ಮೂಡುಬಿದಿರೆ: ಬಜೆಟ್ ನಾವಿನ್ಯತೆಯನ್ನು ಸಾಧಿಸಿ, ತೆರಿಗೆಯನ್ನು ಸರಳಗೊಳಿಸಿ, ಜೀವನದ ಗುಣಮಟ್ಟವನ್ನು ಹಾಗೂ ಸ್ವಚ್ಚ ಭಾರತವನ್ನು ನಿರ್ಮಿಸಿ, ಕಾರ್ಪೊರೇಟ್ ತೆರಿಗೆ ಮತ್ತು ಹಣಕಾಸಿನ ಕೊರತೆಯನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ಒಳಗೊಂಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮುಖ್ಯಕಾರ್ಯ ನಿರ್ವಾಣಧಿಕಾರಿ ಡಾ ಅಶೋಕ್ ದಳವಾಯಿ ಹೇಳಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಭಾರತೀಯ ಉದ್ಯಮಗಳ ಒಕ್ಕೂಟ, ಕೆನರಾ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ, ಯಂಗ್ ಇಂಡಿಯನ್ಸ್ , ದಿ ಇಂಡಸ್ ಎಂಟ್ರೆಪ್ರೆನರ್ಸ್ ಸಂಸ್ಥೆಗಳ ಸಹಯೋಗದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಕೇಂದ್ರದ ಒಂದು ದಶಕದ ಬಜೆಟ್ ವಿಶ್ಲೇಷಣೆ ಮತ್ತು ಮೌಲ್ಯಮಾಪನ ಚರ್ಚಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರದ ಬಜೆಟ್ ಒಂದು ಪ್ರಮುಖ ನೀತಿ ನಿರೂಪಣೆಯ ಹೇಳಿಕೆಯಾಗಿದೆ. ಬಜೆಟ್ ಕೃಷಿ, ರಸ್ತೆ ಕಾಮಗಾರಿ, ಸಂಪನ್ಮೂಲಗಳ ಪ್ರಮುಖ ಸವಾಲುಗಳನ್ನು ಒಳಗೊಂಡಿದೆ. ಜೊತೆಗೆ ಕಪ್ಪು ಹಣ, ತೆರಿಗೆಯನ್ನು ಸರಳೀಕರಿಸುವುದು, ಜೀವನದ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಕಾರ್ಪೊರೇಟ್ ತೆರಿಗೆ ಮತ್ತು ಹಣಕಾಸಿನ ಕೊರತೆಯನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ಕೂಡ ಒಳಗೊಂಡಿದೆ ಎಂದರು.
ಅರ್ಥಶಾಸ್ತ್ರಜ್ಞ ಮತ್ತು ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಮಾಜಿ ಸದಸ್ಯ ಡಾ ಜಿ ವಿ ಜೋಶಿ, ಚರ್ಚಾಕೂಟದ ನಿರ್ವಾಹಕರ ಹಿನ್ನಲೆಯಲ್ಲಿ ಮಾತನಾಡಿ, ಉದ್ಯೋಗವನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿರಬೇಕು ಹಾಗೂ ವಿತ್ತೀಯ ಕೊರತೆಯನ್ನು ನೋಡಿಕೊಳ್ಳಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರ ಸಂಕಷ್ಟವನ್ನು ಪರಿಹರಿಸುವತ್ತಾ ಗಮನಹರಿಸಬೇಕು. ಹವಾಮಾನ ಬದಲಾವಣೆಯನ್ನು ಸಹ ಪರಿಗಣಿಸಬೇಕು. ಕೇಂದ್ರ ಮತ್ತು ರಾಜ್ಯದ ನಡುವಿನ ಸಂಬಂಧವನ್ನು ಪರಿಶೀಲಿಸುವ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಮುಖ್ಯ ಕಾರ್ಯ ನಿರ್ವಾಣಧಿಕಾರಿ ಡಾ ಅಶೋಕ್ ದಳವಾಯಿಯವರನ್ನು ಸನ್ಮಾನಿಸಲಾಯಿತು. ಪ್ರಸ್ತಕ ಸಾಲಿನಲ್ಲಿ ಸಿಎ ಫೌಂಡೇಷನ್ ಹಾಗೂ ಸಿಎಸ್ಇಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆಳ್ವಾಸ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಜೆಟ್ ಪೂರ್ವಭಾವಿಯಾಗಿ ನಡೆದ ಅಂತರ್ ಕಾಲೇಜು ಬಜೆಟ್ ಮಾಸ್ಟರ್, ಪೋಸ್ಟರ್ ತಯಾರಿಕೆ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿಯನ್ನು ನೀಡಲಾಯಿತು.
ಅರ್ಥಶಾಸ್ತ್ರ ಪ್ರಾಧ್ಯಾಪಕ ಮತ್ತು ಅಹಮದಾಬಾದ ಮೈಕಾ ಸಂಸ್ಥೆಯ ಪ್ರೊ. ರಸನಂದ ಪಾಂಡ, ಹಣಕಾಸು ಸಲಹೆಗಾರ, ಆರ್ಬಿಐನ ನಿವೃತ್ತ ಡಿಜಿಎಂ ನೋರ್ಬಟ್ ಎಂ ಶೆಣೈ , ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ , ಸೆಂಟ್ರಲ್ ಕೌನ್ಸಿಲ್ ಸದಸ್ಯ ಸಿಎ. ಕೋತಾ ಶ್ರೀನಿವಾಸ , ಸಿಎ ನರಸಿಂಹ ನಾಯಕ್ , ನಿವೃತ್ತ ಐಆರ್ಎಸ್ ಅಧಿಕಾರಿ ಧಮೇರ್ಂದ್ರ ಬಿ ಮೆಹ್ತಾ, ಕೂಟದ ಸದಸ್ಯರಾಗಿ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಸಿಎ ಉಮೇಶ್ ರಾವ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮುಖ್ಯ ಹಣಕಾಸು ಅಧಿಕಾರಿ ಶಾಂತಾರಾಮ್ ಕಾಮತ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಂಬಿಎ ವಿಭಾಗದ ಮುಖ್ಯಸ್ಥೆ ಪ್ರಿಯ ಸೀಕ್ವೆರಾ ಸ್ವಾಗತಿಸಿ, ವಿದ್ಯಾರ್ಥಿ ಪ್ರಣವ್ ಸ್ವರೂಪ ನಿರೂಪಿಸಿದರು.