ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮತ್ತು ನವೀನ್ ಶೆಟ್ಟಿ ಇನ್ನಾ ಬಾಳಿಕೆಯವರ ಮುಂದಾಳತ್ವದಲ್ಲಿ ಕಾರ್ಯ ರೂಪದಲ್ಲಿರುವ ತ್ರಿರಂಗ ಸಂಗಮ ಮುಂಬಯಿಯ ಆಶ್ರಯದಲ್ಲಿ ಇದೇ ಜೂನ್ 23 ರ ಆದಿತ್ಯವಾರದಂದು ಬೆಳಿಗ್ಗೆ ‘ಧರ್ಮದೈವ’ ತುಳು ಚಿತ್ರದ ಪ್ರೀಮಿಯರ್ ಶೋ ಪ್ರದರ್ಶನಗೊಳ್ಳಲಿದೆ. ಯುವ ನಿರ್ಮಾಪಕ ಬಿಳಿಯೂರು ರಾಕೇಶ್ ಭೋಜರಾಜ್ ಶೆಟ್ಟಿ ಬಹಳಷ್ಟು ಶ್ರದ್ಧೆ- ಭಕ್ತಿಯಿಂದ ‘ಧರ್ಮದೈವ’ ಎಂಬ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಾಗೆಯೇ ಅವರ ಆಪ್ತಮಿತ್ರ ಆದರ್ಶ್ ಫಿಲಂ ಇನ್ಸ್ಟಿಟ್ಯೂಟ್ ನ ಪದವೀಧರ ನಿತಿನ್ ರೈ ಕುಕ್ಕುವಳ್ಳಿ ತನ್ನದೇ ಕಥೆಯಿಂದ ಕೂಡಿದ ಈ ಧರ್ಮದೈವ ಚಿತ್ರದ ಪೂರ್ಣ ನಿರ್ದೇಶಕರಾಗಿ ಚಿತ್ರಕ್ಕೆ ಜೀವ ಕಲೆಯನ್ನು ತುಂಬಿದ್ದಾರೆ. ಚಿತ್ರ ಕಥೆ, ಸಂಭಾಷಣೆಯನ್ನು ಹಮೀದ್ ಪುತ್ತೂರು ಕೂರ್ನಡ್ಕ ಅಚ್ಚ ತುಳು ಭಾಷೆಗೆ ರೂಪಾಂತರಿಸಿದ್ದಾರೆ. ಅರುಣ್ ರೈ ಕೆದಂಬಾಡಿ ಉತ್ತಮ ಛಾಯಾಗ್ರಹಣದ ಮೂಲಕ ‘ಧರ್ಮದೈವ’ ದ ಮಹಿಮೆ ಪ್ರೇಕ್ಷಕರನ್ನು ಆಕರ್ಷಿಸುವ ರೂಪದಲ್ಲಿ ತನ್ನ ಪ್ರತಿಭೆ ಮತ್ತು ಕೈ ಚಳಕದಿಂದ ಚೆನ್ನಾಗಿ ಮೂಡಿ ಬರುವಂತೆ ಮಾಡಿದ್ದಾರೆ.
ಚಿತ್ರದಲ್ಲಿ ದೈವದ ಮಹಿಮೆ, ಕಾರಣಿಕವನ್ನು ಮತ್ತು ಭಯ ಭಕ್ತಿ, ನಂಬಿಕೆಯನ್ನು ಮಾತ್ರ ಸಾದರಪಡಿಸುವ ಪ್ರಯತ್ನವನ್ನು ಮಾಡಿರುವ ಈ ‘ಧರ್ಮದೈವ’ ಚಿತ್ರದಲ್ಲಿ ತುಳು ವಿದ್ವಾಂಸ ಕೆ.ಕೆ ಪೇಜಾವರ ರಚಿಸಿರುವ ಪದ್ಯಕ್ಕೆ ಯಕ್ಷಗಾನ ಭಾಗವತ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಕಂಠ ಸಿರಿಯನ್ನು ನೀಡಿದ್ದಾರೆ. ಅವರ ಸುಮಧುರ ಕಂಠ ಸಿರಿಯಲ್ಲಿ ಮೂಡಿ ಬಂದಿರುವ “ಬಂಜಿಡ್ ಜನನೊಗೆ… ಬೆರಿಟ್ ಮರಣೊಗೆ..” ಗೀತೆ ಈಗಾಗಲೇ ಬಹಳಷ್ಟು ಜನಪ್ರಿಯತೆಯನ್ನು ಪಡೆದಿರುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ಹಾಗೆಯೇ ಸಮನ್ವಿ ಆರ್. ರೈ ನುಳಿಯಾಲು ಹಾಡಿರುವ ಗೀತೆಯೂ ಬಹು ಮೆಚ್ಚುಗೆಗೆ ಪಾತ್ರವಾಗಿದೆ. ಪುತ್ತೂರು ಹಾಗೂ ಕರಾವಳಿ ಪರಿಸರದ ಹೊಸ ಮುಖ ಕಲಾವಿದರೇ ಅಭಿನಯಿಸಿರುವುದು ಈ ಚಿತ್ರದ ವಿಶೇಷತೆಯಾಗಿದ್ದರೂ ಕೂಡ ಚಿತ್ರದಲ್ಲಿ ಕಲಾವಿದ ರಮೇಶ್ ರೈ ಕುಕ್ಕುವಳ್ಳಿ, ಚೇತನ್ ರೈ ಮಾಣಿ, ಕಾಂತಾರ ಸಿನೆಮಾ ಖ್ಯಾತಿಯ ದೀಪಕ್ ರೈ ಪಾಣಾಜೆ, ದಯಾನಂದ ರೈ ಬೆಟ್ಟಂಪಾಡಿ, ರವಿ, ಭರತ್ ಶೆಟ್ಟಿ, ರಾಜೇಶ್ ಕೌಶಿಕ್ ಕುಂಜಾಡಿ, ಕಥಾ ನಾಯಕಿಯ ಪಾತ್ರದಲ್ಲಿ ಕೊಡಗಿನ ಭರವಸೆಯ ಯುವ ನಟಿ ಗ್ರೇಷಿಯಲ್ ಕಲಿಯಂಡ, ಬಾಲನಟಿ ದಯಾನಂದ ರೈ ಬೆಟ್ಟಂಪಾಡಿಯವರ ಪುತ್ರಿ ದೀಕ್ಷಾ ರೈ ಪುತ್ತೂರು, ಚಲನಚಿತ್ರ ನಟಿ ರೂಪಾಶ್ರೀ ವರ್ಕಾಡಿ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸುವುದರ ಮೂಲಕ ಈ ಚಿತ್ರದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದರೆ ತಪ್ಪಾಗದು.
ಈ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ಕಲಾ ರಸಿಕರು ಬಂದು ತುಳು ಭಾಷೆಗೆ, ಕಲಾವಿದರಿಗೆ ಪ್ರೋತ್ಸಾಹಿಸುವಂತೆ ತ್ರಿರಂಗ ಸಂಗಮ ಮುಂಬಯಿಯ ವತಿಯಿಂದ ಸಂಚಾಲಕರಾದ ಕರ್ನೂರು ಮೋಹನ್ ರೈ (9867304757) ಅಶೋಕ್ ಪಕ್ಕಳ (9323822352) ನವೀನ್ ಶೆಟ್ಟಿ ಇನ್ನಾ ಬಾಳಿಕೆ (9820811114) ವಿನಂತಿಸಿಕೊಂಡಿದ್ದಾರೆ.