ವಿದ್ಯಾಗಿರಿ: ನಾಯಕನೆಂದರೆ ಜವಾಬ್ದಾರಿ, ಅಹಂ ತೊರೆದು ವಿಧೇಯತೆಯಿಂದ ಕಾರ್ಯ ನಿರ್ವಹಿಸುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಇಲ್ಲಿನ ಮುಂಡ್ರುದೆಗುತ್ತು ಕೆ ಅಮರನಾಥ ಶೆಟ್ಟಿ ಸ್ಮಾರಕ ಸಭಾಂಗಣ (ಕೃಷಿ ಸಿರಿ ವೇದಿಕೆ) ದಲ್ಲಿ ಶನಿವಾರ ನಡೆದ ಪುತ್ತಿಗೆಯ ವಿವೇಕಾನಂದ ನಗರ ಆಳ್ವಾಸ್ ಕೇಂದ್ರೀಯ ಶಾಲೆಯ ‘ಸ್ವಾಗತ ದಿನ ಮತ್ತು ಇನ್ವೆಸ್ಟಿಚರ್ ಕಾರ್ಯಕ್ರಮ’ ದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬನಲ್ಲೂ ತಾನು ನಾಯಕನಾಗಬೇಕೆಂಬ ಹಂಬಲ ಇರಬೇಕು. ನಾಯಕನಾಗಲು ನಾನು ಅರ್ಹನಲ್ಲ ಎಂಬ ಹಿಂಜರಿಕೆ ಇರಬಾರದು. ಪ್ರತಿ ವಿದ್ಯಾರ್ಥಿಗಳು ಇಲ್ಲಿ ನಾಯಕರೇ. ನಾಯಕನಾದವನು ಅಹಂ ತೊರೆದು ತನಗಿರುವ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹಿತವಚನ ಹೇಳಿದರು.
ಶಾಲೆಯು ನಮ್ಮ ಪ್ರಗತಿಗೆ ಮಹತ್ವದ ಸಮಯವನ್ನು ಒದಗಿಸುತ್ತದೆ. ಸರಿ ಹಾಗೂ ತಪ್ಪು ಈ ಎರಡೂ ವಿಷಯಗಳಲ್ಲೂ ವಿದ್ಯೆಯನ್ನು ಪಡೆಯುತ್ತೇವೆ. ಆದರೆ ತಪ್ಪೆಂದು ತಿಳಿದ ತಪ್ಪು ದಾರಿಗೆ ಸಾಗುವುದು ಸೂಕ್ತವಲ್ಲ ಎಂದರು. ಹಲವಾರು ಕಾರ್ಯಕ್ರಮಗಳು ವಿಭಿನ್ನ ವಿಚಾರಗಳನ್ನು ತಿಳಿಸುತ್ತದೆ. ಈ ಮೂಲಕ ಕಣ್ಣ ಮುಂದೆ ನಡೆಯುವ ಹಲವಾರು ವಿಚಾರಗಳನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿರಬೇಕು. ಈ ಶೈಕ್ಷಣಿಕ ಅವಧಿಯಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಎಂದರು. ಆಳ್ವಾಸ್ ಕೇಂದ್ರೀಯ ಶಾಲೆಯ ಪ್ರಾಂಶುಪಾಲ ಮೊಹಮ್ಮದ್ ಶಫಿ ಶೇಖ್ ಮಾತನಾಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಏಳಿಗೆಗೆ ಕಾರಣವಾಗುತ್ತದೆ.
ಈ ಕಾರ್ಯಕ್ರಮವು ಶೈಕ್ಷಣಿಕ ವರ್ಷವನ್ನು ಉತ್ತಮಗೊಳಿಸುವ ಒಂದು ಪ್ರಯತ್ನ. ಪ್ರತಿ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕಲಿಕಾ ಸಮಯದಲ್ಲಿ ಶಿಕ್ಷಕರೊಂದಿಗೆ ಜೊತೆಯಾಗಿ, ಗಂಭೀರವಾಗಿ ಪರೀಕ್ಷೆಗಳನ್ನು ಎದುರಿಸಿ ಎಂದರು. ಆಳ್ವಾಸ್ ಕೇಂದ್ರೀಯ ಶಾಲೆಯ ವಿದ್ಯಾರ್ಥಿಗಳಿಗೆ ನಡೆಸಿದ ಸಂಸತ್ತು ಚುನಾವಣೆಯಲ್ಲಿ ಆಯ್ಕೆಯಾದ 17 ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಾಲೆಯ ಆಡಳಿತಾಧಿಕಾರಿ ವಿ. ಪ್ರೀತಂ ಕುಂದರ್, ಆಳ್ವಾಸ್ ವಸತಿ ನಿಲಯದ ಆಡಳಿತಾಧಿಕಾರಿ ಜಗನ್ನಾಥ್, ಜಾನೆಟ್ ಪಾಯಸ್, ಉಪ ಪ್ರಾಂಶುಪಾಲ ಬಿನು ಮ್ಯಾಥ್ಯು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಆಳ್ವಾಸ್ ಶಾಲೆಯ ಇಂಗ್ಲೀಷ್ ಶಿಕ್ಷಕಿ ಶುಭ ಆಚಾರ್ಯ ನಿರೂಪಿಸಿ, ಸಹಾಯಕ ಶಿಕ್ಷಕಿ ರೊನಿಟಾ ರೋಡ್ರಿಗಸ್ ವಂದಿಸಿದರು.