ವಿದ್ಯಾಗಿರಿ: ‘ಶಿಕ್ಷಣ ಎಲ್ಲರಿಗೂ ದೊರೆಯಲೇಬೇಕಾದ ಮೂಲಭೂತ ಹಕ್ಕು. ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಯ ಬದುಕನ್ನು ನಿರ್ಧರಿಸುತ್ತದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶನಿವಾರ ವಲ್ಕನ್ ಅಕಾಡೆಮಿ ಹಮ್ಮಿಕೊಂಡಿದ್ದ ವೆಬ್ಸೈಟ್ ಹಾಗೂ ಉತ್ಪನ್ನಗಳ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾಥಿಗಳು ಕಲಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ ಕಲಿಕೆ ಪರಿಣಾಮಕಾರಿಯಾಗಿರಲು ಸಾಧ್ಯ. ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಾತ್ವಿಕ್ ಈ ಮೂಲಕ ಪ್ರಯತ್ನಿಸಿದ್ದಾರೆ’ ಎಂದರು. ಸ್ವಯಂಭೂ ಸಂಸ್ಥಾಪಕ ಡಾ.ಸಂಗೀತಾ ಜಿ. ಕಾಮತ್ ಮಾತನಾಡಿ, ‘ವಲ್ಕನ್ ಅಕಾಡೆಮಿ ಪ್ರಯತ್ನವು ವಿದ್ಯಾರ್ಥಿಗಳ ಇಂಗ್ಲಿಷ್ ಕಲಿಕೆಯ ಸಮಸ್ಯೆಗೆ ಪರಿಹಾರವಾಗಲಿದೆ’ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ‘ಇಂಗ್ಲಿಷ್ ಕಲಿಕೆ ಸುಲಲಿತಗೊಳಿಸಲು ಪ್ರಯತ್ನಿಸುವುದು ಅಭಿನಂದನೀಯ’ ಎಂದರು. ವಲ್ಕನ್ ಅಕಾಡೆಮಿ ವ್ಯವಸ್ಥಾಪಕ ನಿರ್ದೇಶಕ ಸಾತ್ವಿಕ್ ಕೆ.ಜೆ, ‘ಜ್ಞಾನವಂತರು ಇದ್ದಾರೆ. ಆದರೆ, ಕೆಲಸದ ಕುರಿತು ಪ್ರೀತಿ ಅವಶ್ಯ. ವೃತ್ತಿಪರ ಹಾಗೂ ವ್ಯಾವಹಾರಿಕ ಇಂಗ್ಲಿಷ್ ಅಭಿವೃದ್ಧಿಗೆ ಇದು ಪೂರಕವಾಗಿದೆ’ ಎಂದರು. ‘ಸಂದರ್ಶನದ ಸಂದರ್ಭದಲ್ಲಿ ಪುಸ್ತಕ ಜ್ಞಾನಕ್ಕಿಂತ ಹೆಚ್ಚು ಅನುಭವದ ಜ್ಞಾನ ಉಪಯೋಗಕ್ಕೆ ಬರುತ್ತದೆ. ಇದಕ್ಕಾಗಿ ನಾವು ಪರೀಕ್ಷಾ ಸರಣಿ ಹಾಗೂ ಕಾರ್ಯಾಗಾರ ನಿರೂಪಿಸುತ್ತಿದ್ದೇವೆ’ ಎಂದರು.
ವಲ್ಕನ್ ನಿರ್ದೇಶಕಿ ಗಾಯತ್ರಿ ಪಿ. ಇದ್ದರು. ವಿದ್ಯಾರ್ಥಿನಿ ವೈಷ್ಣವಿ ಕಾಮತ್ ಸ್ವಾಗತಿಸಿದರು. ಅವಿನಾಶ್ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಸಂಯೋಜಕಿ ನವ್ಯಾ ಉಪಾಧ್ಯಾಯ ವಂದಿಸಿದರು.