ಹಳ್ಳಿಯ ಹಳೆಯ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ವಿಶ್ವದಲ್ಲಿ ಗುರುತಿಸಿಕೊಂಡಿದ್ದಾರೆ. ಕಾರಣ ಅವರು ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನಹರಿಸಿಕೊಳ್ಳುತ್ತಿದ್ದರು. ಈಗಿನ ಮಕ್ಕಳಿಗೆ ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದರೂ ಧೈರ್ಯ, ಆತ್ಮಸ್ಥೈರ್ಯ ಕಡಿಮೆಯಾಗುತ್ತಿದೆ. ನನ್ನ ಮಾತಾ ಪಿತರ ಸದ್ಗುಣದ ಭಾವದಿಂದ ತಾನು ಉನ್ನತ ಶಿಕ್ಷಣವನ್ನು ಪಡೆದೆ. ಅದಕ್ಕೆ ನನ್ನ ತಾಯಿ ಕಾರಣ. ಹಳ್ಳಿಯ ಜೀವನದಲ್ಲಿ ಉನ್ನತ ಶಿಕ್ಷಣ ನೀಡುವುದು ಬಹಳಷ್ಟು ಕಷ್ಟಕರ. ಆದರೆ ನನಗೆ ಮುಂಬಯಿ ಮತ್ತು ಊರಿನ ಬಂಟರ ಸಂಘಗಳು ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದ ಕಾರಣ ನನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿಲ್ಲ. ನಾನಿಂದು ಉನ್ನತ ಮಟ್ಟದಲ್ಲಿ ಉದ್ಯಮವನ್ನು ಕಟ್ಟಿಕೊಂಡು ರಾಜ್ಯ ದೇಶದ ಪ್ರಶಸ್ತಿಗಳು ನನಗೆ ಲಭಿಸಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಸಮಾಜ ನನಗೆ ನೀಡುತ್ತಿರುವ ಗೌರವ, ಸನ್ಮಾನಗಳು ಎಲ್ಲಾ ಪ್ರಶಸ್ತಿಗಿಂತಲೂ ಉನ್ನತ ಮಟ್ಟದಲ್ಲಿದೆ. ನಾನಿಂದು ಬಂಟರ ಸಂಘಗಳಿಗೆ, ದೇವಸ್ಥಾನಗಳಿಗೆ, ಶಿಕ್ಷಣಕ್ಕೆ ಎಲ್ಲಾ ರೀತಿಯಲ್ಲಿ ಆದಾಯದ ಪಾಲನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದೇನೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಟ್ರಸ್ಟಿ ಹೇರಂಬ ಕೆಮಿಕಲ್ಸ್ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ನುಡಿದರು.
ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಸ್ಥೆಗಳಲ್ಲಿ ಒಂದಾದ ಬಾಂಬೇ ಬಂಟ್ಸ್ ಅಸೋಸಿಯೇಷನ್ ನ ವಾರ್ಷಿಕ ಶೈಕ್ಷಣಿಕ ಸಹಾಯ ವಿತರಣಾ ಕಾರ್ಯಕ್ರಮವು ಆಗಸ್ಟ್ 25 ರಂದು ರವಿವಾರ ಜೂಯಿ ನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ಯಾನ ಸದಾಶಿವ ಶೆಟ್ಟಿಯವರು, ಪಾಲಕರು ಮಕ್ಕಳಿಗೆ ಯಾವುದೇ ಕಷ್ಟ ಎದುರಾದರೂ ಕೂಡಾ ಶಿಕ್ಷಣ ನೀಡುವುದನ್ನು ಕಡಿಮೆ ಮಾಡದಿರಿ. ಶಿಕ್ಷಣ ಮುಂದೆ ಅವರ ಭವಿಷ್ಯ ರೂಪಿಸುವುದಕ್ಕೆ ಸಾಧ್ಯವಾಗುತ್ತದೆ. ಶಿಕ್ಷಣ ಪಡೆದ ಮಕ್ಕಳು ಯಾವ ರೀತಿ ಬೆಳೆಯುತ್ತಾರೆ ಎಂಬುದು ಸಮಾಜದಲ್ಲಿ ಬಹಳಷ್ಟು ಜನ ಉದಾಹರಣೆ ಸಿಗುತ್ತಾರೆ. ಅದರಲ್ಲಿ ನಾನೂ ಕೂಡ ಒಬ್ಬ. ಅಸೋಸಿಯೇಷನ್ ಶಿಕ್ಷಣಕ್ಕೆ ನೀಡುವ ಸಹಕಾರವನ್ನು ನಿರಂತರ ನಡೆಸಬೇಕು ಅದಕ್ಕೆ ನನ್ನ ಬೆಂಬಲವಿದೆ ಎಂದು ನುಡಿದರು.
ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ತುಂಗಾ ಆಸ್ಪತ್ರೆಯ ನಿರ್ದೇಶಕ, ಜವಾಬ್ ಸಂಸ್ಥೆಯ ಅಧ್ಯಕ್ಷ ರಾಜೇಶ್ ಶೆಟ್ಟಿಯವರು ಮಾತನಾಡುತ್ತಾ, ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣವನ್ನು ನೀಡಿ. ಪಾಲಕರು ವ್ಯಕ್ತಿತ್ವಕ್ಕಾಗಿ ಮಕ್ಕಳಿಗೆ ಶಿಕ್ಷಣ ನೀಡಿ. ಯಾವುದೇ ಸಂದರ್ಭದಲ್ಲಿ ಕೂಡ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸದಿರಿ. ನಾವು ಮಕ್ಕಳಿಗೆ ಸಮಯ ನೀಡಿದಾಗ ಮುಂದೆ ಅದೇ ಮಕ್ಕಳು ನಮಗೆ ಸಮಯ ನೀಡುತ್ತಾರೆ. ಯಾವುದೇ ಅಪೇಕ್ಷೆಯನ್ನು ಪಡೆಯದೆ ಮಕ್ಕಳನ್ನು ಬೆಳೆಸಿದಾಗ ಸಮಾಜದಲ್ಲಿ ಉನ್ನತ ಶ್ರೇಣಿಯಲ್ಲಿ ಮಕ್ಕಳು ಬೆಳೆಯಬಲ್ಲರು ಎಂದು ನುಡಿದರು.
ವೇದಿಕೆಯಲ್ಲಿ ಕೃಷ್ಣ ಪ್ಯಾಲೇಸ್ ಗ್ರೂಪ್ ಆಫ್ ಹೋಟೆಲ್ ಸಿಎಂಡಿ ಕೃಷ್ಣ ವೈ ಶೆಟ್ಟಿ, ಬಾಂಬೇ ಬಂಟ್ಸ್ ಅಸೋಸಿಯೇಷನ್ ನ ಉಪಾಧ್ಯಕ್ಷ ಅಡ್ವಕೇಟ್ ಡಿ.ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ ವಿಶ್ವನಾಥ್ ಎಸ್.ಶೆಟ್ಟಿ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಕೆ ಸುರೇಂದ್ರ ಶೆಟ್ಟಿ, ಜೊತೆ ಕಾರ್ಯದರ್ಶಿ ನ್ಯಾಯವಾದಿ ಗುಣಕರ್ ಡಿ ಶೆಟ್ಟಿ, ಜೊತೆ ಕೋಶಾಧಿಕಾರಿ ಸಿಎ ದಿವಾಕರ್ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಎಸ್. ಶೆಟ್ಟಿ, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ನಿಶಾನ್ ಶೆಟ್ಟಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸುಮಾರು 800 ಕ್ಕೂ ಮಿಕ್ಕಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಯಿತು. ಪ್ರಾರಂಭದಲ್ಲಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಕೆ ಸುರೇಂದ್ರ ಶೆಟ್ಟಿ ಅವರು ಸ್ವಾಗತಿಸಿದರು. ಅತಿಥಿಗಳನ್ನು ಅಡ್ವಕೇಟ್ ಡಿ ಕೆ ಶೆಟ್ಟಿ, ಅಡ್ವಕೇಟ್ ಗುಣಕರ ಡಿ ಶೆಟ್ಟಿ, ತೇಜಾಕ್ಷಿ ಎಸ್. ಶೆಟ್ಟಿ, ಪತ್ರ ಪುಷ್ಪಾ ಪತ್ರಿಕೆಯ ಕಾರ್ಯಾಧ್ಯಕ್ಷ ಸುನಿಲ್ ಶೆಟ್ಟಿ, ಸಿಎ ವಿಶ್ವನಾಥ್ ಶೆಟ್ಟಿ, ಸಿಎ ದಿವಾಕರ್ ಶೆಟ್ಟಿ, ಅಡ್ವೋಕೇಟ್ ಡಿ ಕೆ ಶೆಟ್ಟಿ ಪರಿಚಯಿಸಿದರು. ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ ಧನ್ಯವಾದ ನೀಡಿದರು. ಕಾರ್ಯಕ್ರಮವನ್ನು ಪತ್ರಕರ್ತ ದಯಾಸಾಗರ್ ಚೌಟ ನಿರೂಪಿಸಿದರು. ಪ್ರಾರ್ಥನೆಯನ್ನು ಗೀತಾ ದಿವಾಕರ ಶೆಟ್ಟಿ ಮಾಡಿದರು. ಮಧ್ಯಾಹ್ನ ನಂತರ ಬಾಂಬೇ ಬಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನಿರ್ದೇಶನದಲ್ಲಿ ಶ್ರೀದೇವಿ ಲಲಿತೋಪಖ್ಯಾನ ಯಕ್ಷಗಾನ ಪ್ರದರ್ಶನ ನಡೆಯಿತು.