ಹಿಂದೊಂದು ಕಾಲವಿತ್ತು- ಹಿರಿಯರು ಬದುಕಿ ಬಾಳಿದ ಮನೆಯಲ್ಲಿ, ಅವರ ಪಡಿನೆರಳಾಗಿ ಇದ್ದು ದುಡಿಯುತ್ತಾ, ಮದುವೆ ಆಗಿ ಮಕ್ಕಳಾದ ಮೇಲೆ ಅವರ ಬೇಕು ಬೇಡಗಳನ್ನು ಪೂರೈಸಿ, ಅವರ ಜೀವನ ಒಂದು ಹಂತಕ್ಕೆ ಬಂದ ಮೇಲೆ ತಮ್ಮದೇ ಸ್ವಂತ ಮನೆಯಲ್ಲಿ ಕೊನೆಯ ದಿನಗಳನ್ನು ಕಳೆದ ಅದೆಷ್ಟೋ ಜೀವಗಳಿಗೆ ಒಂದು ರೀತಿಯ ಸಂತೃಪ್ತಿಯಿತ್ತು. ಆದರೆ ಈಗ ಕಾಲ ಬದಲಾಗುವುದರೊಂದಿಗೆ ಪರಿಸ್ಥಿತಿಯೂ ಬದಲಾಗಿದೆ; ಜೊತೆಗೆ ಪ್ರಾಯ ಮಾಗುತ್ತಾ ಬರುತ್ತಿದ್ದಂತೆ ಹಿರಿಯರ ನಿರೀಕ್ಷೆಗಳು ಕೂಡಾ. ‘ಇನ್ನು ನಾವು ಮಕ್ಕಳು- ಮೊಮ್ಮಕ್ಕಳೊಂದಿಗೆ ಆರಾಮಾಗಿ ಇರಬಹುದು, ನಮ್ಮ ಜವಾಬ್ದಾರಿ ಮುಗಿಯಿತು. ಮಕ್ಕಳನ್ನು ಬೆಳೆಸಿ, ಓದಿಸಿ, ಅವರ ಕಾಲ ಮೇಲೆ ನಿಲ್ಲುವಂತೆ ಮಾಡಿದ್ದಾಯ್ತು. ಇನ್ನು ಯಾವ ಜವಾಬ್ದಾರಿಯೂ ಇಲ್ಲ. ಕಾಲನ ಕರೆ ಬರುವವರೆಗೆ ದಿನ ಸವೆಸಿದರಾಯಿತು’ ಅಂತ. ಹೌದಾ..!?
ಆದರೆ ಮನಸ್ಸಿನ ಬಯಕೆಯಂತೆ ಎಲ್ಲರ ಬದುಕು ನಡೆಯದು. ಕೆಲ ಹಿರಿಯರಿಗೆ ಹೊಸ ಜವಾಬ್ದಾರಿಗಳು ಹೆಗಲಿಗೇರಿವೆ. ‘ಮಕ್ಕಳಿಗೆ ಮದುವೆ ಮಾಡಿಕೊಟ್ಟ ನಂತರ ಮಕ್ಕಳಿಗಾಗಿ ಪಾಲಿಸಬೇಕಾದ ತಮ್ಮ ಕರ್ತವ್ಯಗಳು ಮುಗಿದವು; ಇನ್ನು ಬದುಕು ನಿರಾಳ’ ಎಂದು ನಿಟ್ಟುಸಿರು ಬಿಡುವಂತಿಲ್ಲ. ಮದುವೆಯಾಗಿ ಮಕ್ಕಳಾದ ಹೊಸ ಹೆತ್ತವರಿಗೆ ತಮ್ಮ ಹೆತ್ತವರು ನೆನಪಿಗೆ ಬರುತ್ತಾರೆ. ತಾವು ಕೆಲಸ ಹೋಗುವಾಗ ಮನೆಯಲ್ಲಿರಲು, ತಮ್ಮ ಮಕ್ಕಳನ್ನು ಅರ್ತಿಯಿಂದ ನೋಡಿಕೊಳ್ಳಲು ಅವರ ಅವಶ್ಯಕತೆ ಕಾಣುತ್ತದೆ. ಮೊಮ್ಮಕ್ಕಳ ಮಮಕಾರವೋ, ಮಕ್ಕಳ ಅಂಗಲಾಚುವಿಕೆಯನ್ನು ತಿರಸ್ಕಾರಿಸಲಾರದ ಅನಿವಾರ್ಯತೆಯೋ ಅಥವಾ ತಮ್ಮದೇ ಯಾವುದೋ ಅಗತ್ಯವೋ.. ಹಿರಿಯರಿಗೆ ಮಕ್ಕಳ ಮನೆಯಲ್ಲಿ ಬಂದು ಮಕ್ಕಳೊಂದಿಗಿರುವ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಪುಟ್ಟ ಮಕ್ಕಳ ಲಾಲನೆ ಪಾಲನೆ ಹೆಚ್ಚಿನ ಅಜ್ಜ ಅಜ್ಜಿಯರಿಗೆ ಮುದ ನೀಡುತ್ತಾದರೂ ಅದಕ್ಕಿಂತ ಹೆಚ್ಚಿನ ಕೆಲಸಗಳನ್ನು ನಿಭಾಯಿಸಲೇಬೇಕಾದ ಸಂದರ್ಭಗಳು ಬಂದರೆ ಅವರಿಗೆ ಅಂತಹವು ಕೆಲವೊಮ್ಮೆ ಉಸಿರುಗಟ್ಟಿಸಲೂ ಬಹುದು. ತಮ್ಮಿಚ್ಛೆಯಂತೆ ಬದುಕಲಾಗದ, ಬೇಕೆನಿಸಿದ್ದನ್ನು ಮಾಡಲಾಗದ, ಮಕ್ಕಳ ನೆರಳಿನಲ್ಲಿ ಇರುವಾಗ ಅವರ ಅಣತಿಯನ್ನು ಮೀರಲಾಗದ ಪರಿಸ್ಥಿತಿ ಎಷ್ಟೋ ಹಿರಿಯ ಜೀವಗಳದ್ದು. ಕೆಲವು ಮನೆಗಳಲ್ಲಿ ಮಗಳು-ಅಳಿಯ ಅಥವಾ ಮಗ-ಸೊಸೆ ಕೆಲಸಕ್ಕೆ ಹೋದರೆ ಮನೆಯಲ್ಲಿ ಮಗುವಿನ ಸಂಪೂರ್ಣ ಜವಾಬ್ದಾರಿ ಇವರ ಮೇಲೇರುತ್ತದೆ. ಬೆಳಗ್ಗೆ ಬೇಗನೆ ಎದ್ದು ಮನೆಯ ಎಲ್ಲರಿಗಾಗಿ ತಿಂಡಿ ತಯಾರಿಸಬೇಕು. ಬುತ್ತಿಯನ್ನು ಕೊಂಡು ಹೋಗುವವರಿಗೆ ಊಟದ ಬುತ್ತಿ ರೆಡಿ ಮಾಡಬೇಕು. ಅವರು ಕೆಲಸಕ್ಕೆ ಹೋದ ಮೇಲೆ ಮಗುವನ್ನೆಬ್ಬಿಸಿ ಅದರ ಬೇಕು ಬೇಡಗಳನ್ನು ನೋಡಿಕೊಳ್ಳಬೇಕು. ತಿಂಡಿ ತಿನ್ನಿಸಿ, ಸ್ನಾನ ಮಾಡಿಸಿ ಸ್ಕೂಲ್ ಗೆ ಬಿಟ್ಟುಬರುವ, ಕರೆದುಕೊಂಡು ಬರುವ ಕೆಲಸ- ಎಲ್ಲವೂ ಇವರ ಪಾಲಿಗೆ ಬೀಳಬಹುದು. ಮನೆಯ ಇತರರ ಟೈಮ್ ಟೇಬಲ್ ಗೆ ಹೊಂದುವಂತೆ ಇವರ ದಿನಚರಿಯ ಬದಲಾವಣೆ ಅನಿವಾರ್ಯವಾಗಬಹುದು. ಇನ್ನು ವಾರಾಂತ್ಯಗಳಲ್ಲೂ ಅವರು ಹೊರಗೆ ಸುತ್ತಾಟಕ್ಕೆ, ಮಾಲ್ ಗೆ, ಶಾಪಿಂಗ್ ಗೆ ಹೋದರೂ ಮಗುವನ್ನು ಮತ್ತು ಮನೆಯನ್ನು ನೋಡಿಕೊಳ್ಳುವ ಕೆಲಸ ಇರುತ್ತದೆ. ಮಗುವನ್ನು ಕರೆದುಕೊಂಡು ಹೋದರೆ ಇವರಿಗೆ ಸ್ವಲ್ಪ ಫ್ರೀ ಟೈಮ್. ಮನೆಯಲ್ಲೇ ಇದ್ದು, ಮನೆಯನ್ನು, ಮನೆಯವರನ್ನೂ ನೋಡಿಕೊಳ್ಳುವವರಿಗೆ ಎಷ್ಟು ಕೆಲಸವಿರುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿರುವಂತಹುದೇ.
ಕೆಲವು ಕಡೆ ಗಂಡ- ಹೆಂಡತಿ ಇಬ್ಬರೂ ಮಕ್ಕಳ ಮನೆಯಲ್ಲಿದ್ದರೆ ಕೆಲಸ ಸ್ವಲ್ಪ ಸುಲಭವಾಗುತ್ತದೆ. ಇಬ್ಬರೂ ಆ ಕೆಲಸಗಳನ್ನು ಹಂಚಿಕೊಳ್ಳಬಹುದು. ಮಗುವನ್ನು ಸ್ಕೂಲ್ ಗೆ ಬಿಟ್ಟು, ಕರೆದುಕೊಂಡು ಬರುವ, ಹಣ್ಣು-ತರಕಾರಿ ಕೊಳ್ಳುವ ಕೆಲಸ ಗಂಡ ನಿಭಾಯಿಸಿದರೆ, ಹೆಂಡತಿ ಮನೆಯೊಳಗೆ ಕೆಲಸಗಳನ್ನು ನಿಭಾಯಿಸಬಹುದು. ಕಷ್ಟ ಸುಖ ಮಾತಾಡಿಕೊಳ್ಳಲು ಜತೆಯೂ ಇರುತ್ತದೆ.
ಮಗ-ಸೊಸೆ ಅಥವಾ ಮಗಳು-ಅಳಿಯ ಸಹಾಯ ಮಾಡಿದರೆ ಸ್ವಲ್ಪ ಮಟ್ಟಿಗೆ ನಿರಾಳ. ನಗುನಗುತ್ತಾ ಮಾತನಾಡಿ ತಮ್ಮೊಂದಿಗೆ ಸುತ್ತಾಡಲು ಕರೆದುಕೊಂಡು ಹೋಗಿ, ಅವರ ಆರೋಗ್ಯ, ಇಷ್ಟಾನಿಷ್ಟಗಳನ್ನು ವಿಚಾರಿಸಿದರೆ ಹಿರಿಯ ಜೀವಗಳಿಗೆ ನಿರುಮ್ಮಳ. ‘ಮಕ್ಕಳಿಗೆ ತಾವು ಭಾರವಲ್ಲ, ತಮಗೆ ಬೇಕಾದ ಹಾಗೆ ಇರಬಹುದು’ ಅನ್ನುವ ಭಾವನೆಯಲ್ಲಿ ಮಕ್ಕಳೊಂದಿಗೆ ಇದ್ದರೆ ಅದು ಅವರಿಗೆ ಉಸಿರುಗಟ್ಟಿಸುವ ಮನೆಯೆನಿಸುವುದಿಲ್ಲ.ಕೆಲವು ಮನೆಗಳಲ್ಲಿ ಅಪ್ಪ-ಅಮ್ಮ ಮೊಮ್ಮಕ್ಕಳನ್ನು ನೋಡಿಕೊಂಡರೂ ಮಕ್ಕಳು ತಪ್ಪು ಮಾಡಿದಾಗ ಅವರು ಗದರಿಸುವಂತಿಲ್ಲ, ದಂಡಿಸುವಂತಿಲ್ಲ. ತಮ್ಮದೇ ಮನೆಯಲ್ಲಿ ಇರುವ ಸ್ವಾತಂತ್ರ್ಯ ಮಕ್ಕಳ ಮನೆಯಲ್ಲಿ ಮರೀಚಿಕೆಯಾಗುವಂತಹ ಕಳವಳಕಾರಿ ಪರಿಸ್ಥಿತಿ ಕೆಲಹಿರಿಯರದ್ದು. ಮಗನ ಮನೆಯಲ್ಲಿರುವ ಹಿರಿಯರಿಗೆ ಒಂದಷ್ಟು ದಿನ ಸೊಸೆಯ ಹೆತ್ತವರು ಬಂದು ನೆರವಾಗಲಿ, ತಾವೊಂದಷ್ಟು ದಿನ ಆರಾಮಾಗಿ ತಮ್ಮ ಮನೆಯಲ್ಲಿರಬಹುದು ಎಂಬ ಹಂಬಲವಿದ್ದರೆ, ಅಳಿಯನ ಅಪ್ಪ ಅಮ್ಮನಿಗೂ ಕಾಳಜಿ ಬೇಡವೇ ಎಂದು ಪ್ರಶ್ನಿಸುವರು ಮಗಳ ಹೆತ್ತವರು.
ಆದರೆ ಎಲ್ಲಾ ಕಡೆಯೂ ಎಲ್ಲರ ಪರಿಸ್ಥಿತಿಯೂ ಹೀಗೇ ಇರುತ್ತದೆ ಎನ್ನುವಂತಿಲ್ಲ. ಕೆಲವರು ಇಷ್ಟಪಟ್ಟು ಎಲ್ಲವನ್ನೂ ಮಾಡುವವರಿದ್ದಾರೆ. ಎಲ್ಲರ ಮನೆ ಪರಿಸ್ಥಿತಿ ಒಂದೇ ರೀತಿಯಾಗಿ ಇರುವುದಿಲ್ಲ ಅಲ್ಲವೇ? ಮಕ್ಕಳು ತಮ್ಮೊಂದಿಗೆ ತಿರುಗಾಡಲು ಹಿರಿಯರನ್ನೂ ಕೆಲವೊಮ್ಮೆ ಕರೆದುಕೊಂಡು ಹೋಗುವುದಿದೆ. ಕೆಲಸದಿಂದ ಮನೆಗೆ ಬಂದ ಮೇಲೆ ಅಪ್ಪ ಅಮ್ಮನಿಗೆ ವಿರಾಮ ಕೊಡುವವರಿದ್ದಾರೆ. ಇನ್ನು ಕೆಲವರು ಹೆತ್ತವರ ಸಮಪ್ರಾಯದವರ ಜೊತೆಯಲ್ಲಿಯೇ ಯಾತ್ರೆ, ಟೂರ್ ಗಳಿಗೂ ಕಳಿಸಿ ಕೊಡುವವರಿದ್ದಾರೆ. ಖುಷಿ ಖುಷಿಯಾಗಿ ತಮ್ಮವರೊಂದಿಗೆ ಕಾಲ ಕಳೆಯುವವರು ನಿಜವಾಗಿಯೂ ಭಾಗ್ಯವಂತರು.
ಸವಿತಾ ಅರುಣ್ ಶೆಟ್ಟಿ.