ್ಟಿ, ಎರ್ಮಾಳ್ ಸೀತಾರಾಂ ಶೆಟ್ಟಿ, ಮಹೇಶ್ ಹೆಗ್ಡೆ, ವಿಜಯ್ ಶೆಟ್ಟಿ ಬೋರ್ಕಟ್ಟೆಯವರು ಉಪಸ್ಥಿತರಿದ್ದರು. ಸುಮತಿ ಶೆಟ್ಟಿ ಮತ್ತು ಶಾಂತಿ ಶೆಟ್ಟಿ ಪ್ರಾರ್ಥನೆಗೈದರು. ನಿಕಟ ಪೂರ್ವ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿದರು. ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳ ವರದಿಯನ್ನು ಅವಿನಾಶ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ವರದಿಯನ್ನು ದೀಪಾ ಪಿ ಶೆಟ್ಟಿ ಸಭೆಯಲ್ಲಿ ಮಂಡಿಸಿದರು. ಅತಿಥಿ ಗಣ್ಯರನ್ನು ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಪುಷ್ಪ ಗುಚ್ಛ ನೀಡಿ ಗೌರವಿಸಿದರು ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾದ ಸಂತೋಷ್ ಹೆಗ್ಡೆ ಹಾಗೂ ಗೌರವ ಅತಿಥಿಗಳಾದ ಡಾ. ಸುಧೀರ್ ರೈಯವರನ್ನು ಶಾಲು, ಹಾರ, ಸ್ಮರಣಿಕೆ, ಭಕ್ತಿ ಶಕ್ತಿ ಪ್ರತಿಮೆ ನೀಡಿ ಸಂಘದ ವತಿಯಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸನ್ಮಾನಿಸಿದರು. ಇವರ ಪರಿಚಯವನ್ನು ಕ್ರಮವಾಗಿ ತಾರಾ ಜೆ ಶೆಟ್ಟಿ ಮತ್ತು ಮಲ್ಲಿಕಾ ಡಿ ಶೆಟ್ಟಿಯವರು ಓದಿದರು.ತುಳುನಾಡಿನ ಕಂಬಳ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಹಾಗೂ ತಾವು ಪಡೆದ ಬಂಗಾರದ ಪದಕಗಳನ್ನು ಕಾಪು ಮಾರಿಯಮ್ಮನ ಜೀರ್ಣೋದ್ಧಾರಕ್ಕೆ ಸಮರ್ಪಿಸಿದ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಪ್ರಮುಖರಾದ ಪುಚ್ಚೊಟ್ಟು ಬೀಡು ಎರ್ಮಾಳ್ ಬಾಲಚಂದ್ರ ಶೆಟ್ಟಿ ಹಾಗೂ ಸಂಘದ ವಾರ್ಷಿಕ ಕಾರ್ಯಕ್ರಮದ ಜವಾಬ್ದಾರಿ ಹೊತ್ತು ಶಿಸ್ತು ಬದ್ದವಾಗಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್ ಶೆಟ್ಟಿ ಪೆಲತ್ತೂರುರವರನ್ನು ಅತಿಥಿ ಗಣ್ಯರ ಸಮ್ಮುಖದಲ್ಲಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಪಿಂಪ್ರಿ ಬಂಟರ ಸಂಘಕ್ಕೆ ಆಗಮಿಸಿದ ಗಣ್ಯರು ತಮ್ಮ ಸಂದೇಶಗಳು ಹಾಗೂ ಸಲಹೆಗಳನ್ನು ತಿಳಿಸುವ ಅತಿಥಿ ದೇವೋಭವ ಎಂಬ ಪುಸ್ತಕದ ಬಗ್ಗೆ ಸುಧಾಕರ್ ಶೆಟ್ಟಿ ಪೆಲತ್ತೂರುರವರು ಪರಿಚಯಿಸಿ ಅತಿಥಿ ಗಣ್ಯರ ಸಂದೇಶಗಳನ್ನು ಪಡೆದರು. ವೇದಿಕೆಯಲ್ಲಿದ್ದ ಗಣ್ಯರು ಸಮಾಜಕ್ಕೆ ಮತ್ತು ಸಮಾಜ ಸೇವೆಗೆ ಉತ್ತೇಜನ ನೀಡುವಂತಹ ನುಡಿಗಳನ್ನಾಡಿದರು ಹಾಗೂ ಡಾ ಸುಧೀರ್ ಶೆಟ್ಟಿಯವರ ಸೇವೆಯಂತೆ ಪಿಂಪ್ರಿ ಚಿಂಚ್ವಾಡ್ ಬಂಟರ ಸಮಾಜಕ್ಕೆ ಸಹಕಾರಿಯಾಗುವ ಅರೋಗ್ಯ ತಪಾಸಣೆಯ ರಿಯಾಯಿತಿಯ ರೂಬಿ ಹಾಲ್ ಹೆಲ್ತ್ ಕಾರ್ಡ್ ನ್ನು ಅತಿಥಿ ಗಣ್ಯರು ಬಿಡುಗಡೆಗೊಳಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸುಧಾಕರ್ ಶೆಟ್ಟಿ ಪೆಲತ್ತೂರುರವರ ನಿರ್ದೇಶನದಲ್ಲಿ ಭಾರತದ ಸಾಂಸ್ಕ್ರತಿಕ ವೈಭವ, ತುಳುನಾಡಿನ ವೈಭವ ಹಾಗೂ ಮಹಾರಾಷ್ಟ್ರದ ಸಾಂಸ್ಕ್ರತಿಕ ವೈಭವವನ್ನು ಪರಿಚಯಿಸುವ ಅತ್ಯಂತ ಸುಂದರ ಕಥಾ ನೃತ್ಯ ವೈಭವ ನಡೆಯಿತು. ಸಾವಿರಾರು ಸಂಖ್ಯೆಯ ಬಂಟ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳು, ಹಿರಿಯರು, ದಾನಿಗಳು, ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗದವರು, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮದ ನಂತರ ತುಳುನಾಡ ಶೈಲಿಯ ಪ್ರೀತಿ ಭೋಜನ ನಡೆಯಿತು. ಅವಿನಾಶ್ ಶೆಟ್ಟಿ ಮತ್ತು ದಿವ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಶೆಟ್ಟಿಯವರು ವಂದಿಸಿದರು.
ವರದಿ : ಹರೀಶ್ ಮೂಡಬಿದ್ರಿ ಪುಣೆ