ಪುಣೆ ಬಂಟ್ಸ್ ಅಸೋಸಿಯೇಷನ್ ನ 12ನೇ ವಾರ್ಷಿಕೋತ್ಸವ ಸಮಾರಂಭವು ಫೆಬ್ರವರಿ 8ರ ಶನಿವಾರದಂದು ಬಂಟರ ಭವನ, ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಭವನ, ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ಅಪರಾಹ್ನ ಗಂಟೆ 2:30 ರಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈಭವ, ‘ಬಲೆ ತೆಲಿಪುಲೆ’ ಹಾಸ್ಯ ಪ್ರದರ್ಶನ, ಸಭಾ ಕಾರ್ಯಕ್ರಮ ಸಾಧಕರಿಗೆ ಸತ್ಕಾರಗಳೊಂದಿಗೆ ಜರಗಲಿದೆ. ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆಯಲ್ಲಿ ನಡೆಯಲಿರುವ ವಾರ್ಷಿಕೋತ್ಸವ ಸಂಭ್ರಮದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭವಾನಿ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಮುಂಬೈಯ ಕಾರ್ಯಾಧ್ಯಕ್ಷ ಕೆ.ಡಿ. ಶೆಟ್ಟಿ, ಗೌರವ ಅತಿಥಿಗಳಾಗಿ ಕರ್ನಾಟಕ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಬಾಲಿವುಡ್ ನ ಹೆಸರಾಂತ ನಟಿ ಅಮೃತಾ ರಾವ್ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಬಂಟ ಸಮಾಜದ ಸಾಧಕರಿಗೆ ಸತ್ಕಾರ ನಡೆಯಲಿದೆ.
ಬಂಟ್ಸ್ ಅಸೋಸಿಯೇಷನ್ ನ ವಾರ್ಷಿಕೋತ್ಸವದ ಕಾರ್ಯಕ್ರಮಗಳು ಅಪರಾಹ್ನ ಗಂಟೆ 2:30 ರಿಂದ ಆರಂಭಗೊಳ್ಳಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಸಂಘದ ಸದಸ್ಯರು, ಯುವ ವಿಭಾಗ ಹಾಗೂ ಸಮಾಜ ಬಾಂಧವರಿಂದ ವಿವಿಧ ವೈವಿಧ್ಯಮಯ ನೃತ್ಯ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದೆ. ನಂತರ ಪ್ರಶಸ್ತಿ ವಿಜೇತ ಖ್ಯಾತ ಪ್ರಶಂಸ ಕಾಪು ತಂಡದವರಿಂದ ‘ಬಲೆ ತೆಲಿಪುಲೆ’ ಹಾಸ್ಯಮಯ ಕಾಮಿಡಿ ಶೋ ನಡೆಯಲಿದೆ.
ಪುಣೆ ಬಂಟ್ಸ್ ಅಸೋಸಿಯೇಷನ್ ಉತ್ಸಾಹಿ ಬಂಟ ಸಮಾಜದ ಧುರೀಣರ ಪರಿಕಲ್ಪನೆಯ ಸಂಸ್ಥೆ. ಪುಣೆ ನಗರ ಮತ್ತು ಗ್ರಾಮೀಣ ಪ್ರದೇಶದ ಬಂಟ ಬಾಂಧವರ ಸೇವೆಗಾಗಿ ಸ್ಥಾಪಿಸಲಾದ ಪ್ರತಿಷ್ಠೆಯ ಸಂಸ್ಥೆಯಾಗಿ ಹೆಸರನ್ನು ಗಳಿಸಿದೆ. ಬಂಟ್ಸ್ ಅಸೋಸಿಯೇಷನ್ ಪುಣೆ 12ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಬಂಟ ಸಮಾಜ ಬಾಂಧವರ ಸೇವೆ ಮಾಡುವ ನಿರ್ದಿಷ್ಟ ಧ್ಯೇಯ ಉದ್ದೇಶಗಳನ್ನು ಇಟ್ಟುಕೊಂಡು, ಸಮಾಜ ಬಾಂಧವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಕಳೆದ 12 ವರ್ಷಗಳ ಪರ್ಯಂತ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ. ಪುಣೆಯಲ್ಲಿ ಅತ್ಯಂತ ಕಡಿಮೆ ವರ್ಷಗಳಲ್ಲಿಯೇ ತನ್ನ ಕರ್ತವ್ಯ ನಿರ್ವಹಿಸಿದ ಪ್ರತಿಷ್ಠಿತ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.ಮಾಜಿ ಅಧ್ಯಕ್ಷರುಗಳು ತಮ್ಮ ವೈಯಕ್ತಿಕ ಸಾಧನೆಯ ಜೊತೆಯಲ್ಲಿ ಸಮಾಜಕ್ಕಾಗಿಯೂ ತಮ್ಮ ಸೇವೆ ಸಲ್ಲಬೇಕು ಎಂಬ ಧ್ಯೇಯವನ್ನು ಇಟ್ಟುಕೊಂಡು ಸಂಘಕ್ಕಾಗಿ ದುಡಿದಿದ್ದಾರೆ. ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರ ಜವಾಬ್ದಾರಿಯುತ ಸೇವೆಯಿಂದ ಮತ್ತು ಪರಿಶ್ರಮದಿಂದ ಸಂಘವು 12 ವರ್ಷಗಳ ಸಾರ್ಥಕ ಸೇವೆಯಲ್ಲಿ ಸಮಾಜಮುಖಿ ಸೇವೆಯಲ್ಲಿ ಮುಂದುವರಿಯುತ್ತಿದ್ದು ಮತ್ತಷ್ಟು ಯೋಜನೆಗಳ ಮೂಲಕ ಸೇವೆಗೈಯುವ ಸಂಕಲ್ಪ ಮಾಡಿದೆ.
ಬಂಟ್ಸ್ ಅಸೋಸಿಯೇಷನ್ ಪುಣೆ ಸಾಮಾಜಿಕ ಸೇವೆ, ಶೈಕ್ಷಣಿಕ ಸೇವೆ, ವೈದ್ಯಕೀಯ ಸೇವೆ, ಕಲಾ ಸೇವೆ, ಸಾಂಸ್ಕೃತಿಕ, ಧಾರ್ಮಿಕ ಸೇವೆ ಹಾಗೂ ಮಕ್ಕಳ ಪ್ರತಿಭಾ ಪೋಷಣೆಗೆ ಸಹಕಾರ, ಬಂಟ ಬಾಂಧವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ, ಪ್ರತಿಭಾ ಅನ್ವೇಷಣೆ, ಪ್ರತಿಭಾ ಪುರಸ್ಕಾರ, ವಿದ್ಯಾ ಪುರಸ್ಕಾರ, ಸಮಾಜ ಸೇವಕರನ್ನು ಗುರುತಿಸಿ ಸನ್ಮಾನ ಸತ್ಕಾರ ಮೊದಲಾದ ಸೇವಾ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ. ವಾರ್ಷಿಕ ಕ್ರೀಡೋತ್ಸವ, ಕ್ರಿಕೆಟ್ ಟೂರ್ನಮೆಂಟ್, ಉಚಿತ ಆರೋಗ್ಯ ತಪಾಸಣಾ ಶಿಬಿರ, ನವರಾತ್ರಿ ಉತ್ಸವ, ಅರಿಶಿಣ ಕುಂಕುಮ, ಅನಾಥಾಲಯ, ವೃದ್ದಾಶ್ರಮಗಳಿಗೆ ಭೇಟಿ ನೀಡಿ ಧನ ಸಹಾಯ, ಉಚಿತ ಆಹಾರ ಧಾನ್ಯ ಸೇವೆ ಹಾಗೂ ಪ್ರತಿ ವರ್ಷವು ವಾರ್ಷಿಕೋತ್ಸವ ಸಮಾರಂಭವನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸುತ್ತಾ ಬರುತ್ತಿದೆ. ತುಳು ಭಾಷೆ, ಕಲೆ, ಸಂಸ್ಕೃತಿಯ ಏಳಿಗೆಗಾಗಿ ಶ್ರಮಿಸುತ್ತಾ ಬಂದಿದೆ. ಸಮಾಜದ ಪ್ರತಿಭಾವಂತ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದೆ. ಪುಣೆಯಲ್ಲಿರುವ ಸಮಾಜದ ಇನ್ನಿತರೇ ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಮಾದರಿಯಾಗಿ ಕಾರ್ಯಗೈಯುತಿದೆ.
ಬಂಟ್ಸ್ ಅಸೋಸಿಯೇಷನ್ 12 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು, ನಿಕಟ ಪೂರ್ವ ಅಧ್ಯಕ್ಷ ಗಣೇಶ್ ಹೆಗ್ಡೆ ಪುಣ್ಚೂರು, ಉಪಾಧ್ಯಕ್ಷರುಗಳಾದ ಡಾ. ಸುಧಾಕರ್ ಶೆಟ್ಟಿ, ಸತೀಶ್ ರೈ ಕಲ್ಲಂಗಳ ಗುತ್ತು, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜನ ಸಂಪರ್ಕಾಧಿಕಾರಿ ಪ್ರದೀಪ್ ಶೆಟ್ಟಿ, ಜೊತೆ ಕಾರ್ಯದರ್ಶಿ ತಾರಾನಾಥ್ ರೈ ಸೂರಂಬೈಲು, ಜೊತೆ ಕೋಶಾಧಿಕಾರಿ ಸುರೇಶ್ ಶೆಟ್ಟಿ ಗಂಧರ್ವ, ಕ್ರೀಡಾ ಕಾರ್ಯಾಧ್ಯಕ್ಷ ರಕ್ಷಿತ್ ಶೆಟ್ಟಿ, ಸಾಂಸ್ಕೃತಿಕ ಉಪಕಾರ್ಯದರ್ಶಿ ಸುರೇಶ್ ಶೆಟ್ಟಿ, ಮಹಿಳಾ ಕಾರ್ಯಾಧ್ಯಕ್ಷೆ ರೇಷ್ಮಾ ಆರ್ ಶೆಟ್ಟಿ, ಕಾರ್ಯದರ್ಶಿ ಶರ್ಮಿಳಾ ಟಿ ರೈ, ಕೋಶಾಧಿಕಾರಿ ಸೌಮ್ಯ ಆರ್. ಶೆಟ್ಟಿ, ಸಾಂಸ್ಕೃತಿಕ ಕಾರ್ಯಾಧ್ಯಕ್ಷೆ ಶಾಲಿನಿ ಎಂ. ಶೆಟ್ಟಿ, ಕ್ರೀಡಾ ಕಾರ್ಯಾಧ್ಯಕ್ಷೆ ಪೂರ್ಣಿಮಾ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿ ಮತ್ತು ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಮಾಜಿ ಅಧ್ಯಕ್ಷರುಗಳು, ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ಕಾರ್ಯಕ್ರಮದ ದಿನದಂದು ಬಂಟರ ಭವನಕ್ಕೆ ತೆರಳಲು ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಗಂಟೆ 12.30ರಿಂದ ಹಡಪ್ಸರ್ ಗ್ರಾಂಡ್ ಬೇನಿಂದ ಹೊರಟು, ಅಮರ್ ನಗರಿ, ಮಗರ್ ಪಟ್ಟ, ಫಾತಿಮಾ ನಗರ್, ಸ್ವಾರ್ ಗೇಟ್ ಮಾರ್ಗವಾಗಿ ಬಾಣೇರ್ ಗಂಟೆ 1:00 ರಿಂದ ಬಾಲಾಜಿ ನಗರ ಖುಷ್ಬೂ ಹೋಟೆಲ್ ನಿಂದ ಹೊರಟು ಕಾತ್ರಜ್ ಸಿಗ್ನಲ್, ರಾಜ್ವೀರ್ ಹೋಟೆಲ್, ದತ್ತಾ ನಗರ, ಹೋಟೆಲ್ ವಿಶ್ವಾಸ್ ವಡಗಾಂವ್, ಹೋಟೆಲ್ ಸ್ವರ್ಣ ವಾರ್ಜೆ ಮಾರ್ಗವಾಗಿ ಬಂಟರ ಭವನ ತಲುಪಲಿದೆ. ಹೆಚ್ಚಿನ ಮಾಹಿತಿಗಾಗಿ ಹಡಪ್ಸರ್ (9960643456 / 9881461180), ಬಾಲಾಜಿ ನಗರ್ (9822958539 / 9850636469) ಸಂಪರ್ಕಿಸಬಹುದು.