ತಪಸ್ಯ ಫೌಂಡೇಶನ್, ಎಲ್ ಸಿಐಎಫ್, ಲಯನ್ಸ್ ಇಂಟರ್ ನ್ಯಾಷನಲ್ ಮತ್ತು ಕೆಎಂಸಿ ಆಸ್ಪತ್ರೆ ಸಹಯೋಗದೊಂದಿಗೆ ಬಾಲ್ಯದ ಕ್ಯಾನ್ಸರ್ ಆರೈಕೆ ಕಾರ್ಯಕ್ರಮ “ಶೌರ್ಯ” ಇದರ ಉದ್ಘಾಟನಾ ಸಮಾರಂಭ ಗುರುವಾರ ಬೆಳಗ್ಗೆ ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ತಪಸ್ಯ ಫೌಂಡೇಶನ್ ಸ್ಥಾಪಕರಾದ ಸಬಿತಾ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಮಾತಾಡಿದ ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ. ಅವರು, “ಮಕ್ಕಳಿಗೆ ಕ್ಯಾನ್ಸರ್ ಬಂದಾಗ ಅವರ ಇಡೀ ಕುಟುಂಬ ಅದರಲ್ಲಿ ಬಲಿಪಶು ಆಗುತ್ತದೆ. ಮಕ್ಕಳ ಕ್ಯಾನ್ಸರ್ ಆರೈಕೆಯನ್ನು ಮಾಡುತ್ತಿರುವ ತಪಸ್ಯ ಫೌಂಡೇಶನ್ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿದೆ. ಲಯನ್ಸ್ ಸಂಸ್ಥೆ ಮನೆ ಮನೆಗೆ ಹೋಗಿ ಕ್ಯಾನ್ಸರ್ ರೋಗಿಗಳನ್ನು ಗುರುತಿಸಿ ಅವರಿಗೆ ಔಷಧಿ ಸಹಿತ ಆರ್ಥಿಕ ಸಹಾಯವನ್ನು ಮಾಡುವಲ್ಲಿ ತಪಸ್ಯ ಫೌಂಡೇಶನ್ ನೆರವನ್ನು ನೀಡುತ್ತಿದೆ. ಕ್ಯಾನ್ಸರ್ ಯಾವ ಪ್ರಾಯದಲ್ಲಿ ಬೇಕಾದರೂ ಬರಬಹುದು. ಅದು ಗಂಭೀರ ಸ್ಥಿತಿ ತಲುಪಿದಾಗ ಮಾತ್ರ ಜನರು ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಬಾಲ್ಯದಲ್ಲೇ ಕ್ಯಾನ್ಸರ್ ಅನ್ನು ಗುರುತಿಸಿಕೊಂಡು ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣಮುಖರಾಗಿ ಜೀವನ ಸಾಗಿಸಬಹುದು. ತಪಸ್ಯ ಫೌಂಡೇಶನ್ ಮೂಲಕ ಸಬಿತಾ ಶೆಟ್ಟಿಯವರು ಇನ್ನು ಮುಂದೆಯೂ ಇದೇ ರೀತಿ ಕಾರ್ಯಕ್ರಮ ಹಮ್ಮಿಕೊಂಡು ಕ್ಯಾನ್ಸರ್ ಪೀಡಿತರಿಗೆ ನೆರವಾಗಲಿ“ ಎಂದರು.
ಬಳಿಕ ಮಾತಾಡಿದ ನಿಟ್ಟೆ ಯೂನಿವರ್ಸಿಟಿ ಉಪಕುಲಪತಿ ಡಾ. ಶಾಂತಾರಾಮ್ ಶೆಟ್ಟಿ ಅವರು, “ಕ್ಯಾನ್ಸರ್ ಬಂದಾಗ ದೇವಸ್ಥಾನ, ಮಸೀದಿ, ಚರ್ಚ್ ಗೆ ಹೋಗಿ ಪ್ರಾರ್ಥನೆ ಮಾಡಿದರೆ ಪ್ರಯೋಜನವಿಲ್ಲ. ಯಾಕೆಂದರೆ ವೈಜ್ಞಾನಿಕವಾಗಿ ಕ್ಯಾನ್ಸರ್ ರೋಗವನ್ನು ಸರಿಯಾದ ಚಿಕಿತ್ಸೆಯಿಂದಷ್ಟೇ ಹಿಮ್ಮೆಟ್ಟಿಸಬಹುದು ಎನ್ನುವುದು ದೃಢ ಪಟ್ಟಿದೆ. ಸರಿಯಾದ ಚಿಕಿತ್ಸೆ, ಸೂಕ್ತ ಸ್ಥಳ ಮತ್ತು ಆರೈಕೆಯಿಂದ ಕ್ಯಾನ್ಸರ್ ಗುಣಪಡಿಸಲು ಸಾಧ್ಯ” ಎಂದರು. “ಕ್ಯಾನ್ಸರ್ ಚಿಕಿತ್ಸೆ ಇಂದು ದುಬಾರಿಯಾಗಿದೆ. ಈ ಕಾರಣಕ್ಕೆ ಬಡ ಅಥವಾ ಮಧ್ಯಮ ಕುಟುಂಬಗಳು ಚಿಕಿತ್ಸೆಯಿಂದ ದೂರ ಉಳಿಯುತ್ತವೆ. ಕ್ಯಾನ್ಸರ್ ಪೀಡಿತ ಮಕ್ಕಳು ಇಂದು ಗುಣಮುಖರಾಗಿ ಜೀವನದಲ್ಲಿ ಸಾಧನೆ ಮಾಡುತ್ತ ನಮ್ಮೆದುರು ಇದ್ದಾರೆ. ನಾವು ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಸಬಿತಾ ಶೆಟ್ಟಿಯವರಿಂದಾಗಿ ನಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದೇವೆ. ಕ್ಯಾನ್ಸರ್ ಅನ್ನುವ ಶಬ್ಧ ಮನೆ ಮಾತ್ರವಲ್ಲದೆ ಇಡೀ ಪರಿಸರದಲ್ಲಿ ನೋವಿನ ವಾತಾವರಣ ಸೃಷ್ಟಿಸುತ್ತೆ. ಕ್ಯಾನ್ಸರ್ ಅನ್ನುವ ಭಯಾನಕ ರೋಗ ಇಂದು ಯಾರನ್ನು ಬೇಕಾದರೂ ಬಾಧಿಸಬಹುದು. ಪ್ರತೀ ಸುರಂಗ ಮಾರ್ಗ ಮುಗಿದ ಬಳಿಕ ಅಲ್ಲೊಂದು ಬೆಳಕು ಕಾಣಿಸುತ್ತದೆ. ಅಂತಹ ಕೆಲಸವನ್ನು ತಪಸ್ಯ ಫೌಂಡೇಶನ್ ಮಾಡುತ್ತಾ ಬಂದಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಯನ್ ವಸಂತ ಶೆಟ್ಟಿ ಮಾತಾಡಿ, “ಲಯನ್ಸ್ ಸಂಘಟನೆ ಮತ್ತು ದಾನಿಗಳ ನೆರವಿನಿಂದ 1.60 ಕೋಟಿ ರೂ. ವೆಚ್ಚದಲ್ಲಿ ಮುಡಿಪು ಬಳಿ ಮಕ್ಕಳ ಕ್ಯಾನ್ಸರ್ ಕೇರ್ ಸೆಂಟರ್ ಪ್ರಾರಂಭವಾಗಲಿದೆ. ಅದರ ಸಂಪೂರ್ಣ ಕೆಲಸವನ್ನು ತಪಸ್ಯ ಫೌಂಡೇಶನ್ ಮೂಲಕ ಸಬಿತಾ ಮತ್ತವರ ತಂಡ ಮಾಡುತ್ತಿದೆ. ಅದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಕ್ಯಾನ್ಸರ್ ಬೇಗನೆ ಮುಗಿಯುವ ರೋಗವಲ್ಲ. ಅದು ತಿಂಗಳು, ವರ್ಷಗಟ್ಟಲೆ ನಮ್ಮನ್ನು ಕಾಡಬಹುದು. ಹೀಗಾಗಿ ಚಿಕಿತ್ಸೆಗೆ ಹಣವಿಲ್ಲದೆ ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂಬ ಉದ್ದೇಶದಿಂದ ತಪಸ್ಯ ಈ ಕಾರ್ಯಕ್ಕೆ ಮುಂದಾಗಿದೆ ನಾವೆಲ್ಲರೂ ಅದರ ಜೊತೆ ಕೈಜೋಡಿಸೋಣ” ಎಂದರು. ಕೆಎಂಸಿ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ತಜ್ಞ ಡಾ.ಹರ್ಷ ಪ್ರಸಾದ್ ಎಲ್. ಮಾತನಾಡಿ, “ಕ್ಯಾನ್ಸರ್ ಚಿಕಿತ್ಸೆ ಪಡೆಯದೇ ಇರಲು ಆರ್ಥಿಕ ಸಂಕಷ್ಟ ಒಂದು ಕಾರಣವಾದರೆ ಕ್ಯಾನ್ಸರ್ ಪೀಡಿತರ ಮನೆ ಮತ್ತು ಸಮಾಜದ ತಿರಸ್ಕಾರ ಕೂಡಾ ಇನ್ನೊಂದು ಕಾರಣ. ಕ್ಯಾನ್ಸರ್ ಲಕ್ಷಣಗಳನ್ನು ಬೇಗನೆ ಗುರುತಿಸಿ ಚಿಕಿತ್ಸೆ ಪಡೆಯುವುದೇ ರೋಗವನ್ನು ಹಿಮ್ಮೆಟ್ಟಿಸಲು ಇರುವ ಸೂಕ್ತ ಮಾರ್ಗವಾಗಿದೆ” ಎಂದರು.
ವೇದಿಕೆಯಲ್ಲಿ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಾಗೀರ್ ಸಿದ್ದಿಕಿ, ತಪಸ್ಯ ಟ್ರಸ್ಟಿ ಲಯನ್ ಮೋಹನ್ ಶೆಟ್ಟಿ, ಲಯನ್ ಅನಿಲ್, ಲಯನ್ ವಿಶ್ವಾಸ್ ರಾವ್, ಲಯನ್ ರಮಾನಾಥ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.