ಯುವ ಬಂಟರ ಸಂಘ (ರಿ) ಕಂಬಳಕಟ್ಟ ಕೊಡವೂರು ಆಯೋಜಿಸಿದ್ದ “ಆಟಿ ಒಂಜಿ ನೆಂಪು – ವನಸ್ ತಿನಸ್ ಪಿರಾಕುದ ಗೊಬ್ಬುಲು ಕಾರ್ಯಕ್ರಮವು ಆಗಸ್ಟ್ 11 ರಂದು ರವಿವಾರ ಕಂಬಳಕಟ್ಟ ಕಂಬಳಮನೆ ಹಾಗೂ ತೆಂಕುಮನೆ ವಠಾರದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಇವರು ಗಿಡ ನೆಡುವುದರ ಮುಖೇನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತೀಯ ವಸ್ತುಗಳೆಲ್ಲವೂ ಉಪಯೋಗಕ್ಕೆ ಬಾರದೇ ಇರದು. ಪ್ರಕೃತಿಯಲ್ಲಿ ದೊರೆಯುವ ವಸ್ತುಗಳ ಔಷಧೀಯ ಗುಣಗಳನ್ನು ನಾವು ತಿಳಿಯುವುದೇ ಈ ಆಟಿ ತಿಂಗಳಿನ ಆಹಾರ ಪದ್ಧತಿಯಿಂದ. ಆದರೇ ನಮ್ಮ ಈಗಿನ ಪ್ರಕೃತಿ ಬಗೆಗಿನ ನಿರ್ಲಕ್ಷ್ಯವೇ ಈಗ ನಡೆಯುತ್ತಿರುವ ಹಲವು ಪ್ರಕೃತಿ ವಿಕೋಪಗಳಿಗೆ ಕಾರಣ ಎಂದರು. ಇನ್ನೋರ್ವ ಮುಖ್ಯ ಅತಿಥಿ ಡಾ| ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರ ನಿಟ್ಟೆ ಪರಿಗಣಿತ ವಿಶ್ವ ವಿದ್ಯಾನಿಲಯ ಇದರ ಪ್ರಭಾರ ಮುಖ್ಯಸ್ಥರಾದ ಡಾ| ಸಾಯಿ ಗೀತಾ ಅವರು, ತುಳು ಸಂಸ್ಕೃತಿ ಬಗೆಗಿನ ಅರಿವು ಈಗಿನ ಯುವ ಪೀಳಿಗೆಯಲ್ಲಿ ಮೂಡಬೇಕು ಎಂದರು. ಈ ಸಂದರ್ಭದಲ್ಲಿ ಡಾ| ಸಾಯಿ ಗೀತಾ ಇವರನ್ನು ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಆರ್ಥಿಕ ಸಹಾಯಧನ ವಿತರಿಸಲಾಯಿತು. ಸಂತೋಷ್ ಶೆಟ್ಟಿ ಕಟ್ಟದಮನೆ ಇವರು ನೀಡಿದ ನೋಟ್ ಪುಸ್ತಕಗಳನ್ನು ಭಾಗವಹಿಸಿದ ಒಂದರಿಂದ ಏಳನೇ ತರಗತಿಯ ಎಲ್ಲಾ ಶಾಲಾ ಮಕ್ಕಳಿಗೆ ನೀಡಲಾಯಿತು ಹಾಗೂ ಸದಸ್ಯರಿಗೆ ಉಪಯುಕ್ತ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಸಂಘದ ಹಿತೈಷಿಗಳಾಗಿದ್ದ ಇತ್ತೀಚೆಗೆ ಅಗ್ನಿ ದುರಂತದಲ್ಲಿ ನಮ್ಮಗಲಿದ ರಮಾನಂದ ಶೆಟ್ಟಿ ದಂಪತಿ ಇವರುಗಳ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಲ್ಪೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಮುಖೋಪಾಧ್ಯಾಯಿನಿ ಶ್ರೀಮತಿ ಗೀತಾ ದಿನೇಶ್ ಶೆಟ್ಟಿ ಮಾತಾನಾಡಿ, ಇಂದಿನ ಮಕ್ಕಳು ಈಗಿನ ಈ ಆಟಿ ಆಚರಣೆಗಳನ್ನು ಇತರೆ ಹಬ್ಬಗಳಂತೆ ಇದೂ ಒಂದು ಎಂದು ತಿಳಿದಿದ್ದು, ನಮ್ಮ ಹಿರಿಯರು ಆ ಕಾಲದಲ್ಲಿ ಅನುಭವಿಸಿದ ಕಷ್ಟಗಳು, ನಡೆದು ಬಂದ ಹಾದಿ, ಆಟಿ ತಿಂಗಳ ಮಹತ್ವದ ಬಗ್ಗೆ ನಮ್ಮ ಈಗಿನ ಮಕ್ಕಳಿಗೆ ನಾವು ಅರಿವು ಮೂಡಿಸುವುದು ನಮ್ಮ ಆದ್ಯ ಕರ್ತವ್ಯ. ಹಳೆ ಬೇರು ಹೊಸ ಚಿಗುರು ಇದ್ದರೆ ಮರ ಸೊಗಸು ಎಂಬ ನುಡಿಯಂತೆ ಇಂತಹ ಕಾರ್ಯಕ್ರಮದಲ್ಲಿ ಮಕ್ಕಳನ್ನು ಕರೆತಂದು ಉತ್ತಮ ಮಾಹಿತಿ ನೀಡಬೇಕು ಎಂದು ನುಡಿದರು. ಇನ್ನೋರ್ವ ಅತಿಥಿ ನಿಟ್ಟೂರು ಬಂಟರ ಸಂಘದ ಅಧ್ಯಕ್ಷ ಮಹಾಬಲ ಶೆಟ್ಟಿ ಇವರು ಮಾತಾನಾಡಿ, ಸಂಘಟನೆಗಳ ಒಗ್ಗೂಡುವಿಕೆಗೆ ಇಂತಹ ಕಾರ್ಯಕ್ರಮಗಳು ಪೂರಕ ಎಂದು ನುಡಿದರು.
ಚೆನ್ನಮಣೆ, ಪೊಕ್ಕು, ಸೊಪ್ಪಾಟ, ತೆಂಗಿನಕಾಯಿ ಸಿಪ್ಪೆ ತೆಗೆಯುವುದು, ಮಡಲು ಹೆಣೆಯುವುದು, ಹಿಡಿಸೂಡಿ ಮಾಡುವುದು, ಲಗೋರಿ, ಮಡಕೆ ಒಡೆಯುವುದು, ಹಗ್ಗಜಗ್ಗಾಟ, ಕೆಸರುಗದ್ದೆ ಓಟ ಮೊದಲಾದ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಮಕ್ಕಳು ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ವಿಜೇತರಿಗೆ ಹಾಗೂ ಆಟಿ ಖಾದ್ಯಗಳನ್ನು ಸಿದ್ದಪಡಿಸಿದ ಬಂಟ ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಂಟ ಮಹಿಳೆಯರು ಸಿದ್ದಪಡಿಸಿದ 35ಕ್ಕೂ ಹೆಚ್ಚು ಆಟಿ ಖಾದ್ಯಗಳನ್ನು ಸುಮಾರು 450 ಕ್ಕೂ ಮಿಕ್ಕಿ ಸಮಾಜ ಭಾಂದವರಿಗೆ ಉಣ ಬಡಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರುಗಳಾದ ಸಂತೋಷ್ ಶೆಟ್ಟಿ ಪಂಚರತ್ನ, ಸುರೇಶ್ ಶೆಟ್ಟಿ ಕಂಬಳಕಟ್ಟ, ಸ್ಮಿತಾ ವಿದ್ಯಾಧರ ಶೆಟ್ಟಿ ಗರ್ಡೆ, ಹಿರಿಯರಾದ ಜಗನ್ನಾಥ ಶೆಟ್ಟಿ ದೊಡ್ಡಮನೆ, ರಾಜು ಶೆಟ್ಟಿ ಜನ್ನಿಬೆಟ್ಟು, ಬನ್ನಂಜೆ ವಿವೇಕಾನಂದ ಯೋಗ ಕೇಂದ್ರ ಇದರ ಯೋಗ ಶಿಕ್ಷಕ ರಾಜೇಶ್ ಶೆಟ್ಟಿ ಪಂದುಬೆಟ್ಟು, ತೋನ್ಸೆ ವಲಯ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ ತೋನ್ಸೆ, ಮೋಹನ್ ಶೆಟ್ಟಿ ಮೂಡ ನಿಡಂಬೂರು, ಉಪ್ಪೂರು ಬಂಟರ ಸಂಘದ ಮಹಿಳಾ ಸದಸ್ಯರು, ಹಾವಂಜೆ ಬಂಟರ ಸಂಘದ ಸದಸ್ಯರು, ರಮೇಶ್ ಶೆಟ್ಟಿ ಜಾರ್ಕಳ, ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ, ಖಜಾಂಚಿ ರಮೇಶ್ ಶೆಟ್ಟಿ ಮೂಡುಬೆಟ್ಟು, ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಸುಮಿತ್ರಾ ಶೆಟ್ಟಿ ಜನ್ನಿಬೆಟ್ಟು ಪ್ರಾರ್ಥನೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ವಂದಿಸಿದರು. ಅಮೃತ್ ಶೆಟ್ಟಿ ಕಂಬಳಕಟ್ಟ ಕಾರ್ಯಕ್ರಮ ನಿರೂಪಿಸಿದರು.