ಪುಣೆ ಬಂಟ್ಸ್ ಅಸೋಸಿಯೇಷನ್ ನ ಸಮಾಜ ಕಲ್ಯಾಣ ಸೇವಾ ಕಾರ್ಯದಂಗವಾಗಿ ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದೊಂದಿಗೆ ಸಮಾಜ ಬಾಂಧವರಿಗಾಗಿ ಮಲ್ಟಿಸ್ಪೆಷಾಲಿಟಿ ಉಚಿತ ಅರೋಗ್ಯ ತಪಾಸಣಾ ಶಿಬಿರವು ಜನವರಿ 19 ರವಿವಾರದಂದು ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಗುರುನಾನಕ್ ದರ್ಬಾರ್ ಹಾಲ್ (ಹಾಲಿವುಡ್ ಗುರುದ್ವಾರ) ಕ್ಯಾಂಪ್ ಪುಣೆ ಇಲ್ಲಿ ನಡೆಯಿತು. ಈ ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ಮಲ್ಟಿಸ್ಪೆಷಾಲಿಟಿ ಆರೋಗ್ಯ ತಪಾಸಣೆ, ಸ್ತ್ರೀರೋಗ ಶಾಸ್ತ್ರ, ಮಕ್ಕಳ ರೋಗ ತಪಾಸಣೆ, ಕಣ್ಣು, ಹಲ್ಲು ತಪಾಸಣೆ, ಔಷದಿ ಮತ್ತು ರೋಗಶಾಸ್ತ್ರದ ಬಗ್ಗೆ ಮಾಹಿತಿ, ಸಕ್ಕರೆ ರೋಗ ತಪಾಸಣೆ ನಡೆಸಲಾಯಿತು.ಈ ಶಿಬಿರವನ್ನು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು, ಶಿಬಿರದ ಸಂಯೋಜಕರಾದ ಸಂಘದ ಉಪಾಧ್ಯಕ್ಷರಾದ ಡಾ ಸುಧಾಕರ್ ಶೆಟ್ಟಿ, ಸತೀಶ್ ರೈ ಕಲ್ಲಂಗಳ ಗುತ್ತು, ಗುರುದ್ವಾರ ಗುರುನಾನಕ್ ದರ್ಬಾರ್ ನ ಅಧ್ಯಕ್ಷ ಸರ್ದಾರ್ ಚರಣ್ ಜೀತ್ ಸಿಂಗ್ ಶೈನಿ, ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಕಾರ್ಯಾಧ್ಯಕ್ಷ ಸರ್ದಾರ್ ಸಂತ್ ಸಿಂಗ್ ಮೋಕ್ಷಾ ಮತ್ತು ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿದರು.ಮನುಷ್ಯ ತನ್ನ ದೈನಂದಿನ ಬದುಕಿನಲ್ಲಿ ಅತ್ಯಂತ ಬಿಡುವಿಲ್ಲದ ಕೆಲಸದಲ್ಲಿ ನಿರತನಾಗಿರುತ್ತಾನೆ. ಹಿಂದಿನ ಜೀವನ ಶೈಲಿಗೆ ಹೋಲಿಸಿದರೆ ಇಂದಿನ ಜೀವನ ಶೈಲಿಯೇ ಬೇರೆ. ಜೀವನದ ಜಂಜಾಟದಲ್ಲಿ ಉದ್ಯೋಗ ಒತ್ತಡ, ಉದ್ಯಮದ ಜವಾಬ್ದಾರಿ, ಮನೆ ಮಕ್ಕಳ ಉಸ್ತುವಾರಿಯಲ್ಲಿ ನಿತ್ಯವೂ ಸಮಯದ ಕೊರತೆ ನಮಗೆ ಬರುತ್ತದೆ. ಇದರಿಂದ ನಮ್ಮ ದೇಹದಲ್ಲಿ ಹಲವಾರು ರೀತಿಯ ಏರುಪೇರುಗಳು ಆಗುತ್ತವೆ. ನಂತರ ತನ್ನಿಂತಾನೆ ಯಾವುದಾದರೊಂದು ರೋಗಕ್ಕೆ ತುತ್ತಾಗುತ್ತೇವೆ. ಇಂದಿನ ದಿನಗಳಲ್ಲಿ ಮನುಷ್ಯರಲ್ಲಿ ಕಾಣಸಿಗುವ ಯಾವುದಾದರೊಂದು ಆರೋಗ್ಯ ತೊಂದರೆಗಳು ಸಾಮಾನ್ಯವಾಗಿವೆ. ಆದರೆ ಈಗಿನ ದೈಹಿಕ, ಮಾನಸಿಕ, ಸಾಮಾಜಿಕ ಒತ್ತಡದ ನಡುವೆ ಆರೋಗ್ಯವಂತನಾಗಿರಲು ಬಯಸಿದರೂ ಪರಿಸರ ಮತ್ತು ಪರಿಸ್ಥಿತಿ ನಮ್ಮ ಆರೋಗ್ಯವನ್ನು ಬದಲಾಯಿಸುತ್ತದೆ. ಇದರಿಂದ ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಬಹಳ ಮುಖ್ಯ. ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಯಾದರೂ ಮೊದಲಾಗಿ ನಾವು ವೈದ್ಯರ ಸಲಹೆಯಂತೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಯೋಚಿಸಿವುದು ಮುಖ್ಯ. ಆರೋಗ್ಯಪೂರ್ಣ ಜೀವನ ಎಲ್ಲರೂ ಬಯಸುತ್ತಾರೆ. ಆದರೆ ನಿರ್ಲಕ್ಷ್ಯ ವಹಿಸದೆ ಸೂಕ್ತ ಸಮಯದಲ್ಲಿ ಸಲಹೆ ಪಡೆಯುವುದು ಮುಖ್ಯ ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು ನುಡಿದರು. ಕ್ಯಾಂಪ್ ಗುರುದ್ವಾರ ಗುರುನಾನಕ್ ದರ್ಬಾರ್ ಮತ್ತು ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದಿಂದ ಉತ್ತಮ ರೀತಿಯಲ್ಲಿ ಸ್ಪಂದನೆ ಸಿಕ್ಕಿದೆ. ನಮ್ಮ ಉಪಾಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯವರ ಮುಂದಾಳತ್ವದಲ್ಲಿ ಮತ್ತು ಇಲ್ಲಿ ಸೇವೆ ನೀಡಲು ಬಂದಿರುವ ವೈದ್ಯರ ಸಹಕಾರದಿಂದ ಈ ಆರೋಗ್ಯ ತಪಾಸಣೆ ಸಮಾಜದ ಜನ ಸಾಮಾನ್ಯರಿಗೆ ಸಹಕಾರಿಯಾಗಿದೆ ಎಂದರು.ಉಪಾಧ್ಯಕ್ಷ ಡಾ ಸುಧಾಕರ್ ಶೆಟ್ಟಿ ಮಾತನಾಡಿ, ಸಮಾಜ ಬಾಂಧವರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಈ ಶಿಬಿರ ಆಯೋಜಿಸಲಾಗಿದೆ. ಪ್ರತೀ ವರ್ಷವೂ ಈ ಶಿಬಿರ ನಡೆಯಬೇಕು. ನಮ್ಮ ಸಮಾಜದ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ವಿವಿಧ ಸ್ತರದ ತಪಾಸಣಾ ವೈದ್ಯರು ಒಂದೇ ಕಡೆ ಇದ್ದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಸದಾವಕಾಶ ದೊರೆಯುತ್ತದೆ. ಇದು ಸಮಾಜದ ಕಲ್ಯಾಣಕ್ಕಾಗಿ ಮಾಡುವ ಸೇವೆ ನಮ್ಮದು. ಸುಮಾರು 28 ವರ್ಷಗಳಿಂದ ಗುರುನಾನಕ್ ಮೆಡಿಕಲ್ ಫೌಂಡೇಶನ್ ಅರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡು ನಮ್ಮ ಸಂಘಕ್ಕೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಆರೋಗ್ಯದ ಬಗ್ಗೆ ನಾವು ನಿಮ್ಮ ಸೇವೆಗೆ ಸದಾ ಸಿದ್ದರಿದ್ದೇವೆ ಎಂದರು.
ಈ ಆರೋಗ್ಯ ತಪಸಣಾ ಶಿಬಿರದ ವೈದ್ಯಕೀಯ ಸಲಹೆಗಾರರ ಬೋರ್ಡ್ ನ ಪ್ರಮುಖರಾದ ಡಾ ಹಂಸರಾಜ್ ಶೆಟ್ಟಿ ಎಂ.ಬಿ.ಎ, ಡಾ ಸಂಜಯ್ ಕುಲಕರ್ಣಿ, ಡಾ ಸುಜಯ್ ಹೆಗ್ಡೆ, ಡಾ ಜ್ಯೋತಿ ಶೆಟ್ಟಿ, ಡಾ ಪ್ರವೀಣ್ ಅರ್ ಶೆಟ್ಟಿ, ಡಾ ವಿವೇಕ್ ಹೆಗ್ಡೆ, ಡಾ ಸಂಜಯ್ ತೆಕವಡೆಯವರ ಸಲಹೆಯೊಂದಿಗೆ ಪುಣೆಯ ಖ್ಯಾತ ವೈದ್ಯರುಗಳಾದ ಡಾ. ಚಿತ್ತರಂಜನ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ.ಉರ್ವಿ ಕೊಥಾರಿ, ಡಾ ರೋಬರ್ಟ್ ಲೋಬೊ, ಡಾ.ವಿಕಾಸ್ ಮಂತೋಲೆ, ಡಾ ಸಮಿತಾ ಮೂಲಾನಿ, ಡಾ ಸತ್ಯಶೀಲ ನ್ಯಾಕ್ ರವರು ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಿದರು. ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಹಾಗೂ ಎಲ್ಲಾ ಸಮಾಜದ ಬಾಂಧವರು ವಿವಿಧ ವಿಭಾಗಗಳಲ್ಲಿ ಮತ್ತು ಹಲವಾರು ರೀತಿಯ ಆರೋಗ್ಯ ತಪಾಸಣೆ ಮಾಡಿಸಿ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದರು.ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ನಾರಾಯಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಪೆಲತ್ತೂರು ಮೇಲ್ಮನೆ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ, ಮಹೇಶ್ ಹೆಗ್ಡೆ ಪೊಳಲಿ, ಅಶೋಕ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅದೀಪ್ ಶೆಟ್ಟಿ, ಮಹಿಳಾ ವಿಭಾಗದ ಶಾಲಿನಿ ಶೆಟ್ಟಿ, ಪೂರ್ಣಿಮಾ ಶೆಟ್ಟಿ, ಪ್ರೀತಿ ಶೆಟ್ಟಿ, ಲತಾ ಶೆಟ್ಟಿ, ಮಾಜಿ ಅಧ್ಯಕ್ಷೆಯರುಗಳಾದ ಸುಜಾತ ಎಸ್ ಹೆಗ್ಡೆ, ದೀಪಾ ಎ ರೈ ಮತ್ತು ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.
ವರದಿ : ಹರೀಶ್ ಮೂಡಬಿದಿರೆ, ಪುಣೆ