ದರ್ಶನ್ ಜನ್ಮತ ದುಷ್ಟ ಖಂಡಿತ ಅಲ್ಲ! ಆತನನ್ನ ಬಲ್ಲವರನ್ನ ಮಾತಾಡಿಸಿದ್ದೇನೆ. ಯಶಸ್ಸು ಮತ್ತು ದುಡ್ಡು ಬರತೊಡಗಿದಾಗ ಅದರ ಜೊತೆಗೇ ಇನ್ನೊಂದೂ ಬಂದೇ ಬಿಡೋತ್ತೆ! ಅದರ ಹೆಸರು “ದುರ್ಮದ”. ಅದು ಬಂದು ಹೆಗಲೇರಿದಾಗ ಭುಜ ಕೊಡವಿಕೊಂಡು ನೀವು ಹೊರಟಿರೋ? ಫೈನ್. ನೀವು ಬಚಾವ್! ಅದನ್ನ ಬಿಟ್ಟು ಆ ದುಷ್ಟ ಮದದ ನೆತ್ತಿ ಸವರಿದರೆ ಅದು ತಲೆ ಏರಿ ಕುಳಿತು ಬಿಡುತ್ತದೆ. ಮನುಷ್ಯನೊಳಗಿನ ಮನುಷ್ಯತ್ವ ನಾಶವಾಗಲು ಅದು ಕಾರಣವಾಗುತ್ತದೆ.
ದರ್ಶನ್ ಯಶಸ್ವಿಯಾಗುತ್ತಿದ್ದ ಹಾಗೇ ಆತನ ಸುತ್ತ ನೆರೆದ ಮಿತ್ರಕೂಟವೇ ಒಂದು ದುಷ್ಟಕೂಟ. ಕುಡಿತ, ಅಮಲು, ಹೆಣ್ಣು ಮತ್ತು ಕ್ರೈಮ್ ವ್ಯಸನಿಗಳನ್ನ ನಾನು ಎಂದಿಗೂ ಒಂದು ಅನುಮಾನದಲ್ಲೇ ನೋಡುತ್ತೇನೆ. ಓರ್ವ ಪರಮ ಕುಡುಕ ಮತ್ತು ಕ್ರೈಮ್ ಥ್ರಿಲ್ ಇರುವವ ಎಷ್ಟೇ ಮುಗ್ಧನಾಗಿದ್ದರೂ ಆತನೊಳಗೆ ರಾಕ್ಷಸ ಆರಾಮಾಗಿ ಬಂದು ಕೂಡುತ್ತಾನೆ. ಆತನ ಒಳ ಮನದ ಬಾಗಿಲಿಗೆ ಚಿಲಕವೇ ಇಲ್ಲ!
ದರ್ಶನ್ ಮಾಡಿದ ತಪ್ಪೇ ಇದು. ಆತ ಹುಟ್ಟಾ ದುಷ್ಟನಲ್ಲ. ದುಷ್ಟರ ಸಹವಾಸಕ್ಕೆ ಬಿದ್ದವ. ದುಷ್ಟ ಸಾಹಸದ ಹುಚ್ಚು ಹಿಡಿಸಿಕೊಂಡವ. ಆತನ ಸುತ್ತ ನೆರೆಯುವ ಹುಡುಗರು ಪ್ರಪಂಚದ ವಾಸ್ತವಿಕತೆ ಅಂದ್ರೆ ಏನು ಅನ್ನೋದೇ ಗೊತ್ತಿರದ ಭ್ರಮಿಷ್ಟರು. ದರ್ಶನ್ ತಾನು ಬದುಕುತ್ತಿರುವುದೇ ಒಂದು ಸಿನೆಮಾ ಎಂದೇ ಬದುಕಿದ! ಕೀರ್ತಿ ಶನಿ ಆತನ ಹೆಗಲೇರುತ್ತಿದ್ದಂತೆ ಆತ ಕುರುಡಾಗಿ ಬಿಟ್ಟ! ಆ ಕುರುಡು ಆತನ ಕೊರಡಾಗಿಸಿತು. ಈಗ ಬದುಕು ಬರಡಾಗಿಸಿತು.
ಮತ್ತೆ ಮತ್ತೆ ಅದನ್ನೇ ಹೇಳಬೇಕಿಲ್ಲ. ಧನ ಮದ, ಜನಮದ,ರಕ್ತಮದ, ಕೀರ್ತಿ ಮದದಲ್ಲಿ ಜಗವ ಮರೆಯುವರಿಗೆ ದರ್ಶನ್ ಒಂದು ಪಾಠ! ತಾನು ಯಾರ ಜೊತೆ ಟ್ಯಾಗ್ ಆಗಿದ್ದೇನೆ ಎನ್ನುವುದನ್ನ ಗೆದ್ದವ ಗಮನಿಸಬೇಕು. ಹೊಗಳು ಭಟರು, ಭಟ್ಟಂಗಿಗಳು ಪ್ರತೀ ಗೆಲುವಿನ ವ್ಯಕ್ತಿಯ ಸುತ್ತಲೂ ನೆರೆಯುತ್ತಾರೆ! ಸೋಲು ಕಾಲು ನೆಕ್ಕಲು ಶುರುವಾದ ತಕ್ಷಣವೇ ಅವರೂ ಕಾಲು ಕೀಳುತ್ತಾರೆ!
ಎಚ್ಚರವಿರಬೇಕಾದವರು ಯಾರು ಹೇಳಿ?
ಈ ಹೊತ್ತಿಗೆ ಪೊಲೀಸ್ ಸ್ಟೇಷನ್ನೀನ ಗೋಲ್ಡನ್ ಬೆಳಕಿನಲ್ಲಿ ದರ್ಶನ್ ಎನ್ನುವ ಆರಡಿ ಎತ್ತರದ ನಟನ ಮಸ್ತಿಷ್ಕಕ್ಕೆ ನಿದ್ದೆ ಹಾದಿರಬಹುದೇ? ನೊ ಛಾನ್ಸ್!!
ವಸಂತ್ ಗಿಳಿಯಾರ್