ಮಿಜಾರು: ‘ಇಂದಿನ ಡಿಜಿಟಲ್ ಕಾಲಘಟ್ಟದಲ್ಲಿ ಕನ್ನಡದ ಬೆಳವಣಿಗೆಗೆ ತಂತ್ರಜ್ಞಾನದ ಕೊಡುಗೆ ಅತ್ಯವಶ್ಯ ಹಾಗೂ ಅನಿವಾರ್ಯ’ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ಚಿನ್ನಪ್ಪ ಗೌಡ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ಮತ್ತು ತಂತ್ರಜ್ಞಾನ ಕಾಲೇಜು ಕನ್ನಡ ಸಂಘವು ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಕನ್ನಡ ಹಬ್ಬ -2024’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆಯ ಅಳಿವು- ಉಳಿವಿಗೆ ತಂತ್ರಜ್ಞಾನದ ಬಳಕೆಯೂ ಮಹತ್ತರವಾಗಿದೆ. ತಂತ್ರಜ್ಞಾನದ ಮೂಲಕ ಕನ್ನಡದ ವ್ಯಾಪ್ತಿ ಮತ್ತು ಸತ್ವವನ್ನು ಹೆಚ್ಚಿಸುವುದು ಹಾಗೂ ಕಂಪನ್ನು ಪಸರಿಸುವುದು ಬಹುಮುಖ್ಯವಾಗಿದೆ. ಭವಿಷ್ಯದ ಪೀಳಿಗೆಗೆ ಕನ್ನಡದ ಪ್ರಸ್ತುತತೆಯನ್ನು ಖಚಿತಪಡಿಸಬಹುದು ಎಂದರು.


ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಸತ್ಯನಾರಾಯಣ ಮಲ್ಲಿಪಟ್ಟಣ ಮಾತನಾಡಿ, ಕನ್ನಡ ಭಾಷೆಯು ಆಳವಾದ ಅರ್ಥಗಳನ್ನು ಹೊಂದಿರುವ ಪದಗಳಿಂದ ಕೂಡಿದ ಸಮೃದ್ಧ ಭಾಷೆಯಾಗಿದೆ. ದೈನಂದಿನ ಸಂಬಂಧಗಳು ಮತ್ತು ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕನ್ನಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕನ್ನಡವು ನಮ್ಮ ಜೀವನದ ಹಾಗೂ ಸಂವಹನದ ಅವಿಭಾಜ್ಯ ಅಂಗ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ‘ಕನ್ನಡ ಮಾತನಾಡುವ ಜನರನ್ನು ಒಗ್ಗೂಡಿಸುವ ಶಕ್ತಿ ಆ ಭಾಷೆಯಲ್ಲಿದೆ. ಕನ್ನಡ ನಮ್ಮ ಆತ್ಮಭಾಷೆ, ಇಂಗ್ಲಿಷ್ ಕಾರ್ಯ ಭಾಷೆ ಎಂದರು. ವಿವಿಧ ಸ್ಪರ್ಧೆಗಳ ವಿಜೇತರ ಹೆಸರನ್ನು ಕನ್ನಡ ಸಂಘದ ಸಂಚಾಲಕರಾದ ಪ್ರೊ. ಗಣೇಶ್ ಆಚಾರ್ಯ ವಾಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ ಕೆ. ವೇಣುಗೋಪಾಲ ಶೆಟ್ಟಿ, ಕನ್ನಡ ಸಂಘದ ಸಂಚಾಲಕ ಡಾ.ಬಿ. ಗುರುಶಾಂತ ವಗ್ಗರ್, ವಿದ್ಯಾರ್ಥಿ ವ್ಯವಹಾರಗಳ ಡೀನ್ ಪ್ರೊ. ದುರ್ಗಾ ಪ್ರಸಾದ್ ಬಾಳಿಗಾ ಹಾಗೂ ವಿದ್ಯಾರ್ಥಿಗಳು ಇದ್ದರು. ಕನ್ನಡ ಸಂಘದ ವಿದ್ಯಾರ್ಥಿ ಸಂಚಾಲಕರಾದ ಸ್ಪಂದನಾ, ತೇಜಸ್, ಕನ್ನಡ ಸಂಘದ ವಿದ್ಯಾರ್ಥಿ ಸಂಚಾಲಕರಾದ ಗಣೇಶ್ ಆಚಾರ್ಯ ವಂದಿಸಿದರು. ಸಭಾ ಕರ್ಯಕ್ರಮ ನಂತರ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕರ್ಯಕ್ರಮ ನಡೆಯಿತು.





































































































