‘ಗ್ರಹ ಪಂಕ್ತಿಯಲ್ಲಿ ಅತ್ಯಂತ ಪ್ರಭಾವಶಾಲಿಯಾದ ಶನಿ ಗ್ರಹದ ಕಾರಣದಿಂದ ವಿವಿಧ ಬಗೆಯ ಜಾತಕ ದೋಷಗಳು ಸಂಭವಿಸುತ್ತವೆ. ಅದರ ನಿವಾರಣೆಗಾಗಿ ಉಳ್ಳವರು ದುಬಾರಿ ಶನಿ ಶಾಂತಿ ಪೂಜೆಗಳನ್ನು ಮಾಡಿಸುವುದು ವಾಡಿಕೆಯಾಗಿದೆ. ಆದರೆ ಶನಿಕಥಾ ಪ್ರವಚನ, ಪಠಣ, ಕೀರ್ತನ ಮತ್ತು ಅವುಗಳನ್ನು ಭಕ್ತಿಪೂರ್ವಕ ಶ್ರವಣ ಮಾಡುವುದರಿಂದ ಜನಸಾಮಾನ್ಯರೂ ಬಹು ಸುಲಭವಾಗಿ ಶನಿದೋಷ ಮುಕ್ತರಾಗಲು ಸಾಧ್ಯ’ ಎಂದು ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ಬಜ್ಪೆ ಶ್ರೀ ಶನೈಶ್ಚರ ದೇವಸ್ಥಾನದ ವಾರ್ಷಿಕ ಜಾತ್ರಾ ಸಂದರ್ಭದಲ್ಲಿ ‘ಶ್ರೀ ಶನೈಶ್ಚರ ಮಹಾತ್ಮೆ – ಯಕ್ಷ ಕಾವ್ಯ ಕಥನ’ ಕಾರ್ಯಕ್ರಮದಲ್ಲಿ ಪ್ರವಚನಕಾರರಾಗಿ ಅವರು ಮಾತನಾಡಿದರು. ಖ್ಯಾತ ಹರಿದಾಸ ಮತ್ತು ಗಾಯಕ ತೋನ್ಸೆ ಪುಷ್ಕಳ ಕುಮಾರ್ ಹಾಗೂ ಮಹಿಳಾ ಭಾಗವತರು ಭವ್ಯಶ್ರೀ ಕುಲ್ಕುಂದ ಕಾವ್ಯ ಗಾಯನ ಮಾಡಿದರು. ವರುಣ್ ಆಚಾರ್ಯ ಮತ್ತು ಸಮರ್ಥ್ ಉಡುಪ ಚೆಂಡೆ ಮದ್ದಲೆಗಳಲ್ಲಿ ಸಹಕರಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ವ್ಯಾಖ್ಯಾನ ನೀಡಿದರು.ಶ್ರೀ ಶನೈಶ್ಚರ ದೇವಸ್ಥಾನದ ಧರ್ಮದರ್ಶಿ ಆನಂದ ಪೂಜಾರಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪ್ರಧಾನ ಅರ್ಚಕ ಅಭಿಜಿತ್ ಆನಂದ ಭಟ್ ಅವರೊಂದಿಗೆ ರವಿ ಶಾಂತಿ, ಶ್ರೀಧರ ಶಾಂತಿ, ಯಶೋಧರ ಶಾಂತಿ ಪೂಜಾ ವಿಧಿಗಳನ್ನು ನಡೆಸಿಕೊಟ್ಟರು. ಪೂರ್ವಾಹ್ನ ಗಣಹೋಮ, ಪಂಚಾಮೃತ ಅಭಿಷೇಕ, ನವಗ್ರಹ ಶಾಂತಿ ಹೋಮ, ಸಗ್ರಹ ಮುಖ ಶನಿ ಶಾಂತಿ ಹೋಮ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ಭಜನೆ, ದುರ್ಗಾ ನಮಸ್ಕಾರ ಪೂಜೆ, ಉತ್ಸವ ಬಲಿ, ಪ್ರಸಾದ ವಿತರಣೆ ಹಾಗೂ ಕ್ಷೇತ್ರದ ದೈವಗಳಿಗೆ ವಿನಿಯೋಗಾದಿಗಳು ಜರಗಿದವು. ಪೂಜಾ ಸೇವಾ ಸಮಿತಿ ಸದಸ್ಯರು ಮತ್ತು ಬಹು ಸಂಖ್ಯೆಯಲ್ಲಿ ಭಕ್ತ ಬಾಂಧವರು ಭಾಗವಹಿಸಿದ್ದರು.