ಜನವರಿ 26 ರಂದು ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವಕ್ಕೆ ಸುರತ್ಕಲ್ ಬಂಟರ ಸಂಘದಿಂದ ನೀಡುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬಂಟರ ಭವನದಲ್ಲಿ ಮಹೂರ್ತ ನೆರವೇರಿತು. ಸುರತ್ಕಲ್ ಬಂಟರ ಸಂಘದ ಕಟ್ಟಡ ಸಮಿತಿ ಛೇರ್ಮನ್ ಕರುಣಾಕರ ಎಂ ಶೆಟ್ಟಿ ಮದ್ಯಗುತ್ತು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ನಾವು ನೀಡುವ ಕಾರ್ಯಕ್ರಮದಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಶಿಸ್ತು ಏಕಾಗ್ರತೆ ಛಲಗಳಿಂದ ಸಾಧಿಸಿದಾಗ ಯಶಸ್ಸು ನಮ್ಮದಾಗುತ್ತದೆ. ಪುಣೆಯಲ್ಲಿ ಸುರತ್ಕಲ್ ಬಂಟರ ಸಂಘದ ಸದಸ್ಯರು ನೀಡುವ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಲಿ, ಕಾರ್ಯಕ್ರಮಕ್ಕೆ ತನ್ನಿಂದಾದ ಸಹಾಯ ಮಾಡುವುದಾಗಿ ಶುಭ ಹಾರೈಸಿದರು.

ಮಾಜಿ ಅಧ್ಯಕ್ಷ ಎಂ ದೇವಾನಂದ ಶೆಟ್ಟಿ ಮಾತನಾಡಿ, ಸತತ ಪರಿಶ್ರಮ ಪಟ್ಟಾಗ ನಮ್ಮ ಗೆಲುವನ್ನು ತಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ರಂಗದಲ್ಲಿ ಸುರತ್ಕಲ್ ಬಂಟರ ಸಂಘವು ಪ್ರತಿಯೊಂದು ಪ್ರದೇಶದಲ್ಲೂ ಒಳ್ಳೆಯ ಸಾಧನೆ ಮಾಡಿದೆ. ಪುಣೆಯಲ್ಲಿ ಎಲ್ಲಾ ಸದಸ್ಯ ಕಲಾವಿದರು ಉತ್ತಮ ಪ್ರದರ್ಶನ ನೀಡುವಂತಾಗಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಲೋಕಯ್ಯ ಶೆಟ್ಟಿ ಮುಂಚೂರು ಮಾತನಾಡಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸುರತ್ಕಲ್ ಬಂಟರ ಸಂಘಕ್ಕೆ ಒಳ್ಳೆಯ ಹೆಸರಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ ಎಂದರು.
ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಮಾತನಾಡಿ, ಒಂದು ಗಂಟೆಯ ಪ್ರದರ್ಶನಕ್ಕೆ ತುಂಬಾ ಶ್ರಮ ವಹಿಸಬೇಕಾಗುತ್ತದೆ. ಕಲಾವಿದರೆಲ್ಲರೂ ಶಿಸ್ತನ್ನು ಅಳವಡಿಸಿ ಪ್ರದರ್ಶನ ನೀಡಬೇಕು. ಮುಖ್ಯವಾಗಿ ಸಮಯದ ಪರಿಪಾಲನೆ ಅಗತ್ಯ ಎಂದರು. ನಿರ್ದೇಶಕ ಗಿರೀಶ್ ಎಂ ಶೆಟ್ಟಿ ಕಟೀಲು ಮಾತನಾಡಿ, ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವಕ್ಕೆ ಯಾವುದಾದರೂ ನಾಟಕ ತಂಡವನ್ನು ಕರೆಸಿ ಪ್ರದರ್ಶನ ಕೊಡಿಸಬಹುದಿತ್ತು. ಆದರೆ ಪುಣೆ ಬಂಟರ ಸಂಘವು ಸುರತ್ಕಲ್ ಬಂಟರ ಸಂಘದ ಮೇಲೆ ವಿಶ್ವಾಸ ಇರಿಸಿ ಅವಕಾಶ ನೀಡಿದ್ದಾರೆ. ಈ ಅವಕಾಶವನ್ನು ಸದುಪಯೋಗಪಡಿಸಿ ಉತ್ತಮ ಪ್ರದರ್ಶನ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು. ನಿರ್ದೇಶಕಿ ರಾಜೇಶ್ವರಿ ಡಿ ಶೆಟ್ಟಿಯವರು ಸಾಂಸ್ಜೃತಿಕ ಕಾರ್ಯಕ್ರಮದ ಸ್ವರೂಪವನ್ನು ತಿಳಿಸಿ, ಇದು ಎಲ್ಲರ ಜವಾಬ್ದಾರಿ, ಸಮಯ ಪರಿಪಾಲನೆ ಅಗತ್ಯ ಎಂದರು.
ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಉಪಾಧ್ಯಕ್ಷ ಪುಷ್ಪರಾಜ ಶೆಟ್ಟಿ ಕುಡುಂಬೂರು, ಕಾರ್ಯದರ್ಶಿ ಲೀಲಾದರ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಜಯರಾಮ್ ಶೆಟ್ಟಿ, ಮಹಿಳಾ ಸಾಂಸ್ಕೃತಿಕ ಕಾರ್ಯದರ್ಶಿ ಸುಜಾತಾ ಹರೀಶ್ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯಾ ಶೆಟ್ಟಿ, ಪ್ರವೀಣ್ ಶೆಟ್ಟಿ, ಕಿರಣ್ ಪ್ರಸಾದ್ ರೈ, ದಿವಾಕರ ಸಾಮಾನಿ ಚೇಳಾರ್, ದೇವೇಂದ್ರ ಶೆಟ್ಟಿ, ಮಾಧವ ಶೆಟ್ಟಿ ತಡಂಬೈಲ್, ರಮೇಶ್ ಶೆಟ್ಟಿ, ರಾಮಚಂದ್ರ ಶೆಟ್ಟಿ ತಡಂಬೈಲ್, ಅಕ್ಷಯ್ ಶೆಟ್ಟಿ, ಸುಕೇಶ್ ಶೆಟ್ಟಿ ಚೇಳಾರ್ ಮೊದಲಾದವರು ಉಪಸ್ಥಿತರಿದ್ದರು.








































































































