ಕುಂಬಳೆ ಸೀಮೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ 2025ರ ಮೇ 6ರಿಂದ 11ರ ತನಕ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಇದರ ಸಿದ್ಧತೆಗಳು ಆರಂಭಗೊಂಡಿರುವುದಾಗಿ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ತಾರನಾಥ ರೈ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2013ರಲ್ಲಿ ಬ್ರಹ್ಮಕಲಶೋತ್ಸವ ನಡೆದಿದ್ದು, ಸರಿಯಾಗಿ 12 ವರ್ಷದ ಬಳಿಕ ಇದೀಗ ಮತ್ತೆ ಬ್ರಹ್ಮಕಲಶೋತ್ಸವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಶ್ರೀ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಕಾಲಕಾಲಕ್ಕೆ ನಡೆಯುತ್ತಾ ಬಂದಿದೆ. ಕಾಟುಕುಕ್ಕೆ, ಎಣ್ಮಕಜೆ, ಶೇಣಿ ಮತ್ತು ಪಡ್ರೆ ಗ್ರಾಮಗಳ ಗ್ರಾಮ ದೇವಸ್ಥಾನವೂ ಇದಾಗಿದೆ.
ತೆನ್ಕಾಯಿ ಕುಕ್ಕೆ ಎಂದು ಪ್ರಸಿದ್ಧಿಯನ್ನು ಹೊಂದಿದೆ. ಶ್ರೀ ಕ್ಷೇತ್ರದಲ್ಲಿ ಬಾಲ ಸುಬ್ರಮಣ್ಯ ಸ್ವಾಮಿ ಶ್ರೀ ಸುಬ್ರಾಯನಾಗಿ, ವನ ಶಾಸ್ತಾರ, ವನದುರ್ಗೆ ಮತ್ತು ಗಣಪತಿ ದೇವತಾ ಸಾನಿಧ್ಯವಿದೆ. ಅದಲ್ಲದೇ ಪಿಲಿ ಚಾಮುಂಡಿ ದೈವ ನೇಮ ತಂಬಿಲಗಳು ನಡೆಯುತ್ತವೆ. ಇದೀಗ ಕೇರಳ ಮಲಬಾರ್ ದೇವಸ್ವಂ ಮಂಡಳಿಯ ಅಧಿಕಾರದಲ್ಲಿದ್ದು, ತಾರಾನಾಥ ರೈ ಪಡ್ಡಂಬೈಲುಗುತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಶ್ರೀ ಕ್ಷೇತ್ರದ ದೇವರಿಗೆ ರಥ ಸಮರ್ಪಣೆಯೊಂದಿಗೆ ರಥೋತ್ಸವ ನಡೆದಿದೆ. ಶ್ರೀ ಕ್ಷೇತ್ರಕ್ಕೆ ಹೊಂದಿಕೊಂಡು ನೂತನ ಸೇವಾ ಕೌಂಟರ್ ಆಗುವ ಶೌಚಾಲಯದ ಕಟ್ಟಡ ಶೀಘ್ರದಲ್ಲಿ ನಿರ್ಮಿಸಲಾಗುವುದು.ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕಾಗಿ ಶ್ರೀ ಕ್ಷೇತ್ರದ ರಕ್ಷಾಧಿಕಾರಿಯಾಗಿ ಬ್ರಹ್ಮಶ್ರೀ ನೀಲೇಶ್ವರ ಕೀಕಾಂಗೋಡು ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಾಂತ್ರಿಗಳು, ಗೌರವಾಧ್ಯಕ್ಷರಾಗಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮತ್ತು ಉದ್ಯಮಿ ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ ಅಧ್ಯಕ್ಷರಾಗಿರುವ ಸಮಿತಿ ರಚಿಸಲಾಗಿದೆ.
ಬ್ರಹ್ಮಕಲಶೋತ್ಸವ ಯಶಸ್ವಿಗಾಗಿ ಉಪ ಸಮಿತಿಗಳನ್ನು ರಚಿಸಿ 4 ಗ್ರಾಮಗಳಿಂದ ಪ್ರತಿಯೊಬ್ಬ ಪ್ರಮುಖರನ್ನು ಸೇರಿಸಿಕೊಂಡು ಗ್ರಾಮದಲ್ಲಿರುವ ಶ್ರದ್ಧಾ ಕೇಂದ್ರಗಳನ್ನು ಕೇಂದ್ರೀಕರಿಸಿ ಪ್ರಾದೇಶಿಕ ಸಮಿತಿ ರಚಿಸಿ ಸಿದ್ಧತೆ ಮಾಡಿಕೊಳ್ಳಲಾಗುವುದು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಬ್ರಹ್ಮಕಲಶೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಚಕ್ಕಿತ್ತಡ್ಕ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರಾದ ಸುಧಾಕರ ಕಲ್ಲಗದ್ದೆ, ಚನಿಯಪ್ಪ ಪರಗುಡ್ಡೆ, ರಿತೇಶ್ ಕಿರಣ್ ಕಾಟುಕುಕ್ಕೆ ಬ್ರಹ್ಮಕಲಶೋತ್ಸವ ಸಮಿತಿ ಜತೆ ಕಾರ್ಯದರ್ಶಿ ಸಾತ್ವಿಕ್ ಖಂಡೇರಿ ಉಪಸ್ಥಿತರಿದ್ದರು.