ಬಂಟರ ಸಂಘ ಬೆಂಗಳೂರು ಈ ಬಾರಿ ಯುವ ಬಂಟರ ಸಮಿತಿ ಬಂಟರನ್ನು ಒಗ್ಗೂಡಿಸಿ ಅದ್ದೂರಿಯಾಗಿ 31ನೇ ಡಿಸೆಂಬರ್ 2024 ರಂದು ಸಂಘದ ಆವರಣದಲ್ಲಿ ಹೊಸ ವರ್ಷಾಚರಣೆಯನ್ನು ಹಮ್ಮಿಕೊಂಡಿತ್ತು. ನವೆಂಬರ್ 22ರಂದು ಗಣ್ಯರ ಸಮ್ಮುಖದಲ್ಲಿ ಪೋಸ್ಟರ್ ಲೋಕಾರ್ಪಣೆ ಮಾಡಿ ಸಮಾಜದ ಜನರ ಜೊತೆ ಕಾರ್ಯಕ್ರಮ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದ ತಂಡ ಜನರ ಮನ ಮುಟ್ಟಲು ಎಲ್ಲಾ ತರದಲ್ಲೂ ಪ್ರಯತ್ನಿಸಿತ್ತು.31ರ ಸಂಜೆ ಕಿಕ್ಕಿರಿದು ತುಂಬಿದ್ದ ಬಂಟರ ಬಳಗ, ದೀಪಾಲಂಕಾರಗೊಂಡು ಮಿರುಗುತ್ತಿದ್ದ ಬಂಟರ ಸಂಘದ ಆವರಣದಲ್ಲಿ ಸಂಜೆ 7 ರಿಂದಲೇ ಕಾರ್ಯಕ್ರಮಗಳು ಪ್ರಾರಂಭವಾದವು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿಜಯ ಶೆಟ್ಟಿ ಹಾಲಾಡಿ, ಕೋಶಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ, ಯುವ ಸಮಿತಿ ಅಧ್ಯಕ್ಷ ಅಜಿತ್ ವಿ ಶೆಟ್ಟಿ ಹಾಗೂ ಸಂಚಾಲಕ ಪ್ರಸಾದ್ ಶೆಟ್ಟಿ ಅರೆಹೊಳೆ ಸಮೇತರಾಗಿ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ವೇದಿಕೆ ಅಲಂಕರಿಸಿ ನೆರೆದ ಬಂಟ ಬಂಧುಗಳಿಗೆ ಸ್ವಾಗತಿಸಿ ಕಾರ್ಯಕ್ರಮಕ್ಕೆ ಶುಭಕೋರಿ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಯುವ ಸಮಿತಿಯು ಸರಣಿ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸರಿಗಮಪ ಖ್ಯಾತಿಯ ಕುಮಾರಿ ಶಿವಾನಿ ನವೀನ, ಅರೆಹೊಳೆ ಪ್ರತಿಷ್ಠಾನದ ಶ್ವೇತಾ ಅರೆಹೊಳೆ ತಂಡ, ಎಪಿಫನಿ ಬ್ಯಾಂಡ್ ಧನುಷ್ ಶೆಟ್ಟಿ ಹಾಗೂ ತಂಡ, ಸೀತಾರಾಮ ಧಾರಾವಾಹಿ ಖ್ಯಾತಿಯ ಸಿಹಿ (ರೀತು ಸಿಂಗ್), ನಿರೂಪಣೆಯನ್ನು ಕಲಾದೇಗುಲ ಶ್ರೀನಿವಾಸ್ ಹಾಗೂ ಪ್ರಿಯಾ ಅವರು ನಿರ್ವಹಿಸಿದರು. ಹಾಗೆಯೇ ಹತ್ತಾರು ಖ್ಯಾತ ಕಲಾವಿದರಿಂದ ಸಾಂಸ್ಕ್ರತಿಕ ರಸಸಂಜೆ ಅದ್ಭುತವಾಗಿ ಮೂಡಿ ಬಂದು ನೆರೆದ ಸಭಿಕರ ಪ್ರಶಂಸೆಗೆ ಕಾರಣವಾಯಿತು.ಸರಿಯಾಗಿ 12 ಗಂಟೆಗೆ ವೇದಿಕೆ ಮೇಲೆ ಕೇಕ್ ಕತ್ತರಿಸಿ ಕಟ್ಟಡಗಳಿಂದ ಗಗನಚುಂಬಿ ಸಿಡಿಮದ್ದುಗಳನ್ನು ಹಾರಿ ಬಿಟ್ಟು ಹೊಸವರ್ಷವನ್ನು ವಿಭಿನ್ನವಾಗಿ ಬರ ಮಾಡಿಕೊಂಡರು. ಪ್ರಖ್ಯಾತ ಡಿಜೆ ದಿವು ಅವರು ಡಿಜೆ ಪ್ಲೇ ಮಾಡಿದ್ದು ಮಕ್ಕಳಿಂದ ಹಿಡಿದು ಹಿರಿಯರು ಸೇರಿದಂತೆ ಎಲ್ಲರೂ ಡಿಜೆ ಸೌಂಡಿಗೆ ತಲೆ ತೂಗಿ ಎಲ್ಲರೂ ನೃತ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪ್ರಖ್ಯಾತ ಕ್ಯಾಟರ್ಸ್ ಅವರಿಂದ ಊಟೋಪಚಾರ ವ್ಯವಸ್ಥೆ ಮಾಡಿದ್ದು, ಅತ್ಯಂತ ಶುಚಿ ರುಚಿಯಾದ ಅಡುಗೆ ಬಡಿಸಿ ಪ್ರತಿಯೊಬ್ಬರನ್ನೂ ಸಂತೃಪ್ತಿಪಡಿಸಿದರು. ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಸಾದ್ ಶೆಟ್ಟಿ ಅರೆಹೊಳೆ