ಫೆ. 10 ರಂದು ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಆಶೀರ್ವಚನ ಕಾರ್ಯಕ್ರಮ ನೆರವೇರಿತು. ಎಮ್. ಜಿ. ಎಮ್. ಕಾಲೇಜ್ನ ನಿವೃತ್ತ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಸಾಮಗ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಹತ್ತನೇ ತರಗತಿಯಿಂದ ಬೀಳ್ಕೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ದೀಪವನ್ನು ನೀಡಿ ಹಾರೈಸಿ ಮಾತನಾಡಿ ಅನುಭವಗಳು ನಮ್ಮ ಜೀವನದ ಶ್ರೇಷ್ಠ ಶಿಕ್ಷಕ. ಹೇಡಿಗಳಿಗೆ ಈ ಭೂಮಿಯ ಮೇಲೆ ಬದುಕಲು ಅರ್ಹತೆಗಳಿಲ್ಲ, ಬರುವುದನ್ನೆಲ್ಲಾ ಎದುರಿಸಿ ಧೈರ್ಯವಾಗಿ ಮುನ್ನಡೆಯಬೇಕು. ನಮ್ಮನ್ನು ಹೊಗಳದೆ ಇತರರನ್ನು ತೆಗಳದೆ ಹೊಂದಾಣಿಕೆಯಿಂದ ಜೀವನವನ್ನು ನಡೆಸಬೇಕೆಂದರು.
ಜಿ ಎಮ್ನ ಹಳೆ ವಿದ್ಯಾರ್ಥಿ, ಸೈಬರ್ ಭದ್ರತಾ ಸಲಹೆಗಾರ ಪ್ರಿತ್ವೇಶ್ ಕೆ ಮಾತನಾಡಿ ಇದು ನನಗೆ ಹೆಮ್ಮೆಯ ಕ್ಷಣ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣವೇ ನನ್ನ ಸಾಧನೆಯ ಅಡಿಗಲ್ಲು. ಸೋಲಿನ ಪಾಠದೊಂದಿಗೆ ನಮ್ಮ ಗುರಿಯ ಕಡೆಗೆ ಗಮನ ಹರಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಕಲಿಕೆಯಲ್ಲಿ ಮುಂದಿರುವುದು ಮಾತ್ರವೇ ದೊಡ್ಡ ಸಾಧನೆಯಲ್ಲ, ಜೀವನದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲೂ ಕೂಡ ಮಹತ್ತರ ಯಶಸ್ಸನ್ನು ಪಡೆಯಬಹುದು. ಜಿ ಎಮ್ ಸಂಸ್ಥೆ ಅದಕ್ಕೆ ಪೂರಕವಾದ ಎಲ್ಲಾ ಕೌಶಲ್ಯಗಳನ್ನು, ತರಬೇತಿಯನ್ನು ನೀಡಿದೆ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಬೀಳ್ಕೊಂಡ ಎಲ್ಲಾ ಮಕ್ಕಳ ಭವಿಷ್ಯಕ್ಕೆ ಶುಭಹಾರೈಸಿ ಮಾತನಾಡಿ ನನ್ನ ಸಾಧನೆಗೆ, ಕೆಲಸದ ಮೇಲಿರುವ ಸಮರ್ಪಣಾ ಮನೋಭಾವಕ್ಕೆ ನನ್ನ ಶಿಕ್ಷಕರೇ ಸ್ಫೂರ್ತಿ. ಜಿ ಎಮ್ ಸಂಸ್ಥೆ ನಿಮಗೆಲ್ಲರಿಗೂ ಆತ್ಮಸ್ಥೈರ್ಯ ತುಂಬಿದೆ. ನೀವೆಲ್ಲರೂ ಜೀವನದಲ್ಲಿ ಯಶಸ್ಸನ್ನು ಪಡೆದು ಅದನ್ನು ನಮ್ಮಲ್ಲಿ ಹಂಚಿಕೊಂಡಾಗ ಅದರಲ್ಲಿ ಸಿಗುವ ಸಂತೃಪ್ತಿ ಬೇರೆ ಯಾವುದರಲ್ಲೂ ಸಿಗಲ್ಲ ಎಂದರು.
ಹತ್ತನೇ ತರಗತಿಯ ವಿದ್ಯಾರ್ಥಿಗಳು ಜಿ ಎಮ್ ನಲ್ಲಿ ಕಳೆದ ಅಮೋಘ ಕ್ಷಣಗಳನ್ನು ಭಾವನಾತ್ಮಕವಾಗಿ ಹಂಚಿಕೊಂಡರು. ಶಾಲೆಯ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳ ಕೈಪಿಡಿ, ವಾರ್ಷಿಕ ಸಂಚಿಕೆ ಜಿ ಎಮ್ ಪರಿಕ್ರಮ ಮತ್ತು ಜಿ ಎಮ್ ಟೈಮ್ಸ್ ಪತ್ರಿಕೆ ಎಲ್ಲರ ಸಮ್ಮುಖದಲ್ಲಿ ಮುಖ್ಯ ಅತಿಥಿಗಳ ಅಮೃತ ಹಸ್ತದಿಂದ ಬಿಡುಗಡೆಗೊಂಡಿತು. ಅತ್ಯಾಕರ್ಷಕ ವಸ್ತ್ರ ವಿನ್ಯಾಸದೊಂದಿಗೆ ಆಗಮಿಸಿದ ವಿದ್ಯಾರ್ಥಿಗಳು ಅಂತಿಮವಾಗಿ ಜಿ ಎಮ್ ಒಳಾಂಗಣದಲ್ಲಿ ಕೇಕನ್ನು ಕತ್ತರಿಸಿ ನೃತ್ಯವನ್ನು ಮಾಡುವುದರ ಮೂಲಕ ಅಮೂಲ್ಯ ಕ್ಷಣಗಳನ್ನು ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.